ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ವಿಶ್ವಕಪ್ ಕ್ರಿಕೆಟ್ ಫೈನಲ್ ಇಂದು: ಮಹಿಳಾ ದಿನಕ್ಕೆ ಮೆರುಗು ತುಂಬುವ ಛಲ

ಭಾರತಕ್ಕೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸವಾಲು
Last Updated 7 ಮಾರ್ಚ್ 2020, 19:54 IST
ಅಕ್ಷರ ಗಾತ್ರ
ADVERTISEMENT
""

ಮೆಲ್ಬರ್ನ್: ಭಾನುವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿರುವ ಮಹಿಳಾ ದಿನವು ಭಾರತದ ಕ್ರಿಕೆಟ್‌ಪ್ರಿಯರಿಗೆ ವಿಶೇಷವಾಗಲಿದೆ.

ಭಾರತದ ಮಹಿಳಾ ಕ್ರಿಕೆಟ್‌ ತಂಡವು ಇದೇ ಮೊದಲ ಬಾರಿಗೆ ವನಿತೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆಡಲು ಕಣಕ್ಕಿಳಿಯಲಿದೆ. ನಾಲ್ಕು ಬಾರಿಯ ಚಾಂಪಿಯನ್, ಆತಿಥೇಯ ಆಸ್ಟ್ರೇಲಿಯಾ ತಂಡದ ಎದುರು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ.

ಹೋದ ಸಲದ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತವು ಈ ಬಾರಿ ಎ ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿತ್ತು. ಇಂಗ್ಲೆಂಡ್ ಜೊತೆ ಆಡಲು ಸಿದ್ಧವಾಗಿತ್ತು. ಆದರೆ ಮಳೆ ಸುರಿದ ಕಾರಣ ಪಂದ್ಯ ರದ್ದಾಯಿತು. ಹರ್ಮನ್‌ಪ್ರೀತ್ ಕೌರ್ ಬಳಗವು ಗುಂಪು ಹಂತದ ಪಾಯಿಂಟ್ಸ್‌ ಆಧಾರದಲ್ಲಿ ಫೈನಲ್ ಪ್ರವೇಶಿಸಿತು.

ಇನ್ನೊಂದು ಸೆಮಿಯಲ್ಲಿ ದಕ್ಷಿಣ ಆಫ್ರಿಕಾದ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ಆರನೇ ಸಲ ಫೈನಲ್‌ಗೆ ಲಗ್ಗೆ ಇಟ್ಟಿತು.

ಗುಂಪು ಹಂತದ ಮೊದಲ ಪಂದ್ಯದಲ್ಲಿ ಮೆಗ್‌ ಲ್ಯಾನಿಂಗ್ ಬಳಗಕ್ಕೆ ಭಾರತವು ಸೋಲಿನ ಬರೆ ಹಾಕಿತ್ತು. ಇದರಿಂದಾಗಿ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿರುವ ಆಸ್ಟ್ರೇಲಿಯಾದ ಎದುರು ಜಯಿಸಲು ವಿಶೇಷ ಯೋಜನೆ ಹೆಣೆಯುವ ಸವಾಲು ಭಾರತ ತಂಡದ ಕೋಚ್ ಡಬ್ಲ್ಯು.ವಿ. ರಾಮನ್ ಮುಂದಿದೆ.

ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಚಿಂತೆ ಇಲ್ಲ. ಸ್ಪಿನ್ನರ್‌ ಪೂನಂ ಯಾದವ್ ಅವರ ಭಯ ಆಸ್ಟ್ರೇಲಿಯಾ ತಂಡಕ್ಕೆ ಇದೆ. ಅದಕ್ಕಾಗಿಯೇ ಅದರ ಆಟಗಾರ್ತಿಯರು ಶನಿವಾರ ನೆಟ್ಸ್‌ನಲ್ಲಿ ನಿಧಾನಗತಿಯ ಲೆಗ್‌ಸ್ಪಿನ್ ಎಸೆತಗಳನ್ನು ಎದುರಿಸುವ ಅಭ್ಯಾಸವನ್ನೇ ಹೆಚ್ಚು ಹೊತ್ತು ಮಾಡಿದರು. ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕವಾಡ್ ಅವರ ಸ್ಪಿನ್ ಎಸೆತಗಳೂ ಕೂಡ ಪಂದ್ಯದ ಪ್ರಮುಖ ಹಂತದಲ್ಲಿ ತಂಡಕ್ಕೆ ಬ್ರೇಕ್ ನೀಡುವ ಸಾಮರ್ಥ್ಯ ಹೊಂದಿವೆ. ಮಧ್ಯಮವೇಗಿಗಳಾದ ದೀಪ್ತಿ ಶರ್ಮಾ ಮತ್ತು ಶಿಖಾ ಪಾಂಡೆ ಕೂಡ ಎದುರಾಳಿಗಳಿಗೆ ಸವಾಲೊಡ್ಡುವ ಚಾಣಾಕ್ಷ ಬೌಲರ್‌ಗಳಾಗಿದ್ದಾರೆ.

ಆದರೆ, ನಿಜಕ್ಕೂ ಚಿಂತೆ ಇರುವುದು ಬ್ಯಾಟಿಂಗ್‌ ವಿಭಾಗದಲ್ಲಿ. ಅನುಭವಿಗಳಾದ ಸ್ಮೃತಿ ಮಂದಾನ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟ್‌ನಿಂದ ರನ್‌ಗಳು ಹರಿಯುತ್ತಿಲ್ಲ. ಸ್ಮೃತಿ ಮೂರು ಪಂದ್ಯಗಳಿಂದ ಕೇವಲ 38 ರನ್‌ ಗಳಿಸಿದ್ದಾರೆ. ಹರ್ಮನ್ ನಾಲ್ಕು ಪಂದ್ಯಗಳಿಂದ ಒಟ್ಟು 26 ರನ್‌ಗಳನ್ನು ಮಾತ್ರ ಸೇರಿಸಿದ್ದಾರೆ. ಆದರೆ, 16 ವರ್ಷದ ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಅವರು ಉತ್ತಮ ಲಯದಲ್ಲಿರುವುದರಿಂದ ತಂಡವು ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಗುತ್ತಿದೆ.

ಇಲ್ಲಿಯ ಸಪಾಟಾದ ಪಿಚ್‌ನಲ್ಲಿ ಹೆಚ್ಚು ರನ್‌ಗಳನ್ನು ಗಳಿಸುವ ಅವಕಾಶ ಇದೆ. ಆದ್ದರಿಂದ ಬೌಲರ್‌ಗಳಿಗೆ ದೊಡ್ಡ ಸವಾಲಾಗುವುದು ಖಚಿತ. ಅಲ್ಲದೇ ಮಧ್ಯಮವೇಗಿಗಳಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇರುವುದರಿಂದ ಭಾರತದ ಬ್ಯಾಟ್ಸ್‌ವುಮನ್‌ಗಳು ಲಯಕ್ಕೆ ಮರಳುವ ಅಗತ್ಯವಿದೆ. ಸುಮಾರು 90 ಸಾವಿರ ಪ್ರೇಕ್ಷಕರು ಸೇರುವ ನಿರೀಕ್ಷೆ ಇದ್ದು, ಏಕಾಗ್ರತೆಯನ್ನು ಕಾಪಾಡಿಕೊಂಡು ಆಡುವ ಸವಾಲು ಉಭಯ ತಂಡಗಳಿಗೂ ಇದೆ.

*
ಫೈನಲ್ ಪಂದ್ಯಕ್ಕೆ ಬಹಳ ಜನರು ಸೇರುತ್ತಾರೆಂಬ ನಿರೀಕ್ಷೆ ವ್ಯಕ್ತವಾಗಿವೆ. ಆದರೆ ಆಟದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದೇ ನಮ್ಮ ಗುರಿಯಾಗಿದೆ.
-ಮೆಗ್‌ಲ್ಯಾನಿಂಗ್, ಆಸ್ಟ್ರೇಲಿಯಾ ನಾಯಕಿ

*
ಫೈನಲ್‌ನಲ್ಲಿ 90 ಸಾವಿರ ಜನರು ಸೇರಲಿದ್ದಾರಂತೆ ಇದೊಂದು ವಿಶೇಷ ಅನುಭವವಾಗಲಿದೆ. ಆ ಕ್ಷಣಗಳನ್ನು ಮನಸಾರೆ ಆಸ್ವಾದಿಸುತ್ತೇವೆ. ನಮ್ಮ ಜೀವನದ ಅತ್ಯಂದ ದೊಡ್ಡ ಸಂದರ್ಭ ಇದಾಗಲಿದೆ.
–ಹರ್ಮನ್‌ಪ್ರೀತ್ ಕೌರ್, ಭಾರತ ತಂಡದ ನಾಯಕಿ

*

ಮೊದಲ ಪಂದ್ಯದಲ್ಲಿ ನನ್ನ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್‌ ಕೊಟ್ಟಿದ್ದೆ. ಆಗ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಂದು ಹೇಳಿದ ಮಾತುಗಳು ಆತ್ಮವಿಶ್ವಾಸ ಹೆಚ್ಚಿಸಿತು. ಯಶಸ್ಸು ಸಾಧಿಸಿದೆ.
–ಪೂನಂ ಯಾದವ್,ಭಾರತ ತಂಡದ ಬೌಲರ್

ತಂಡಗಳು ಇಂತಿವೆ:

ಭಾರತ:ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಹರ್ಲೀನ್‌ ಡಿಯೋಲ್‌, ರಾಜೇಶ್ವರಿ ಗಾಯಕವಾಡ್‌, ರಿಚಾ ಘೋಷ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನಾ, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್‌, ಶಫಾಲಿ ವರ್ಮಾ, ಪೂನಂ ಯಾದವ್‌, ರಾಧಾ ಯಾದವ್‌.

ಆಸ್ಟ್ರೇಲಿಯಾ:ಮೆಗ್‌ ಲ್ಯಾನಿಂಗ್‌ (ನಾಯಕಿ),ಎರಿನ್‌ ಬರ್ನ್ಸ್‌, ನಿಕೋಲಾ ಕ್ಯಾರೆ, ಆ್ಯಶ್ಲೆ ಗಾರ್ಡನರ್‌, ರಚೆಲ್‌ ಹೇಯ್ನ್ಸ್‌ (ಉಪ ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್‌ ಕೀಪರ್‌), ಜೆಸ್‌ ಜೊನಾಸ್ಸೆನ್‌, ಡೆಲಿಸ್ಸಾ ಕಿಮಿನ್ಸ್‌, ಸೋಫಿ ಮೊಲಿನೀಕ್ಸ್‌, ಬೆತ್‌ ಮೂನಿ, ಎಲಿಸ್‌ ಪೆರಿ, ಮೇಗನ್‌ ಶುಟ್‌, ಅನ್ನಾಬೆಲ್‌ ಸದರ್‌ಲ್ಯಾಂಡ್‌, ಮೋಲಿ ಸ್ಟ್ರಾನೊ, ಜಾರ್ಜಿಯಾ ವೇರ್‌ಹ್ಯಾಮ್‌.ಪಂದ್ಯ ಆರಂಭ: ಮಧ್ಯಾಹ್ನ 12.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT