ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜನ್‌ಗೆ ಒಲಿದ ಅದೃಷ್ಟ; ಉಮೇಶ್ ಬದಲಿಗೆ ಆಯ್ಕೆಯಾದ ಯುವ ವೇಗಿ

Last Updated 1 ಜನವರಿ 2021, 9:49 IST
ಅಕ್ಷರ ಗಾತ್ರ

ಸಿಡ್ನಿ: ನಿರೀಕ್ಷೆಯಂತೆಯೇ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಗಾಯಾಳು ಉಮೇಶ್ ಯಾದವ್ ಸ್ಥಾನಕ್ಕೆ ತಮಿಳುನಾಡು ಮೂಲದ ಯುವ ವೇಗದ ಬೌಲರ್ ತಂಗರಸು ನಟರಾಜನ್ ಅವರನ್ನು ಹೆಸರಿಸಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಅಂತಿಮ ಎರಡು ಪಂದ್ಯಗಳಿಗೆ ಟಿ. ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.

ಇದರೊಂದಿಗೆ ತಂಗರಸು ನಟರಾಜನ್ ಅವರಿಗೆ ಅದೃಷ್ಟ ಒಲಿದು ಬಂದಿದೆ. ಇದೇ ಆಸೀಸ್ ಪ್ರವಾಸದಲ್ಲಷ್ಟೇ ನಟರಾಜನ್, ಟ್ವೆಂಟಿ-20 ಹಾಗೂ ಏಕದಿನ ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ಪ್ರಭಾವಿ ಡೆಬ್ಯು ಮಾಡಿದ್ದರು. ಅದರಲ್ಲೂ ಟಿ20 ತಂಡದಲ್ಲಿ ಗಾಯಾಳು ಚಕ್ರವರ್ತಿ ಸ್ಥಾನಕ್ಕೆ ನಟರಾಜನ್ ಆಯ್ಕೆಯಾಗಿದ್ದರು. ಈಗ ಟೆಸ್ಟ್ ತಂಡದಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ನಟರಾಜನ್, ಪ್ರಮುಖ ಬೌಲರ್ ಗಾಯಾಳುವಾದ ಹಿನ್ನೆಲೆಯಲ್ಲಿ ತಂಡದ ಬಾಗಿಲು ತೆರೆದಿದೆ.

ಅಂದ ಹಾಗೆ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ಎಡಗೈ ವೇಗಿ, ಐದು ದಿನಗಳ ಕ್ರಿಕೆಟ್‌ಗೂ ಪದಾರ್ಪಣೆ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಮೊದಲು ಪ್ರಥಮ ಟೆಸ್ಟ್‌ನಲ್ಲಿ ಮೊಹಮ್ಮದ್ ಶಮಿ ಗಾಯಗೊಂಡು ಸರಣಿಯಿಂದ ಹೊರಗುಳಿವಂತಾಗಿತ್ತು. ಇವರ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಹೆಸರಿಸಲಾಗಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿರುವ ವೇಳೆಗೆ ಉಮೇಶ್ ಯಾದವ್ ಮೀನಖಂಡದ ನೋವಿಗೆ ಒಳಗಾಗಿದ್ದರು. ತದಾ ಬಳಿಕ ಬೌಲಿಂಗ್ ಮುಂದುವರಿಸಲಾಗದೇ ಪಂದ್ಯದಿಂದ ಹೊರಗುಳಿದಿದ್ದರು.

ಈಗ ತಾಯ್ನಾಡಿಗೆ ಹಿಂತಿರುಗಲಿರುವ ಉಮೇಶ್ ಯಾದವ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಮುಂಬರುವ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆಗೆ ಫಿಟ್ ಆಗುವ ನಿರೀಕ್ಷೆಯಿದೆ.

ಈ ಮಧ್ಯೆ ಉಮೇಶ್ ಯಾದವ್ ಅಪ್ಪನಾಗಿರುವ ಶುಭ ಸಮಾಚಾರವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಹಂಚಿದೆ. ಅಲ್ಲದೆ ಆದಷ್ಟು ಬೇಗನೇ ಗುಣಮುಖರಾಗುವಂತೆ ಹಾರೈಸಿದೆ.

ರೋಹಿತ್ ಶರ್ಮಾ ಇನ್...
ಗಾಯದಿಂದ ಚೇತರಿಸಿಕೊಂಡು ತಂಡ ಸೇರಿರುವ ಉಪನಾಯಕ ರೋಹಿತ್ ಶರ್ಮಾ, ಅಂತಿಮ ಎರಡು ಪಂದ್ಯಕ್ಕಾಗಿ ತಂಡವನ್ನು ಸೇರಿದ್ದಾರೆ. ಆದರೆ ಸಿಡ್ನಿ ಪಂದ್ಯದಲ್ಲಿ ಆಡುವರೇ ಎಂಬುದು ತಿಳಿದು ಬಂದಿಲ್ಲ. ಹಾಗಾದ್ದಲ್ಲಿ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ಅಂತಿಮ ಎರಡು ಪಂದ್ಯಗಳಿಗೆ ಭಾರತ ತಂಡ ಇಂತಿದೆ:
ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಮಯಂಕ್ ಅಗರವಾಲ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಶುಭಮನ್ ಗಿಲ್, ವೃದ್ದಿಮಾನ್ ಸಹಾ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಟಿ. ನಟರಾಜನ್.

ಅಂತಿಮ ಎರಡು ಟೆಸ್ಟ್ ಪಂದ್ಯಗಳ ವೇಳಾಪಟ್ಟಿ ಇಂತಿದೆ:
ಮೂರನೇ ಟೆಸ್ಟ್: ಜ.7ರಿಂದ 11ರ ವರೆಗೆ, ಸಿಡ್ನಿ ಕ್ರಿಕೆಟ್ ಮೈದಾನ
ಅಂತಿಮ ಟೆಸ್ಟ್: ಜ.15ರಿಂದ 19ರ ವರೆಗೆ, ಬ್ರಿಸ್ಬೇನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT