ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜನ್‌ಗೆ ಸರಣಿಶ್ರೇಷ್ಠ ಪ್ರಶಸ್ತಿ ಹಂಚಿ ಹೃದಯ ಗೆದ್ದ ಹಾರ್ದಿಕ್ ಪಾಂಡ್ಯ

Last Updated 8 ಡಿಸೆಂಬರ್ 2020, 15:02 IST
ಅಕ್ಷರ ಗಾತ್ರ

ಸಿಡ್ನಿ: ಹಿಂದೊಮ್ಮೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ತಮಗೆ ದೊರಕಿದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯುವ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಹಸ್ತಾಂತರಿಸಿದ್ದರು. ಈಗ ಟೀಮ್ ಇಂಡಿಯಾದಲ್ಲಿ ಈ ಉತ್ತಮ ಸಂಪ್ರದಾಯವನ್ನು ಅನುಸರಿಸಿರುವ ಹಾರ್ದಿಕ್ ಪಾಂಡ್ಯ ತಮಗೆ ದೊರೆತ ಸರಣಿಶ್ರೇಷ್ಠ ಪುರಸ್ಕಾರವನ್ನು ಯುವ ವೇಗದ ಬೌಲರ್ ತಂಗರಸು ನಟರಾಜನ್‌ಗೆ ಹಂಚುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಅಂತಿಮ ಟಿ20ನಲ್ಲಿ ಭಾರತ 12 ರನ್ ಅಂತರದ ಸೋಲಿಗೆ ಶರಣಾಗಿರಬಹುದು. ಆದರೆ ಆಗಲೇ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಸಹಜವಾಗಿಯೇ ಟೂರ್ನಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿರುವ ಹಾರ್ದಿಕ್ ಪಾಂಡ್ಯ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. ಇನ್ನೊಂದೆಡೆ ತಮ್ಮ ಚೊಚ್ಚಲ ಸರಣಿಯಲ್ಲೇ ಪ್ರಭಾವಿ ಬೌಲಿಂಗ್ ಸಂಘಟಿಸಿರುವ ತಂಗರಸು ನಟರಾಜನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದರಿಂದ ಹಾರ್ದಿಕ್ ಪಾಂಡ್ಯ ಕೂಡಾ ಹೊರತಾಗಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಹಾರ್ದಿಕ್ ಪಾಂಡ್ಯ, 'ನಟರಾಜನ್, ಈ ಸರಣಿಯಲ್ಲಿ ನೀವು ಅದ್ಭುತ. ಭಾರತಕ್ಕಾಗಿ ಪದಾರ್ಪಣೆ ಮಾಡಿದ ಸರಣಿಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ನಿಮ್ಮ ಪ್ರತಿಭೆ ಹಾಗೂ ಕಠಿಣ ಪರಿಶ್ರಮವನ್ನು ತೋರಿಸುತ್ತದೆ. ನನ್ನ ಕಡೆಯಿಂದ ನೀವು ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿದ್ದೀರಿ ಸಹೋದರ' ಎಂದು ಉಲ್ಲೇಖಿಸಿದ್ದಾರೆ.

ಪ್ರಸ್ತುತ ಚಿತ್ರವನ್ನು ಸ್ವತ: ಹಾರ್ದಿಕ್ ಪಾಂಡ್ಯ ಅವರೇ ಟ್ವಿಟರ್ ಖಾತೆಯಲ್ಲಿ ಹಂಚಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಅಭಿಮಾನಿಗಳಿಂದ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ.

ತಂಗರಸು ನಟರಾಜನ್ ಚೊಚ್ಚಲ ಟಿ20 ಪಂದ್ಯದಲ್ಲಿ ಮೂರು ವಿಕೆಟ್ ಸೇರಿದಂತೆ ಸರಣಿಯಲ್ಲಿ ಒಟ್ಟು ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅತ್ತ ಹಾರ್ದಿಕ್ ಪಾಂಡ್ಯ ಒಟ್ಟು 78 ರನ್ ಗಳಿಸಿದ್ದರು. ಇದರಲ್ಲಿ ದ್ವಿತೀಯ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ (ಅಜೇಯ 42 ರನ್, 22 ಎಸೆತ) ಸೇರಿತ್ತು.

ನಟರಾಜನ್ ಬೆನ್ನು ತಟ್ಟಿದ ಕ್ಯಾಪ್ಟನ್ ಕೊಹ್ಲಿ...
ಏತನ್ಮಧ್ಯೆ ಹೇಳಿಕೆ ಕೊಟ್ಟಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 'ಯಾರ್ಕರ್ ಕಿಂಗ್' ನಟರಾಜನ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ದೊಡ್ಡ ಆಸ್ತಿಯಾಗಬಲ್ಲರು ಎಂದು ಭವಿಷ್ಯ ನುಡಿದರು.

'ಬೂಮ್ರಾ ಹಾಗೂ ಶಮಿ ಅನುಪಸ್ಥಿತಿಯಲ್ಲಿ ನಟರಾಜನ್ ಅವರನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲೂ ಎದ್ದು ನಿಂತು ಉತ್ತಮ ನಿರ್ವಹಣೆ ನೀಡಿದ್ದಾರೆ. ಅಲ್ಲದೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಪಂದ್ಯವನ್ನಾಡುತ್ತಿರುವುದು ಮಹೋನ್ನತ ವಿಷಯ' ಎಂದರು.

'ನಟರಾಜನ್ ಅತ್ಯಂತ ಪರಿಶ್ರಮಿಯಾಗಿದ್ದು, ವಿನಯವಂತರಾಗಿದ್ದಾರೆ. ಇದೇ ರೀತಿಯ ಸ್ಥಿರ ಪ್ರದರ್ಶನ ನೀಡಿದರೆ ಮುಂಬರುವ ವಿಶ್ವಕಪ್‌ ದೃಷ್ಟಿಕೋನದಲ್ಲಿ ಅತ್ಯುತ್ತಮ ವಿಷಯವಾಗಿರಲಿದೆ' ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT