IND vs AUS: ಸುಂದರ್-ಶಾರ್ದೂಲ್ ಚೊಚ್ಚಲ ಫಿಫ್ಟಿ; ಭಾರತ 336ಕ್ಕೆ ಆಲೌಟ್

ಬ್ರಿಸ್ಬೇನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ (62) ಹಾಗೂ ಶಾರ್ದೂಲ್ ಠಾಕೂರ್ (67) ಚೊಚ್ಚಲ ಅರ್ಧಶತಕದ ನೆರವಿನಿಂದ ದಿಟ್ಟ ಹೋರಾಟ ನೀಡಿದ ಟೀಮ್ ಇಂಡಿಯಾ, ಮೂರನೇ ದಿನದಾಟದಲ್ಲಿ 111.4 ಓವರ್‌ಗಳಲ್ಲಿ 336 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಆದರೂ ಮೊದಲ ಇನ್ನಿಂಗ್ಸ್‌ನಲ್ಲಿ 33 ರನ್‌ಗಳ ಮಹತ್ವದ ಹಿನ್ನಡೆ ಅನುಭವಿಸಿದೆ. ಬಳಿಕ ಉತ್ತರ ನೀಡಲಾರಂಭಿಸಿರುವ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಅಲ್ಲದೆ ಒಟ್ಟು ಮುನ್ನಡೆಯನ್ನು 54ಕ್ಕೆ ಏರಿಸಿದೆ. ಡೇವಿಡ್ ವಾರ್ನರ್ (20*) ಹಾಗೂ ಮಾರ್ನಸ್ ಹ್ಯಾರಿಸ್ (1*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತೀಯ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಇಂತಹದೊಂದು ದಿಟ್ಟ ಬ್ಯಾಟಿಂಗ್ ಪ್ರದರ್ಶನವನ್ನು ಬಹುಶಃ ಯಾರೂ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಒಂದು ಹಂತದಲ್ಲಿ 186 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ನೀಡಿರುವ ಹೋರಾಟ ಮನೋಭಾವ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.
'ಕೊನೆಯ ಉಸಿರಿನ ವರೆಗೂ ಸೋಲನ್ನು ಒಪ್ಪಿಕೊಳ್ಳಲಾರೆ' ಎಂಬ ಮನೋಭಾವದೊಂದಿಗೆ ಹೋರಾಟ ತೋರಿದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಸಮಯೋಚಿತ ಅರ್ಧಶತಕಗಳನ್ನು ಬಾರಿಸುವ ಮೂಲಕ ಭಾರತಕ್ಕೆ ನೆರವಾದರು.
ಇವರಿಬ್ಬರು ಏಳನೇ ವಿಕೆಟ್ 123 ರನ್‌ಗಳ ಜೊತೆಯಾಟ ನೀಡುವ ಮೂಲಕ ಭಾರತ ಪಂದ್ಯದಲ್ಲಿ ತಿರುಗೇಟು ನೀಡಲು ನೆರವಾದರು.
Shardul salutes after a super 50 #AUSvIND pic.twitter.com/EzVVnGnGRE
— cricket.com.au (@cricketcomau) January 17, 2021
ಈ ಪೈಕಿ ವಾಷಿಂಗ್ಟನ್ ಸುಂದರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೂರು ವಿಕೆಟ್ ಹಾಗೂ ಅರ್ಧಶತಕ ಗಳಿಸಿದ ಹಿರಿಮೆಗೆ ಪಾತ್ರವಾದರು. ಅತ್ತ ತಮ್ಮ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಶಾರ್ದೂಲ್ ಠಾಕೂರ್, ಬ್ಯಾಟಿಂಗ್‌ನಲ್ಲೂ ತಮ್ಮ ಸಾಮರ್ಥ್ಯ ನಿರೂಪಿಸಿದರು.
ಇದನ್ನೂ ಓದಿ: ಜೊಚ್ಚಲ ಅರ್ಧಶತಕ ಬಾರಿಸಿದ ಸುಂದರ್-ಶಾರ್ದೂಲ್ ಸ್ಮರಣೀಯ ದಾಖಲೆ
ರೋಹಿತ್ ಶರ್ಮಾ (44), ಚೇತೇಶ್ವರ ಪೂಜಾರ (25), ನಾಯಕ ಅಜಿಂಕ್ಯ ರಹಾನೆ (37), ಮಯಂಕ್ ಅಗರವಾಲ್ (38) ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ (23) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗದೇ ನಿರಾಸೆ ಅನುಭವಿಸಿದರು.
ಎರಡು ವಿಕೆಟ್ ನಷ್ಟಕ್ಕೆ 62 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಅನುಭವಿ ಚೇತೇಶ್ವರ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು.
ಆದರೆ ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ವಿಕೆಟ್ ಕೀಪರ್ ಟಿಮ್ ಪೇನ್‌ಗೆ ವಿಕೆಟ್ ಒಪ್ಪಿಸಿದ ಪೂಜಾರ ನಿರಾಸೆ ಅನುಭವಿಸಿದರು. 94 ಎಸೆತಗಳನ್ನು ಎದುರಿಸಿದ ಪೂಜಾರ ಎರಡು ಬೌಂಡರಿಗಳಿಂದ 25 ರನ್ ಗಳಿಸಿದರು.
ಬಳಿಕ ಮಯಂಕ್ ಅಗರವಾಲ್ ಜೊತೆ ಸೇರಿದ ರಹಾನೆ ತಂಡವನ್ನು ಮುನ್ನಡೆಸಿದರು. ಮೊದಲೆರಡು ಪಂದ್ಯಗಳ ವೈಫಲ್ಯದ ಬಳಿಕ ಮೂರನೇ ಪಂದ್ಯದಲ್ಲಿ ಅವಕಾಶ ವಂಚಿತರಾಗಿರುವ ಮಯಂಕ್, ಈ ಪಂದ್ಯದಲ್ಲಿ ಗಾಯಾಳು ಹನುಮ ವಿಹಾರಿ ಸ್ಥಾನವನ್ನು ತುಂಬಿದ್ದರು. ಅಲ್ಲದೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಿತ್ತಲ್ಲದೆ ಮೊದಲ ಬಾರಿಗೆ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡರು.
Washington looks the part!
Live #AUSvIND: https://t.co/IzttOVtrUu pic.twitter.com/aiKL1BbF29
— cricket.com.au (@cricketcomau) January 17, 2021
ಅತ್ತ ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ರೀತಿಯಲ್ಲೇ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ವಿಕೆಟ್ ಒಪ್ಪಿಸಿದ ನಾಯಕ ಅಜಿಂಕ್ಯ ರಹಾನೆ ಔಟ್ ಆಗುವುದರೊಂದಿಗೆ ಭಾರತ ಹಿನ್ನೆಡೆಗೊಳಗಾಯಿತು. 93 ಎಸೆತಗಳನ್ನು ಎದುರಿಸಿದ ರಹಾನೆ ಮೂರು ಬೌಂಡರಿಗಳಿಂದ 37 ರನ್ ಗಳಿಸಿದರು.
ಇದನ್ನೂ ಓದಿ: ರೋಹಿತ್ ಬೇಜವಾಬ್ದಾರಿ ಆಟಕ್ಕೆ ಗವಾಸ್ಕರ್ ಕಿಡಿ; ಬೇಸರವಿಲ್ಲ ಎಂದ ಹಿಟ್ಮ್ಯಾನ್
ಊಟದ ವಿರಾಮದ ಹೊತ್ತಿಗೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಭೋಜನ ವಿರಾಮದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಮಯಂಕ್ ಅಗರವಾಲ್ (38) ಸಹ ವಿಕೆಟ್ ಒಪ್ಪಿಸಿದರು. 75 ಎಸೆತಗಳನ್ನು ಎದುರಿಸಿದ ಮಯಂಕ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 38 ರನ್ ಗಳಿಸಿದರು.
ಎಡಗೈ ವಿಕೆಟ್ ಕೀಪರ್ ರಿಷಭ್ ಪಂತ್ 29 ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 23 ರನ್ ಗಳಿಸಿದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಇದರೊಂದಿಗೆ 186 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡ ಭಾರತ ಇನ್ನಿಂಗ್ಸ್ ಹಿನ್ನಡೆಯ ಭೀತಿಗೊಳಗಾಯಿತು.
ಈ ಹಂತದಲ್ಲಿ ಜೊತೆಗೂಡಿದ ಚೊಚ್ಚಲ ಪಂದ್ಯವನ್ನಾಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಭಾರತಕ್ಕೆ ನೆರವಾದರು.
ಆಸೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಭಾರತದ ಪ್ರತಿ ಹೋರಾಟಕ್ಕೆ ಆವೇಗ ತುಂಬಿದರು. ರಿಸ್ಟ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕಡಗಣಿಸಿ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಎಡಗೈ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ ರವೀಂದ್ರ ಜಡೇಜ ಅಭಾವದಲ್ಲೂ ಅವರಿಗೆ ಹೋಲುವ ಆಲ್‌ರೌಂಡರ್ ಪ್ರದರ್ಶನ ನೀಡಿದರು.
ಟೀ ವಿರಾಮದ ಹೊತ್ತಿಗೆ ಭಾರತ ಆರು ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತ್ತು. ಅಲ್ಲಿಂದ ಬಳಿಕವೂ ದಿನದ ಕೊನೆಯ ಅವಧಿಯಲ್ಲಿ ಸುಂದರ್ ಹಾಗೂ ಶಾರ್ದೂಲ್ ಪ್ರಭಾವಿ ಬ್ಯಾಟಿಂಗ್ ಮುಂದುವರಿಸಿದರು.
Washington waves the bat too #AUSvIND pic.twitter.com/ORBwPOLZNE
— cricket.com.au (@cricketcomau) January 17, 2021
ರಕ್ಷಣಾತ್ಮಕ ಜೊತೆಗೆ ಆಕ್ರಮಣಕಾರಿ ಆಟದ ಮಿಶ್ರಣವನ್ನು ಪ್ರದರ್ಶಿಸಿದ ಈ ಜೋಡಿ ಏಳನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿ ಕ್ರಿಕೆಟ್ ಪಂಡಿತರ ಶ್ಲಾಘನೆಗೆ ಪಾತ್ರವಾದರು. ಈ ವಿಕೆಟ್ ಪತನದೊಂದಿಗೆ ಮತ್ತೊಮ್ಮೆ ದಿಢೀರ್ ಕುಸಿದ ಕಂಡ ಭಾರತ 336 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ 33 ರನ್‌ಗಳ ಹಿನ್ನಡೆ ಅನುಭವಿಸಿತು.
144 ಎಸೆತಗಳನ್ನು ಎದುರಿಸಿದ ಸುಂದರ್ ಏಳು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು. ಅತ್ತ ಠಾಕೂರ್ 115 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ಇನ್ನುಳಿದಂತೆ ನವದೀಪ್ ಸೈನಿ (5), ಮೊಹಮ್ಮದ್ ಸಿರಾಜ್ (13) ಹಾಗೂ ಟಿ. ನಟರಾಜನ್ (1) ರನ್ ಗಳಿಸಿದರು.
ಇದನ್ನೂ ಓದಿ: ಕೆ.ಎಲ್. ರಾಹುಲ್ ಜೊತೆಗಿನ 'ಕಾಣದ' ಫೋಟೊ ಹಂಚಿದ ಅಥಿಯಾ ಶೆಟ್ಟಿ
ಆಸೀಸ್ ಪರ ಜೋಶ್ ಹ್ಯಾಜಲ್‌ವುಡ್ 57 ರನ್ ತೆತ್ತು ಐದು ವಿಕೆಟ್ ಕಬಳಿಸಿ ಮಿಂಚಿದರು. ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ತಲಾ ಎರಡು ಮತ್ತು 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ನಥನ್ ಲಿಯನ್ ಒಂದು ವಿಕೆಟ್ ಪಡೆದರು.
Shardul crunches a "Steve Waugh-like" cover drive says Mike Hussey.
Live #AUSvIND: https://t.co/IzttOVtrUu pic.twitter.com/UPEKp8g7gg
— cricket.com.au (@cricketcomau) January 17, 2021
ಈ ಮೊದಲು ಮಾರ್ನಸ್ ಲಾಬುಷೇನ್ ಅಮೋಘ ಶತಕ (108) ಹಾಗೂ ನಾಯಕ ಟಿಮ್ ಪೇನ್ ಆಕರ್ಷಕ ಅರ್ಧಶತಕದ (50) ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಭಾರತದ ಪರ ಪದಾರ್ಪಣಾ ಬೌಲರ್‌ಗಳಾದ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.