ಗುರುವಾರ , ಫೆಬ್ರವರಿ 25, 2021
27 °C

IND vs AUS: ಸುಂದರ್-ಶಾರ್ದೂಲ್ ಫಿಫ್ಟಿ ಜೊತೆಯಾಟ; ವಿರಾಮಕ್ಕೆ ಭಾರತ 253/6

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಟೀ ವಿರಾಮದ ಹೊತ್ತಿಗೆ ಭಾರತ ತಂಡವು 87 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿದೆ. 

ರೋಹಿತ್ ಶರ್ಮಾ (44), ಚೇತೇಶ್ವರ ಪೂಜಾರ (25), ನಾಯಕ ಅಜಿಂಕ್ಯ ರಹಾನೆ (37), ಮಯಂಕ್ ಅಗರವಾಲ್ (38) ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ (23) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗದೇ ನಿರಾಸೆ ಅನುಭವಿಸಿದರು. ಇದು ಟೀಮ್ ಇಂಡಿಯಾ ಹಿನ್ನಡೆಗೆ ಕಾರಣವಾಯಿತು. 

ಈ ಹಂತದಲ್ಲಿ ಕುಸಿದ ಭಾರತಕ್ಕೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಏಳನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ನೆರವಾದರು. ಅಲ್ಲದೆ ದಿಟ್ಟ ಹೋರಾಟವನ್ನು ಮುಂದುವರಿಸಿದ್ದಾರೆ. 

ಎರಡು ವಿಕೆಟ್ ನಷ್ಟಕ್ಕೆ 62 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಅನುಭವಿ ಚೇತೇಶ್ವರ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು. 

ಇದನ್ನೂ ಓದಿ: 

ಆದರೆ ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ವಿಕೆಟ್ ಕೀಪರ್ ಟಿಮ್ ಪೇನ್‌ಗೆ ವಿಕೆಟ್ ಒಪ್ಪಿಸಿದ ಪೂಜಾರ ನಿರಾಸೆ ಅನುಭವಿಸಿದರು. 94 ಎಸೆತಗಳನ್ನು ಎದುರಿಸಿದ ಪೂಜಾರ ಎರಡು ಬೌಂಡರಿಗಳಿಂದ 25 ರನ್ ಗಳಿಸಿದರು. 

ಬಳಿಕ ಮಯಂಕ್ ಅಗರವಾಲ್ ಜೊತೆ ಸೇರಿದ ರಹಾನೆ ತಂಡವನ್ನು ಮುನ್ನಡೆಸಿದರು. ಮೊದಲೆರಡು ಪಂದ್ಯಗಳ ವೈಫಲ್ಯದ ಬಳಿಕ ಮೂರನೇ ಪಂದ್ಯದಲ್ಲಿ ಅವಕಾಶ ವಂಚಿತರಾಗಿರುವ ಮಯಂಕ್, ಈ ಪಂದ್ಯದಲ್ಲಿ ಗಾಯಾಳು ಹನುಮ ವಿಹಾರಿ ಸ್ಥಾನವನ್ನು ತುಂಬಿದ್ದರು. ಅಲ್ಲದೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಿತ್ತಲ್ಲದೆ ಮೊದಲ ಬಾರಿಗೆ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡರು. 

ಅತ್ತ ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ರೀತಿಯಲ್ಲೇ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ವಿಕೆಟ್ ಒಪ್ಪಿಸಿದ ನಾಯಕ ಅಜಿಂಕ್ಯ ರಹಾನೆ ಔಟ್ ಆಗುವುದರೊಂದಿಗೆ ಭಾರತ ಹಿನ್ನೆಡೆಗೊಳಗಾಯಿತು. 93 ಎಸೆತಗಳನ್ನು ಎದುರಿಸಿದ ರಹಾನೆ ಮೂರು ಬೌಂಡರಿಗಳಿಂದ 37 ರನ್ ಗಳಿಸಿದರು. 

ಊಟದ ವಿರಾಮದ ಹೊತ್ತಿಗೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಭೋಜನ ವಿರಾಮದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಮಯಂಕ್ ಅಗರವಾಲ್ (38) ಸಹ ವಿಕೆಟ್ ಒಪ್ಪಿಸಿದರು. 75 ಎಸೆತಗಳನ್ನು ಎದುರಿಸಿದ ಮಯಂಕ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 38 ರನ್ ಗಳಿಸಿದರು. 

ಎಡಗೈ ವಿಕೆಟ್ ಕೀಪರ್ ರಿಷಭ್ ಪಂತ್ 29 ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 23 ರನ್ ಗಳಿಸಿದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಇದರೊಂದಿಗೆ 186 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡ ಭಾರತ ಇನ್ನಿಂಗ್ಸ್ ಹಿನ್ನಡೆಯ ಭೀತಿಗೊಳಗಾಯಿತು. 

ಈ ಹಂತದಲ್ಲಿ ಜೊತೆಗೂಡಿದ ಚೊಚ್ಚಲ ಪಂದ್ಯವನ್ನಾಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಭಾರತಕ್ಕೆ ನೆರವಾದರು.  

ಆಸೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಭಾರತದ ಪ್ರತಿ ಹೋರಾಟಕ್ಕೆ ಆವೇಗ ತುಂಬಿದರು. ರಿಸ್ಟ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕಡೆಗಣಿಸಿ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಎಡಗೈ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ ರವೀಂದ್ರ ಜಡೇಜ ಅಭಾವದಲ್ಲೂ ಅವರಿಗೆ ಹೋಲುವ ಆಲ್‌ರೌಂಡರ್ ಪ್ರದರ್ಶನ ನೀಡಿದರು. 

ಇದನ್ನೂ ಓದಿ: 

ಟೀ ವಿರಾಮದ ಹೊತ್ತಿಗೆ ಭಾರತ ಆರು ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿದೆ. ಅಲ್ಲದೆ ನಾಲ್ಕು ವಿಕೆಟ್ ಬಾಕಿ ಉಳಿದಿರುವಂತೆಯೇ ಇನ್ನಿಂಗ್ಸ್ ಮುನ್ನಡೆಗಾಗಿ 116 ರನ್ ಗಳಿಸಬೇಕಿದೆ. ಸುಂದರ್ 82 ಎಸೆತಗಳಲ್ಲಿ ಐದು ಬೌಂಡರಿ ನೆರವಿನಿಂದ 38 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಶಾರ್ದೂಲ್, 62 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  
ಆಸೀಸ್ ಪರ ಜೋಶ್ ಹ್ಯಾಜಲ್‌ವುಡ್ ಮೂರು ಮತ್ತು ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ನಥನ್ ಲಿಯನ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು. 

ಈ ಮೊದಲು ಮಾರ್ನಸ್ ಲಾಬುಷೇನ್ ಅಮೋಘ ಶತಕ (108) ಹಾಗೂ ನಾಯಕ ಟಿಮ್ ಪೇನ್ ಆಕರ್ಷಕ ಅರ್ಧಶತಕದ (50) ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಭಾರತದ ಪರ ಪದಾರ್ಪಣಾ ಬೌಲರ್‌ಗಳಾದ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು