WTC Final: ನಾಲ್ವರು ವೇಗಿಗಳ ಆಡಿಸುವುದಿದ್ದರೆ ಶಾರ್ದೂಲ್ ಸೂಕ್ತ – ಶರಣ್‌ದೀಪ್

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ನಾಲ್ವರು ವೇಗದ ಬೌಲರ್‌ಗಳನ್ನು ಆಡಿಸುವುದಿದ್ದರೆ ಮೊಹಮ್ಮದ್ ಸಿರಾಜ್ ಬದಲಿಗೆ ಶಾರ್ದೂಲ್ ಠಾಕೂರ್‌ರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಬಿಸಿಸಿಐ ಮಾಜಿ ಆಯ್ಕೆದಾರ ಶರಣ್‌ದೀಪ್ ಸಿಂಗ್ ಹೇಳಿದ್ದಾರೆ.
ಸೌತಾಂಪ್ಟನ್‌ನ ಮೋಡ ಕವಿದ ವಾತಾವರಣದಲ್ಲಿ ಶಾರ್ದೂಲ್ ಠಾಕೂರ್ ಪರಿಣಾಮಕಾರಿಯಾಗಿ ಆಡಬಲ್ಲರು. ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಶಾರ್ದೂಲ್ ಅವರಲ್ಲಿರುವ ಬ್ಯಾಟಿಂಗ್ ಸಾಮರ್ಥ್ಯವನ್ನೂ ಪರಿಗಣಿಸಿ ಅವರು ಈ ಸಲಹೆ ನೀಡಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ಬಳಿಕ ಆಯ್ಕೆದಾರನಾಗಿ ಅವರ ಅಧಿಕಾರಾವಧಿ ಮುಕ್ತಾಯಗೊಂಡಿತ್ತು.
ಓದಿ: ಶ್ರೀಲಂಕಾ ಪ್ರವಾಸ| ಭಾರತ ತಂಡಕ್ಕೆ ದೇವದತ್ತ: ಧವನ್ಗೆ ನಾಯಕತ್ವ
ಫೈನಲ್ ಪಂದ್ಯ ಜೂನ್ 18ರಿಂದ ನಡೆಯಲಿದೆ. ಭಾರತ ತಂಡವು ಮೂವರು ವೇಗಿಗಳು ಮತ್ತು ಸ್ಪಿನ್ ಜೋಡಿಯಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಮೋಡ ಕವಿದ ವಾತಾವರಣ ಇದ್ದರೆ ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಜತೆ ಹೆಚ್ಚುವರಿಯಾಗಿ ವೇಗಿಯೊಬ್ಬರನ್ನು ಆಡಿಸುವುದು ಸೂಕ್ತ. ಸಿರಾಜ್ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೂ ನನ್ನ ಆಯ್ಕೆ ಶಾರ್ದೂಲ್’ ಎಂದು ಶರಣ್‌ದೀಪ್ ಸಿಂಗ್ ಹೇಳಿದ್ದಾರೆ.
‘ಲೋವರ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಕೂಡಾ ಬೇಕಿದ್ದು ಶಾರ್ದೂಲ್ ಅದನ್ನು ನಿಭಾಯಿಸಬಲ್ಲರು. ಶಾರ್ದೂಲ್ ಚೆಂಡನ್ನು ಉತ್ತಮವಾಗಿ ಸ್ವಿಂಗ್ ಮಾಡಬಲ್ಲವರಾಗಿದ್ದು, ಸೌತಾಂಪ್ಟನ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ ಇರಿಸಬಹುದು. ದೇಶೀಯ ಕ್ರಿಕೆಟ್‌ನಲ್ಲಿ ಅವರಿಗೆ ಉತ್ತಮ ಅನುಭವವೂ ಇದ್ದು, ಕ್ರಿಕೆಟ್ ವಿಚಾರದಲ್ಲಿ ಅವರೊಬ್ಬ ಚುರುಕುಮತಿ’ ಎಂದು ಸಿಂಗ್ ಹೇಳಿದ್ದಾರೆ.
ಓದಿ: ಅಭ್ಯಾಸ ಕಣದಲ್ಲಿ ಭಾರತ ಕ್ರಿಕೆಟ್ ತಂಡ
‘ನಾಲ್ವರು ವೇಗಿಗಳನ್ನು ಆಡಿಸಿದರೆ ಜಡೇಜಾ ಅವರು ಹೊರಗುಳಿಯಬೇಕಾಗುತ್ತದೆ. ನ್ಯೂಜಿಲೆಂಡ್ ತಂಡದಲ್ಲಿ ಕೆಲವೇ ಕೆಲವು ಎಡಗೈ ಆಟಗಾರರು ಇರುವುದರಿಂದ ಅಶ್ವಿನ್ ಆಡಲೇಬೇಕಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.