ಗುರುವಾರ , ಜುಲೈ 16, 2020
24 °C
ರಾಧಾ ಯಾದವ್ ಸ್ಪಿನ್ ಬಲೆ; ಮತ್ತೆ ಮಿಂಚಿದ ಶಫಾಲಿ ವರ್ಮಾ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ಎಡಗೈ ಸ್ಪಿನ್ನರ್ ರಾಧಾ ಯಾಧವ್ ಮೋಡಿ ಮಾಡಿ ಎದುರಾಳಿಗಳ ಬ್ಯಾಟಿಂಗ್‌ ಲೈನ್ ಅಪ್ ಛಿದ್ರ ಮಾಡಿದರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಇವರಿಬ್ಬರ ಅಮೋಘ ಆಟದ ಫಲವಾಗಿ ಭಾರತ ತಂಡ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

ಶ್ರೀಲಂಕಾ ಮಹಿಳೆಯರ ಎದುರು ಶನಿವಾರ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಗೆಲುವು ದಾಖಲಿಸಿಕೊಂಡಿತು. ಇದು ತಂಡದ ಸತತ ನಾಲ್ಕನೇ ಜಯವಾಗಿದೆ. ತಂಡ ‘ಎ’ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ.‌

ಮೊದಲ ಮೂರು ಪಂದ್ಯಗಳ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಎದುರಿನ ಕೊನೆಯ ಲೀಗ್‌ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ರಾಧಾ ಯಾದವ್, 23 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರು. ಇದರಲ್ಲಿ ನಾಯಕಿ ಚಾಮರಿ ಅಟಪಟ್ಟು ವಿಕೆಟ್ ಕೂಡ ಸೇರಿದೆ. ಗುರಿ ಬೆನ್ನತ್ತಿದ ಭಾರತದ ಪರ ಶಫಾಲಿ 34 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಏಳು ಬೌಂಡರಿ ಒಳಗೊಂಡ 47 ರನ್ ಗಳಿಸಿದರು. ಹೀಗಾಗಿ ಭಾರತಕ್ಕೆ 15ನೇ ಓವರ್‌ನಲ್ಲೇ ಜಯ ಒಲಿಯಿತು.

ಎರಡು ಮತ್ತು ನಾಲ್ಕನೇ ಓವರ್‌ಗಳಲ್ಲಿ ಲಂಕಾ ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲಿ ಶಫಾಲಿ ವರ್ಮಾಗೆ ಜೀವದಾನ ನೀಡಿದರು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಶಫಾಲಿ ಅಮೋಘ ಬ್ಯಾಟಿಂಗ್ ಮೂಲಕ ರಂಜಿಸಿದರು. ಆದರೆ 11ನೇ ಓವರ್‌ನಲ್ಲಿ ರನ್ ಔಟ್‌ ಆದರು. ಈ ಮೂಲಕ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಅವರು 47 ರನ್ ಗಳಿಸಿದ್ದರು.

ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಲ್ಲೂ ನೀರಸ ಆಟ ಆಡಿದರು. ಮಂದಾನ ಐದನೇ ಓವರ್‌ನಲ್ಲಿ ಕವಿಶಾ ದಿಲ್ಹಾರಿ ಎಸೆತವನ್ನು ಎದುರಿಸುವಲ್ಲಿ ಎಡವಿದರು. ಭರ್ಜರಿ ಹೊಡೆತಕ್ಕೆ ಕೈ ಹಾಕಿದ ನಾಯಕಿ ಲಾಂಗ್ ಆನ್ ಫೀಲ್ಡರ್‌ಗೆ ಕ್ಯಾಚ್ ನೀಡಿದರು. 88 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಜೊತೆಯಾದ ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ನಿರಾಯಾಸವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ನಾಯಕಿಯ ಏಕಾಂಗಿ ಹೋರಾಟ: ಮೂರನೇ ಓವರ್‌ನಲ್ಲೇ ಮೊದಲ ವಿಕೆಟ್ ಕಳೆದುಕೊಂಡ ಶ್ರೀಲಂಕಾಕ್ಕೆ ನಂತರ ಚೇತರಿಸಿಕೊಳ್ಳಲಾಗಲಿಲ್ಲ. ಆದರೆ ನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಚಾಮರಿ ಅಟ್ಟಪಟ್ಟು ಏಕಾಂಗಿ ಹೋರಾಟ ನಡೆಸಿ 33 ರನ್‌ (24 ಎಸೆತ; 1 ಸಿಕ್ಸರ್, 5 ಬೌಂಡರಿ) ಕಲೆ ಹಾಕಿದರು. ಹರ್ಷಿತಾ ಮಾಧವಿ ಜೊತೆ 30 ರನ್‌ ಸೇರಿಸಿದರು. ಕೊನೆಯ ಓವರ್‌ಗಳಲ್ಲಿ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ 25 ರನ್‌ ಸಿಡಿಸಿ ಮೊತ್ತವನ್ನು ಮೂರಂಕಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 9ಕ್ಕೆ 113 (ಚಾಮರಿ ಅಟ್ಟಪಟ್ಟು 33, ಹರ್ಷಿತಾ ಮಾಧವಿ 12, ಶಶಿಕಲಾ ಸಿರಿವರ್ಧನೆ 13, ಕವಿಶಾ ದಿಲ್ಹಾರಿ ಔಟಾಗದೆ 25; ದೀಪ್ತಿ ಶರ್ಮಾ 16ಕ್ಕೆ1, ಶಿಖಾ ಪಾಂಡೆ 35ಕ್ಕೆ1, ರಾಜೇಶ್ವರಿ ಗಾಯಕವಾಡ್ 18ಕ್ಕೆ2, ಪೂನಂ ಯಾದವ್ 20ಕ್ಕೆ1, ರಾಧಾ ಯಾಧವ್ 23ಕ್ಕೆ4); ಭಾರತ: 14.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 116 (ಶಫಾಲಿ ವರ್ಮಾ 47, ಸ್ಮೃತಿ ಮಂದಾನ 17, ಹರ್ಮನ್‌ಪ್ರೀತ್‌ ಕೌರ್ 15, ಜೆಮಿಮಾ ರಾಡ್ರಿಗಸ್ 15, ದೀಪ್ತಿ ಶರ್ಮಾ 15; ಉದೇಶಿಕ ಪ್ರಬೋಧಿನಿ 13ಕ್ಕೆ1, ಶಶಿಕಲಾ ಸಿರಿವರ್ಧನೆ 42ಕ್ಕೆ1).

ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಜಯ. ಭಾರತದ ಮುಂದಿನ ಪಂದ್ಯ (ಸೆಮಿಫೈನಲ್): ಮಾರ್ಚ್ 5ರಂದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು