ಮಂಗಳವಾರ, ಆಗಸ್ಟ್ 16, 2022
22 °C

IND vs AUS | ಮೊದಲ ದಿನದಾಟ: ವಿರಾಟ್ ಅರ್ಧಶತಕ; ಭಾರತ 6 ವಿಕೆಟ್‌ಗೆ 233 ರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ನ ಮೊದಲ ದಿನದಾಟ ಮುಕ್ತಾಯವಾಗಿದ್ದು, ಭಾರತ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 233 ರನ್‌ ಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ವಿರಾಟ್‌ ಕೊಹ್ಲಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಕನ್ನಡಿಗ ಮಯಂಕ್‌ ಅಗರವಾಲ್‌ ಜೊತೆ ಇನಿಂಗ್ಸ್ ಆರಂಭಿಸಿದ ಯುವ ಆಟಗಾರ ಪೃಥ್ವಿ ಶಾ (0) ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದರು. ಅಗರವಾಲ್‌ (17) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡಾಗ ತಂಡದ ಮೊತ್ತ ಕೇವಲ 33 ರನ್‌.

ಈ ವೇಳೆ ನಾಯಕನ ಆಟವಾಡಿದ ಕೊಹ್ಲಿ, ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ಚರ ಪೂಜಾರ (43) ಮತ್ತು ಉಪನಾಯಕ ಅಜಿಂಕ್ಯ ರಹಾನೆ (42) ಅವರೊಂದಿಗೆ ಮೂರು ಮತ್ತು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಕ್ರಮವಾಗಿ 78 ಮತ್ತು 88 ರನ್‌ ಕೂಡಿಸಿದರು.

180 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿ ಸಹಿತ 74 ರನ್ ಗಳಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ರನೌಟ್ ಆದರು. ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ರನೌಟ್‌ ಆದಂತಾಯಿತು.  

ಸದ್ಯ ವೃದ್ಧಿಮಾನ್‌ ಸಾಹ (9) ಮತ್ತು ರವಿಚಂದ್ರನ್‌ ಅಶ್ವಿನ್‌ (15) ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಪರ ವೇಗಿ ಮಿಚೇಲ್‌ ಸ್ಟಾರ್ಕ್‌ ಎರಡು ವಿಕೆಟ್‌ ಪಡೆದರೆ, ಜೋಶ್‌ ಹ್ಯಾಷಲ್‌ವುಡ್‌, ಪ್ಯಾಟ್‌ ಕಮಿನ್ಸ್‌ ಮತ್ತು ನಾಥನ್‌ ಲಯನ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು