ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಇಲ್ಲದೆ...: ಆಸ್ಟ್ರೇಲಿಯಾ ಮಾಜಿ ನಾಯಕರ ಭವಿಷ್ಯ ಸುಳ್ಳಾಗಿಸಿದ ಟೀಂ ಇಂಡಿಯಾ

ಭಾರತ ತಂಡದ ಬಗ್ಗೆ ಆಸೀಸ್‌ ಮಾಜಿಗಳು ಅಂದು ಏನು ಹೇಳಿದ್ದರು?
Last Updated 19 ಜನವರಿ 2021, 14:00 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಅನುಭವಿ ಆಟಗಾರ, ನಾಯಕ ವಿರಾಟ್ ಕೊಹ್ಲಿ ಅಲಭ್ಯತೆ, ಗಾಯಾಳುಗಳ ಸಮಸ್ಯೆ, ಅನುಭವದ ಕೊರತೆ ಇವೆಲ್ಲವನ್ನೂ ಮೆಟ್ಟಿ ನಿಂತ ‘ಟೀಂ ಇಂಡಿಯಾ’ ಯುವ ಆಟಗಾರರು ಟೆಸ್ಟ್‌ ಸರಣಿಯನ್ನು 2–1ರಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಮಾಜಿನಾಯಕರ ಭವಿಷ್ಯವನ್ನು ಸುಳ್ಳಾಗಿಸಿದ್ದಾರೆ.

ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ 2020ರ ಡಿಸೆಂಬರ್ 19ರಂದು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು ಕೇವಲ 36 ರನ್‌ಗಳಿಗೆ ಆಲೌಟ್ ಆಗಿ ಸೋಲನುಭವಿಸಿತ್ತು. ಆ ಸಂದರ್ಭದಲ್ಲಿ ಮತ್ತು ಅದರ ಮೊದಲು ಆಸ್ಟ್ರೇಲಿಯಾ ಆಟಗಾರರು ಭಾರತ ತಂಡದ ಸಾಮರ್ಥ್ಯದ ಮೇಲೆ ಅನುಮಾನ ವ್ಯಕ್ತಪಡಿಸಿ ಅನೇಕ ಹೇಳಿಕೆಗಳನ್ನು ನೀಡಿದ್ದರು.

‘ಕೊಹ್ಲಿ ಇಲ್ಲದೆ...’: ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಇಲ್ಲದ ಭಾರತ ತಂಡದ ಬ್ಯಾಟಿಂಗ್‌ ಬಗ್ಗೆ ಊಹಿಸಬಲ್ಲಿರಾ? ಅವರು ತುಂಬ ಸಂಕಷ್ಟದಲ್ಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲರ್ಕ್ ಹೇಳಿದ್ದರು.

‘ಪುಟಿದೇಳುವುದು ಕಷ್ಟ’: ಕೊಹ್ಲಿ ಇಲ್ಲದೆ ಇರುವುದರಿಂದ ಆಸ್ಟ್ರೇಲಿಯಾಕ್ಕೆ ಸರಣಿಯಲ್ಲಿ ಉತ್ತಮ ಅವಕಾಶವಿದೆ. ಹೀನಾಯ ಸೋಲಿನ ಬಳಿಕ ಭಾರತ ತಂಡ ಪುಟಿದೇಳುವುದು ಕಷ್ಟವಿದೆ ಎಂದು ಆಸ್ಟ್ರೇಲಿಯಾ ತಂಡದ ದಿಗ್ಗಜ ರಿಕಿ ಪಾಂಟಿಂಗ್ ಹೇಳಿದ್ದರು.

ಅಡಿಲೇಡ್ ಟೆಸ್ಟ್‌ನ ಮೂರನೇ ದಿನ ಆಸ್ಟ್ರೇಲಿಯಾವು ಅವರನ್ನು (ಭಾರತ) ಆ ರೀತಿ ಸೋಲಿಸಿದ ನಂತರ ಅವರು ಹೇಗೆ ತಿರುಗಿಬೀಳಬಲ್ಲರು ಎಂಬುದನ್ನು ನಾನು ಊಹಿಸಲಾರೆ ಎಂದು ಮಾರ್ಕ್ ವಾ ಹೇಳಿದ್ದರು.

ಈ ಟೆಸ್ಟ್ ಸರಣಿಯಲ್ಲಿ ಭಾರತ ನೆಲಕಚ್ಚಲಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕಲ್ ವಾನ್ ಹೇಳಿದ್ದರು.

ಇನ್ನೂ ಅನೇಕ ಮಾಜಿ ಕ್ರಿಕೆಟಿಗರು ಭಾರತ ತಂಡದ ಸಾಮರ್ಥ್ಯದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ಮಹತ್ವದ ಸರಣಿ ಸಂದರ್ಭದಲ್ಲಿ, ತಂಡವು ಕಳಪೆ ಪ್ರದರ್ಶನ ನೀಡಿದ್ದ ಸಂದರ್ಭದಲ್ಲೇ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದರು. ಅಷ್ಟರಲ್ಲಿ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ತಂಡವನ್ನು ಸೇರಿಕೊಂಡರಾದರೂ ಗಾಯಾಳುಗಳ ಸಮಸ್ಯೆ ತಂಡವನ್ನು ಚಿಂತೆಗೀಡುಮಾಡಿತ್ತು.

ಗಾಯಾಳುಗಳ ಮಧ್ಯೆ ಗಟ್ಟಿಗೊಂಡ ತಂಡ

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡ ಪ್ರಕಟವಾಗುವ ಮುನ್ನವೇ ಭಾರತಕ್ಕೆ ಗಾಯಾಳುಗಳ ಸಮಸ್ಯೆ ಸೃಷ್ಟಿಯಾಗಿತ್ತು. ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಗಾಯದ ಕಾರಣ ಆಯ್ಕೆಯಾಗಿರಲಿಲ್ಲ. ಪರಿಣಾಮಕಾರಿ ವೇಗದ ಬೌಲರ್ ಮೊಹಮ್ಮದ್ ಶಮಿ ಮೊದಲ ಟೆಸ್ಟ್‌ನಲ್ಲೇ ಗಾಯಗೊಂಡು ವಾಪಸಾದರು. ಎರಡನೇ ಟೆಸ್ಟ್‌ನಲ್ಲಿ ಉಮೇಶ್ ಯಾದವ್ ಸಹ ಗಾಯಗೊಂಡರು. ಭರವಸೆಯ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಸಹ ಗಾಯಗೊಂಡು ತವರಿಗೆ ವಾಪಸಾದರು. ನಾಯಕ ಕೊಹ್ಲಿಯೂ ರಜೆ ಪಡೆದು ತವರಿಗೆ ಮರಳಿದರು. ಅಷ್ಟರಲ್ಲಾಗಲೇ ರೋಹಿತ್ ಶರ್ಮಾ ತಂಡವನ್ನು ಸೇರಿಕೊಂಡಿದ್ದರೂ ಪರಿಣಾಮಕಾರಿ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದು ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಮೂರನೇ ಟೆಸ್ಟ್‌ನಲ್ಲಿ ವೀರೋಚಿತ ಆಟವಾಡಿ ಪಂದ್ಯ ಡ್ರಾ ಮಾಡುವ ಮೂಲಕ ಸರಣಿ ಜಯದ ಕನಸು ಜೀವಂತವಾಗಿರಿಸಿದ ಹನುಮ ವಿಹಾರಿ, ಆರ್. ಅಶ್ವಿನ್, ರವೀಂದ್ರ ಜಡೇಜ ಕೂಡ ಕೊನೆಯ ಪಂದ್ಯದಿಂದ ಗಾಯದ ಕಾರಣ ಹೊರಗುಳಿಯಬೇಕಾಗಿ ಬಂತು.

ಈ ಎಲ್ಲ ಸಮಸ್ಯೆ ಹಾಗೂ ಸವಾಲುಗಳನ್ನು ಮೆಟ್ಟಿನಿಂತು ಆಟವಾಡಿದ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ರಿಷಭ್ ಪಂತ್, ಶುಭಮನ್ ಗಿಲ್ ಹಾಗೂ ಇತರ ಆಟಗಾರರು ಆಸ್ಟ್ರೇಲಿಯಾದ ಮಾಜಿ ಆಟಗಾರರ ಭವಿಷ್ಯ ಸುಳ್ಳಾಗಿಸಿದರು. ಜತೆಗೆ, ಐತಿಹಾಸಿಕ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT