ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಎರಡು ಟೆಸ್ಟ್‌ಗಳಿಗೆ ಉಮೇಶ್ ಅಲಭ್ಯ; ನಟರಾಜನ್‌ಗೆ ಅವಕಾಶ ಸಾಧ್ಯತೆ

Last Updated 31 ಡಿಸೆಂಬರ್ 2020, 10:07 IST
ಅಕ್ಷರ ಗಾತ್ರ

ಮೆಲ್ಬೆರ್ನ್: ಆಸ್ಟ್ರೇಲಿಯಾ ವಿರುದ್ಧಮುಕ್ತಾಯಗೊಂಡ ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿರುವ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಸೇವೆಯಿಂದಲೂ ಟೀಮ್ ಇಂಡಿಯಾ ವಂಚಿತವಾಗಿದೆ.

ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯವಾಗಿರುವ ಉಮೇಶ್, ತಾಯ್ನಾಡಿಗೆ ಮರಳಲಿದ್ದಾರೆ. ಇವರ ಸ್ಥಾನಕ್ಕೆ ಯುವ ಎಡಗೈ ವೇಗದ ಬೌಲರ್ ತಂಗರಸು ನಟರಾಜ್ ಡೆಬ್ಯು ಮಾಡುವ ಸಾಧ್ಯತೆಯಿದೆ.

ಬಲ್ಲ ಮೂಲಗಳ ಪ್ರಕಾರ, ಮೀನಖಂಡದ ನೋವಿಗೆ ತುತ್ತಾಗಿರುವ ಉಮೇಶ್ ಯಾದವ್, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಹೊಸ ವರ್ಷದಲ್ಲಿ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ಸರಣಿ ವೇಳೆಗೆ ಫಿಟ್ ಆಗುವ ನಿರೀಕ್ಷೆಯಿದೆ.

ಆಗಲೇ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಸೇವೆಯಿಂದ ವಂಚಿತವಾಗಿರುವ ಟೀಮ್ ಇಂಡಿಯಾಗೆ ಉಮೇಶ್ ಯಾದವ್ ಅನುಪಸ್ಥಿತಿಯು ಕಾಡುವ ಸಾಧ್ಯತೆಯಿದೆ. ಜಸ್‌ಪ್ರೀತ್ ಬೂಮ್ರಾ ತಂಡದ ಪ್ರಮುಖ ಅಸ್ತ್ರವಾಗಿ ಉಳಿದಿದ್ದು, ಮೊಹಮ್ಮದ್ ಸಿರಾಜ್ ಪರಿಣಾಮಕಾರಿ ಡೆಬ್ಯು ಮಾಡಿದ್ದರು.

ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ನಟರಾಜನ್‌ಗೆ ಅವಕಾಶ ಲಭ್ಯವಾಗುವುದೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮೂರನೇ ವೇಗಿ ರೂಪದಲ್ಲಿ ಶಾರ್ದೂಲ್ ಠಾಕೂರ್ ಹೆಸರು ಸಹ ಕೇಳಿ ಬರುತ್ತಿದೆ. ಇನ್ನೊಂದೆಡೆ ನವದೀಪ್ ಸೈನಿ ಕೂಡಾ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

ಈ ಮೊದಲು ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಪದಾರ್ಪಣೆ ಮಾಡಿರುವ ತಂಗರಸು ನಟರಾಜನ್, ಪ್ರಭಾವಿ ಎನಿಸಿಕೊಂಡಿದ್ದರು.

ಮೊದಲ ಪಂದ್ಯದಲ್ಲಿ ಕೇವಲ 36 ರನ್ನಿಗೆ ಆಲೌಟಾಗಿ ಹೀನಾಯ ಸೋಲಿಗೆ ಗುರಿಯಾಗಿರುವ ಟೀಮ್ ಇಂಡಿಯಾ ದ್ವಿತೀಯ ಟೆಸ್ಟ್‌ನಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ತಿರುಗೇಟು ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂತಿಮ ಎರಡು ಪಂದ್ಯಗಳು ಹೆಚ್ಚಿನ ರೋಚಕತೆಯನ್ನು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT