ಗುರುವಾರ , ಜೂಲೈ 2, 2020
28 °C

ಕೊಹ್ಲಿ ವಿರುದ್ಧ ಆಡುವುದನ್ನು ಇಷ್ಟಪಡುತ್ತೇನೆ ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಂಡನ್‌: ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಆಡುವುದನ್ನು ಇಷ್ಟಪಡುತ್ತೇನೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಇಯಾನ್‌ ಬಾಥಮ್ ಹೇಳಿದ್ದಾರೆ.

ಪ್ಲೇವ್ರೈಟ್‌ ಫೌಂಡೇಚನ್‌ ಆಯೋಜಿಸಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಇಯಾನ್‌, ‘ವಿರಾಟ್,‌ ಆಟವನ್ನು ಸಕಾರಾತ್ಮಕವಾಗಿ ಕೊಂಡೊಯ್ಯುತ್ತಾರೆ. ಅವರು ಆಟಗಾರರ ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ. ವಿರಾಟ್‌ ವಿರುದ್ಧ ಆಡಲು ಬಯಸುತ್ತೇನೆ. ಭಾರತ ಕ್ರಿಕೆಟ್‌ ಅನ್ನು ಮುನ್ನಡೆಸಲು ಅವರೇ ಸರಿಯಾದ ವ್ಯಕ್ತಿ’ ಎಂದು ಹೇಳಿದ್ದಾರೆ.

ಇದುವರೆಗೆ ‭415‬ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ವಿರಾಟ್,‌ ಒಟ್ಟು 70 ಶತಕ ಸಿಡಿಸಿದ್ದಾರೆ. ಆ ಮೂಲಕ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 21,901 ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ.‬

ಆಂಗ್ಲ ಪಡೆಯ ಶ್ರೇಷ್ಠ ಆಲ್ರೌಂಡರ್‌ ಆಗಿದ್ದ ಇಯಾನ್‌, ಸದ್ಯ ಕ್ರಿಕೆಟ್‌ನಲ್ಲಿ ಸಾಕಷ್ಟು ಆಲ್ರೌಂಡರ್‌ಗಳ ಕೊರತೆ ಇದೆ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ತಿಳಿಸಿರುವ ಅವರು, ’ಆಲ್‌ರೌಂಡರ್‌ಗಳನ್ನು ನಿರ್ಮಿಸಲಾಗದು. ಅವರೇನು ಮರಗಳಲ್ಲಿ ಬೆಳೆಯುವುದಿಲ್ಲ. ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಅದರ ಪರಿಣಾಮ ದೇಹದ ಮೇಲೂ ಆಗುತ್ತದೆ. ಕಪಿಲ್‌ ದೇವ್‌ ಭಾರತದ ಪಿಚ್‌ಗಳಲ್ಲಿ, ಅದೂ ಚೆನ್ನೈ ಮತ್ತು ದೆಹಲಿಯಂತ ಉರಿಬಿಸಿಲಿನ ‍ಪಿಚ್‌ಗಳಲ್ಲಿ ಮಾಡಿದ ಬೌಲಿಂಗ್‌ ಪ್ರಮಾಣದ ಬಗ್ಗೆ ಸುಮ್ಮನೆ ಕಲ್ಪಿಸಿಕೊಳ್ಳಿ. ಸದ್ಯದ ಸಂದರ್ಭದಲ್ಲಿ ಅಂತಹ ಯಾರೊಬ್ಬರನ್ನೂ ಕಾಣಲು ಸಾಧ್ಯವಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

1977ರಿಂದ 1992ರ ವರೆಗೆ ಇಂಗ್ಲೆಂಡ್‌ ಪರ ಆಡಿದ್ದ ಇಯಾನ್‌, 102 ಟೆಸ್ಟ್‌ ಮತ್ತು 116 ಏಕದಿನ ಪಂದ್ಯ ಆಡಿದ್ದಾರೆ. ಟೆಸ್ಟ್‌ನಲ್ಲಿ 5,200 ರನ್ ಮತ್ತು 383 ವಿಕೆಟ್‌ ಪಡೆದಿದ್ದು, ಏಕದಿನ ಕ್ರಿಕೆಟ್‌ನಲ್ಲಿ 2,113 ರನ್‌ ಮತ್ತು 145 ವಿಕೆಟ್‌ ಕಬಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು