ಶನಿವಾರ, ಫೆಬ್ರವರಿ 27, 2021
30 °C

IND vs AUS: ಟೀ ವಿರಾಮದ ವೇಳೆಗೆ ಆಸೀಸ್‌‌ಗೆ 276 ರನ್‌ಗಳ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಪ್ರವಾಸಿ ಭಾರತ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 33 ರನ್‌ಗಳ ಮಹತ್ವದ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮುಂದುವರಿಸಿರುವ ಆಸ್ಟ್ರೇಲಿಯಾ, ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಟೀ ವಿರಾಮದ ಹೊತ್ತಿಗೆ 66.1 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ. 

ಇದರೊಂದಿಗೆ ಒಟ್ಟು ಮುನ್ನಡೆಯನ್ನು 276 ರನ್‌ಗಳಿಗೆ ಏರಿಸಿದೆ. ಇದರೊಂದಿಗೆ ಪಂದ್ಯ ರೋಚಕ ಹಂತವನ್ನು ತಲುಪಿದೆ. ಆಸೀಸ್ ಆದಷ್ಟು ಬೇಗನೇ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿದ್ದು, ಪಂದ್ಯಕ್ಕೆ ಮಳೆಯ ಅಡಚಣೆ ಎದುರಾಗುವ ಭೀತಿ ಕಾಡುತ್ತಿದೆ. 

ವಿಕೆಟ್ ನಷ್ಟವಿಲ್ಲದೆ 21 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಆಸೀಸ್‌ಗೆ ಮಾರ್ನಸ್ ಹ್ಯಾರಿಸ್ ಹಾಗೂ ಡೇವಿಡ್ ವಾರ್ನರ್ ಆಕ್ರಮಣಕಾರಿ ಆರಂಭವೊದಗಿಸಿದರು. ಬೃಹತ್ ಮೊತ್ತ ಕಲೆ ಹಾಕಿ ಆದಷ್ಟು ಬೇಗ ಡಿಕ್ಲೇರ್ ಮಾಡುವುದು ಆಸೀಸ್ ಇರಾದೆಯಾಗಿತ್ತು. 

ಇದನ್ನೂ ಓದಿ: 

ಇವರಿಬ್ಬರು ಮೊದಲ ವಿಕೆಟ್‌ಗೆ 89 ರನ್‌ಗಳ ಜೊತೆಯಾಟ ನೀಡಿದರು. ಇದರೊಂದಿಗೆ ಸರಣಿಯಲ್ಲಿ ಮೊದಲ ಬಾರಿಗೆ ಆಸೀಸ್ ಆರಂಭಿಕರು ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಹ್ಯಾರಿಸ್ (38) ಹೊರದಬ್ಬಿದ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲೂ ಮಿಂಚಿದರು. 

ಇದಾದ ಬೆನ್ನಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ (48) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ವಾಷಿಂಗ್ಟನ್ ಸುಂದರ್ ಮಗದೊಂದು ಆಘಾತ ನೀಡಿದರು. 

ಬಳಿಕ ಒಂದೇ ಓವರ್‌ನಲ್ಲಿ ಮೊದಲ ಇನ್ನಿಂಗ್ಸ್‌ನ ಶತಕವೀರ ಮಾರ್ನಸ್ ಲಾಬುಷೇನ್ (25) ಹಾಗೂ ಮ್ಯಾಥ್ಯೂ ವೇಡ್ (0) ಹೊರದಬ್ಬಿದ ಮೊಹಮ್ಮದ್ ಸಿರಾಜ್ ಡಬಲ್ ಆಘಾತ ನೀಡಿದರು. ಇದರಿಂದ 123 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್ ರನ್ ರೇಟ್ ಕುಂಠಿತವಾಯಿತು.  

ಊಟದ ವಿರಾಮದ ಹೊತ್ತಿಗೆ ಆಸೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಮಗದೊಂದು ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸ್ಟೀವನ್ ಸ್ಮಿತ್ ಅರ್ಧಸತಕ ಸಾಧನೆ ಮಾಡಿದರು. ಇವರಿಗೆ ಕ್ಯಾಮರಾನ್ ಗ್ರೀನ್ (4*) ಸಾಥ್ ನೀಡಿದರು. 

ಈ ಮಧ್ಯೆ ಸ್ಮಿತ್ ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಇದರೊಂದಿಗೆ 196 ರನ್ನಿಗೆ ಆಸೀಸ್ ಐದನೇ ವಿಕೆಟ್ ಪತನಗೊಂಡಿತು. 

ಕ್ಯಾಮರಾನ್ ಗ್ರೀನ್ (37) ಹಾಗೂ ನಾಯಕ ಟಿಮ್ ಪೇನ್ (27) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರೂ ಇವರಿಬ್ಬರನ್ನು ಶಾರ್ದೂಲ್ ಠಾಕೂರ್ ಹೊರದಬ್ಬಿದರು. ಇದರೊಂದಿಗೆ 242 ರನ್ನಿಗೆ ಏಳನೇ ವಿಕೆಟ್ ಕಳೆದುಕೊಂಡಿತು. 

ಇದನ್ನೂ ಓದಿ: 

ಈ ಮೊದಲು ಆಸೀಸ್‌ನ 369 ರನ್‌ಗಳಿಗೆ ಉತ್ತರವಾಗಿ ದಿಟ್ಟ ಹೋರಾಟ ತೋರಿದ ವಾಷಿಂಗ್ಟನ್ ಸುಂದರ್ (62) ಹಾಗೂ ಶಾರ್ದೂಲ್ ಠಾಕೂರ್ (67) ಚೊಚ್ಚಲ ಅರ್ಧಶತಕದ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 336 ರನ್ ಪೇರಿಸಿತ್ತು. ಆಸೀಸ್ ಪರ ಜೋಶ್ ಹ್ಯಾಜಲ್‌ವುಡ್ ಐದು ವಿಕೆಟ್ ಕಬಳಿಸಿದ್ದರು.  

ಮಾರ್ನಸ್ ಲಾಬುಷೇನ್ ಶತಕ(108) ಹಾಗೂ ನಾಯಕ ಟಿಮ್ ಪೇನ್ ಅರ್ಧಶತಕದ (50) ಬೆಂಬಲದೊಂದಿಗೆ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತ್ತು. ಪದಾರ್ಪಣಾ ಆಟಗಾರ ವಾಷಿಂಗ್ಟನ್ ಸುಂದರ್, ತಂಗರಸು ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು