ಭಾನುವಾರ, ಜೂನ್ 26, 2022
22 °C

ICC Womens World Cup: ಆಫ್ರಿಕಾ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ಸೆಮಿ ಟಿಕೆಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಆದರೆ, ಇನ್ನೆರಡು ಸ್ಥಾನಕ್ಕಾಗಿ ಭಾರತ, ಇಂಗ್ಲೆಂಡ್ ಮತ್ತು ವೆಸ್ಟ್‌ ಇಂಡೀಸ್ ನಡುವೆ ಪೈಪೋಟಿ ಆರಂಭವಾಗಿದೆ.

ಪಾಕ್‌ ಎದುರು ಗೆದ್ದು ಅಂಕ ಪಟ್ಟಿಯಲ್ಲಿ ಮೇಲೇರಿದ ಇಂಗ್ಲೆಂಡ್
ಪಾಕಿಸ್ತಾನ ವಿರುದ್ಧ ಇಂದು (ಗುರುವಾರ) ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್‌ ಅಂತರದ ಸುಲಭ ಗೆಲುವು ಸಾಧಿಸಿದೆ. ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕ್, ಕೇವಲ 105 ರನ್‌ ಗಳಿಗೆ ಸರ್ವಪತನ ಕಂಡಿತು.

ಈ ಗುರಿ ಆಂಗ್ಲರಿಗೆ ಸವಾಲೇ ಆಗಲಿಲ್ಲ. ಹೀದರ್ ನೈಟ್‌ ಪಡೆ, ಇನ್ನೂ 30.4 ಓವರ್‌ಗಳು ಬಾಕಿ ಇರುವಂತೆಯೇ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ಭಾರತ ತಂಡವನ್ನು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಳ್ಳಿ, ನಾಲ್ಕನೇ ಸ್ಥಾನಕ್ಕೇರಿದೆ.

ಪಂದ್ಯ ರದ್ದು; ದಕ್ಷಿಣ ಆಫ್ರಿಕಾ ಸೆಮಿಗೆ
ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ನಡುವೆ ಇಂದು ಆಯೋಜನೆಗೊಂಡಿದ್ದ ಮತ್ತೊಂದು ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ.

ಪಂದ್ಯಕ್ಕೂ ಮೊದಲು 4 ಜಯದೊಂದಿಗೆ 8 ಅಂಕಗಳನ್ನು ಹೊಂದಿದ್ದ ಆಫ್ರಿಕಾ ತಂಡ, ಇಲ್ಲಿ ಮತ್ತೊಂದು ಅಂಕ ಗಳಿಸಿ ಸೆಮಿಫೈನಲ್ ಸ್ಥಾನ ಖಾತ್ರಿ ಪಡಿಸಿಕೊಂಡಿತು. ಆದರೆ, ವೆಸ್ಟ್‌ ಇಂಡೀಸ್‌ ಪರಿಸ್ಥಿತಿ ಭಿನ್ನವಾಗಿದೆ. ವಿಂಡೀಸ್‌ ಮೂರು ಜಯದೊಂದಿಗೆ ಒಟ್ಟು 7 ಅಂಕಗಳನ್ನು ಸಂಪಾದಿಸಿ, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ 'ಸೆಮಿ' ಸ್ಥಾನ ಇನ್ನೂ ಖಚಿತವಾಗಿಲ್ಲ. ಉಳಿದ ಪಂದ್ಯಗಳ ಫಲಿತಾಂಶಗಳು ಅದನ್ನು ನಿರ್ಧರಿಸಲಿವೆ.

ಸೆಮಿ ಫೈನಲ್ ಲೆಕ್ಕಾಚಾರ
ಆಡಿರುವ ಆರು ಪಂದ್ಯಗಳಿಂದ ಕೇವಲ 2 ಜಯ ಸಾಧಿಸಿರುವ ನ್ಯೂಜಿಲೆಂಡ್ ಮತ್ತು ತಲಾ ಒಂದೊಂದು ಗೆಲುವು ಕಂಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿವೆ.

ಆಡಿರುವ ಆರೂ ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿರುವ ಆಸ್ಟ್ರೇಲಿಯಾ ಮತ್ತು 4 ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ಈಗಾಗಲೇ ನಾಲ್ಕರ ಘಟಕ್ಕೆ ಪ್ರವೇಶಿಸಿವೆ. ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಗಳು ಯಾವುವು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕು.

ಸದ್ಯ ವೆಸ್ಟ್‌ ಇಂಡೀಸ್, ಇಂಗ್ಲೆಂಡ್ ಮತ್ತು ಭಾರತ ಅಂಕಪಟ್ಟಿಯಲ್ಲಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿವೆ. ವಿಂಡೀಸ್‌ ಬಳಿ 7 ಮತ್ತು ಇಂಗ್ಲೆಂಡ್, ಭಾರತ ಖಾತೆಯಲ್ಲಿ ತಲಾ 6 ಪಾಯಿಂಟ್‌ಗಳಿವೆ.

ವಿಂಡೀಸ್‌ ತನ್ನ ಪಾಲಿನ ಎಲ್ಲ ಪಂದ್ಯಗಳನ್ನೂ ಆಡಿದೆ. ಭಾರತ ಮತ್ತು ಇಂಗ್ಲೆಂಡ್‌ಗೆ ಇನ್ನೂ ಒಂದೊಂದು ಪಂದ್ಯ ಬಾಕಿ ಇದ್ದು ಮೇಲೇರುವ ಅವಕಾಶ ಇದೆ. ಹೀಗಾಗಿ ಈ (ಭಾರತ ಮತ್ತು ಇಂಗ್ಲೆಂಡ್) ತಂಡಗಳು ವಿಂಡೀಸ್ ಭವಿಷ್ಯ ಬರೆಯಲಿವೆ.

ಭಾರತ ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಇಂಗ್ಲೆಂಡ್‌, ಬಾಂಗ್ಲಾ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್‌ ಗೆಲುವು ಸಾಧಿಸಿದರೆ ಮುಂದಿನ ಸುತ್ತು ಪ್ರವೇಶಿಸಲಿವೆ. ವಿಂಡೀಸ್‌ ಹೊರಬೀಳುತ್ತದೆ.

ಒಂದುವೇಳೆ ಭಾರತ ಮತ್ತು ಇಂಗ್ಲೆಂಡ್‌ ಎರಡೂ ತಂಡಗಳು ಸೋಲು ಕಂಡರೆ, ವಿಂಡೀಸ್‌ ಮೂರನೇ ಸ್ಥಾನದಲ್ಲಿ ಉಳಿಯಲಿದ್ದು, ಮುಂದಿನ ಹಂತಕ್ಕೇರುವ ಅವಕಾಶ ಸಿಗಲಿದೆ. ರನ್‌ ರೇಟ್ ಆಧಾರದ ಮೇಲೆ ಭಾರತ ಅಥವಾ ಇಂಗ್ಲೆಂಡ್ ತಂಡಗಳ ಭವಿಷ್ಯ ನಿರ್ಧಾರವಾಗುತ್ತದೆ. ಅಥವಾ, ಈ ಎರಡರಲ್ಲಿ (ಭಾರತ ಅಥವಾ ಇಂಗ್ಲೆಂಡ್) ಒಂದು ತಂಡ ಸೋತರೂ, ಗೆದ್ದ ತಂಡದೊಂದಿಗೆ ವಿಂಡೀಸ್‌ ಸೆಮಿಫೈನಲ್ ಟಿಕೆಟ್ ಗಿಟ್ಟಿಸಲಿದೆ.

ಪಾಯಿಂಟ್ ಪಟ್ಟಿ


ತಂಡ ಆಡಿರುವ ಪಂದ್ಯಜಯ ಸೋಲು ಪಾಯಿಂಟ್ಸ್‌ ರನ್‌ರೇಟ್
ಆಸ್ಟ್ರೇಲಿಯಾ 660
12
+1.287
ದಕ್ಷಿಣ ಆಫ್ರಿಕಾ6419+0.092
ವೆಸ್ಟ್‌ ಇಂಡೀಸ್7337-0.890
ಇಂಗ್ಲೆಂಡ್ 6336+0.778
ಭಾರತ 6336+0.768
ನ್ಯೂಜಿಲೆಂಡ್ 6244-0.229
ಬಾಂಗ್ಲಾದೇಶ 5142-0.754
ಪಾಕಿಸ್ತಾನ 6152
-1.280 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು