ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಶರ್ಮಾ ಫಿಟ್; ಆಸೀಸ್ ವಿಮಾನವನ್ನೇರಲಿರುವ 'ಹಿಟ್‌ಮ್ಯಾನ್'

Last Updated 11 ಡಿಸೆಂಬರ್ 2020, 8:59 IST
ಅಕ್ಷರ ಗಾತ್ರ

ನವದೆಹಲಿ: 'ಹಿಟ್‌ಮ್ಯಾನ್' ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಬಲಗೈ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಫಿಟ್ನೆಸ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ. ಇದರಿಂದ ಟೀಮ್ ಇಂಡಿಯಾಗೆ ಆನೆ ಬಲ ಬಂದಂತಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ, ಸ್ನಾಯು ಸೆಳೆತಕ್ಕೊಳಗಾಗಿದ್ದರು. ಬಳಿಕ ನವೆಂಬರ್ 19ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಖಿರದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಆಸೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ಅಲಭ್ಯವಾಗಿದ್ದರು. ಈಗ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲಗಳ ಪ್ರಕಾರ, ರೋಹಿತ್ ಶರ್ಮಾ ಡಿಸೆಂಬರ್ 14ರಂದು ಆಸೀಸ್ ವಿಮಾನವನ್ನೇರಲಿದ್ದಾರೆ. ಭಾರತ ಹಾಗೂ ಆಸೀಸ್ ನಡುವಣ ಟೆಸ್ಟ್ ಸರಣಿಯು ಡಿಸೆಂಬರ್ 17ರಂದು ಆರಂಭವಾಗಲಿದೆ.

ಆಸ್ಟ್ರೇಲಿಯಾ ಸರಕಾರ ಕೋವಿಡ್ ನಿಯಮಗಳ ಪ್ರಕಾರ, ರೋಹಿತ್ ಶರ್ಮಾ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಹೊಸ ವರ್ಷದಲ್ಲಿ ನಡೆಯಲಿರುವ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗಷ್ಟೇ ಲಭ್ಯವಾಗಲಿದ್ದಾರೆ.

ಈ ಎರಡು ಪಂದ್ಯಗಳು ಅನುಕ್ರಮವಾಗಿ ಸಿಡ್ನಿ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಹಾಗಾಗಿ ನೇರವಾಗಿ ಸಿಡ್ನಿಗೆ ತೆರಳಲಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡುವ ಮುನ್ನ ಒಂದು ವಾರದ ಮ್ಯಾಚ್ ಪ್ರಾಕ್ಟಿಸ್ ಪಡೆಯಲಿದ್ದಾರೆ.

ಈ ಮೊದಲು ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಸ್ಪಷ್ಟತೆಯಿಲ್ಲ, ಗೊಂದಲವಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈಗ ಕೊನೆಯ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅನುಭವ ಸಂಪತ್ತು ಟೀಮ್ ಇಂಡಿಯಾ ಪಾಲಿಗೆ ಅತಿ ಮುಖ್ಯವೆನಿಸಿದೆ.

ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:
ಮೊದಲ ಟೆಸ್ಟ್: ಡಿ. 17ರಿಂದ 21, ಆಡಿಲೇಡ್ (ಡೇ-ನೈಟ್)
ದ್ವಿತೀಯ ಟೆಸ್ಟ್: ಡಿ. 26ರಿಂದ 30, ಮೆಲ್ಬೋರ್ನ್
ತೃತೀಯ ಟೆಸ್ಟ್: ಜ. 7ರಿಂದ 11, ಸಿಡ್ನಿ
ಅಂತಿಮ ಟೆಸ್ಟ್: ಜ. 15ರಿಂದ 19, ಬ್ರಿಸ್ಬೇನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT