ಗುರುವಾರ , ಡಿಸೆಂಬರ್ 1, 2022
25 °C

ಆಸ್ಟ್ರೇಲಿಯಾ ಎದುರಿನ ಕೊನೆಯ ಟಿ20 ಪಂದ್ಯ: ಸರಣಿ ಗೆಲುವಿನತ್ತ ಭಾರತ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ರೋಹಿತ್‌ ಶರ್ಮಾ ಬಳಗ ಸರಣಿ ಗೆಲುವಿನತ್ತ ಚಿತ್ತಹರಿಸಿದೆ.

ಮೊಹಾಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ, ನಾಗಪುರದಲ್ಲಿ ಶುಕ್ರವಾರ ನಡೆದಿದ್ದ ಎಂಟು ಓವರ್‌ಗಳ ಪಂದ್ಯ ಗೆದ್ದು ಸರಣಿಯನ್ನು 1–1 ರಲ್ಲಿ ಸಮಬಲ ಮಾಡಿಕೊಂಡಿತ್ತು.

ಕಳೆದ ಪಂದ್ಯದಲ್ಲಿ ಗೆದ್ದಿದ್ದರೂ ಭಾರತದ ಬೌಲಿಂಗ್‌ ವಿಭಾಗ ಪ್ರಭಾವಿ ಎನಿಸಿರಲಿಲ್ಲ. ನಾಯಕ ರೋಹಿತ್‌ ಅವರ ಭರ್ಜರಿ ಬ್ಯಾಟಿಂಗ್‌ ಗೆಲುವು ತಂದುಕೊಟ್ಟಿತ್ತು. ಆದ್ದರಿಂದ ಭಾನುವಾರ ಬೌಲರ್‌ಗಳು ನೀಡುವ ಪ್ರದರ್ಶನದ ಮೇಲೆ ಎಲ್ಲರ ಗಮನ ಹರಿದಿದೆ.

ಹರ್ಷಲ್‌ ಪಟೇಲ್‌ ಮತ್ತು ಯಜುವೇಂದ್ರ ಚಾಹಲ್‌ ಅವರು ಫಾರ್ಮ್‌ ಕಂಡುಕೊಳ್ಳುವ ವಿಶ್ವಾಸದಲ್ಲಿ ಭಾರತ ತಂಡ ಇದೆ.

ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿ ಆಡಿದ್ದ ಜಸ್‌ಪ್ರೀತ್‌ ಬೂಮ್ರಾ, ಗಮನ ಸೆಳೆದಿದ್ದರು. ತಮ್ಮ ಪ್ರಮುಖ ‘ಅಸ್ತ್ರ’ ಎನಿಸಿರುವ ಯಾರ್ಕರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದರು. 

ಆದರೆ ಇನ್ನೊಬ್ಬ ವೇಗಿ ಭುವನೇಶ್ವರ್‌ ಕುಮಾರ್‌ ಲಯ ಕಂಡುಕೊಳ್ಳದೇ ಇರುವುದು ಚಿಂತೆಗೆ ಕಾರಣವಾಗಿದೆ. ಏಷ್ಯಾ ಕಪ್‌ ಟೂರ್ನಿ ಅಲ್ಲದೆ, ಮೊಹಾಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲೂ ಅವರು ಪ್ರಭಾವಿ ದಾಳಿ ನಡೆಸಿರಲಿಲ್ಲ. ಶುಕ್ರವಾರ ಎಂಟು ಓವರ್‌ಗಳ ಪಂದ್ಯ ನಡೆಸಿದ್ದರಿಂದ ಭಾರತ, ನಾಲ್ವರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಭುವನೇಶ್ವರ್‌ ಅವರನ್ನು ಆಡಿಸಿರಲಿಲ್ಲ.

‘ಡೆತ್‌ ಓವರ್‌ ಸ್ಪೆಷಲಿಸ್ಟ್‌’ ಎನಿಸಿಕೊಂಡಿರುವ ಹರ್ಷಲ್‌, ಗಾಯದಿಂದ ಚೇತರಿಕೊಂಡು ಕಣಕ್ಕಿಳಿದರೂ ಹಳೆಯ ಲಯ ಕಂಡುಕೊಂಡಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಅವರು ಆರು ಓವರ್‌ಗಳಲ್ಲಿ 13.50ರ ಸರಾಸರಿಯಲ್ಲಿ 81 ರನ್‌ ಬಿಟ್ಟುಕೊಟ್ಟಿದ್ದು, ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಸ್ಪಿನ್‌ ವಿಭಾಗದಲ್ಲಿ ಅಕ್ಷರ್‌ ಪಟೇಲ್‌ ಭರವಸೆ ಮೂಡಿಸಿದರೆ, ಚಾಹಲ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಏಷ್ಯಾ ಕಪ್‌ನ ಪಂದ್ಯಗಳಲ್ಲಿ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದ ಚಾಹಲ್‌, ಅದೇ ತಪ್ಪನ್ನು ಈ ಸರಣಿಯಲ್ಲೂ ಮುಂದುವರಿಸಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಅವರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ. 

ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡಾ ಸರಣಿ ಜಯದತ್ತ ಕಣ್ಣಿಟ್ಟಿದ್ದು, ಈ ಪಂದ್ಯದಲ್ಲಿ ತುರುಸಿನ ಹೋರಾಟ ನಿರೀಕ್ಷಿಸಲಾಗಿದೆ. ಮ್ಯಾಥ್ಯೂ ವೇಡ್‌ ಅತ್ಯುತ್ತಮ ಫಾರ್ಮ್‌ನಲ್ಲಿರುವುದು ಪ್ರವಾಸಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಪಂದ್ಯ ಆರಂಭ: ಸಂಜೆ 7

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ಮತ್ತು ಡಿಸ್ನಿ ಹಾಟ್‌ಸ್ಟಾರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು