ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಚ್ಚಲ ಅರ್ಧಶತಕ ಬಾರಿಸಿದ ಸುಂದರ್-ಶಾರ್ದೂಲ್ ಸ್ಮರಣೀಯ ದಾಖಲೆ

Last Updated 17 ಜನವರಿ 2021, 7:57 IST
ಅಕ್ಷರ ಗಾತ್ರ

ಬ್ರಿಸ್ಬೇನ್: ಭಾರತ ಕ್ರಿಕೆಟ್ ತಂಡದ ಯುವ ತಾರೆಗಳಾದ ವಾಷಿಂಗ್ಟನ್ ಸುಂದರ್ (62) ಹಾಗೂ ಶಾರ್ದೂಲ್ ಠಾಕೂರ್ (67) ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದ್ದಾರೆ.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ಸಾಗುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಸುಂದರ್ ಹಾಗೂ ಶಾರ್ದೂಲ್ ವಿಶೇಷ ಮೈಲುಗಲ್ಲನ್ನು ತಲುಪಿದರು.

ಈ ಪೈಕಿ ವಾಷಿಂಗ್ಟನ್ ಸುಂದರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೂರು ವಿಕೆಟ್ ಹಾಗೂ ಅರ್ಧಶತಕ ಗಳಿಸಿದ ಹೆಮ್ಮೆಗೆ ಪಾತ್ರವಾಗಿದ್ದಾರೆ. ಅತ್ತ ಠಾಕೂರ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಒಡ್ಡಿದ 369 ರನ್‌ಗಳಿಗೆ ಉತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 186 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಏಳನೇ ವಿಕೆಟ್‌ಗೆ 123 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿತಂಡವನ್ನು ಅಪಾಯದಿಂದ ಪಾರು ಮಾಡಿದರು.

ಬಹುಶಃ ಭಾರತೀಯ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಅದರಲ್ಲೂ ಆಸೀಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಸುಂದರ್ ಹಾಗೂ ಠಾಕೂರ್ ಅವರಿಂದ ಇಂತಹದೊಂದು ಹೋರಾಟವನ್ನು ಯಾರೂ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಆಸೀಸ್ ಬೃಹತ್ ಮುನ್ನಡೆ ಗಳಿಸಲಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ ಏಳನೇ ವಿಕೆಟ್‌ಗೆ ಗಾಬಾದಲ್ಲಿ 123 ರನ್‌ಗಳ ಜೊತೆಯಾಟ ನೀಡಿರುವ ಸುಂದರ್ ಹಾಗೂ ಠಾಕೂರ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಇದು ಗಾಬಾದಲ್ಲಿ ಏಳನೇ ವಿಕೆಟ್‌ಗೆ ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.

ವಾಷಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ನೆಲದಲ್ಲಿ ಪದಾರ್ಪಣಾ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂದೆನಿಸಿದರು. ಅಲ್ಲದೆ ತಮ್ಮ ಪದಾರ್ಪಣಾ ಇನ್ನಿಂಗ್ಸ್‌ನಲ್ಲೇ ಮೂರು ವಿಕೆಟ್ ಹಾಗೂ ಅರ್ಧಶತಕ ಗಳಿಸಿದ ಭಾರತದ ಎರಡನೇ ಆಟಗಾರ ಎಂದೆನಿಸಿದರು. ಈ ಹಿಂದೆ 1947/48ನೇ ಇಸವಿಯಲ್ಲಿ ಸಿಡ್ನಿ ಮೈದಾನದಲ್ಲಿ ಭಾರತದ ಮಾಜಿ ದಟ್ಟು ಪಾದ್ಕಾರ್ (51 ರನ್ ಹಾಗೂ 14ಕ್ಕೆ 3 ವಿಕೆಟ್) ಇದೇ ಸಾಧನೆ ಮಾಡಿದ್ದರು.

ಆಸೀಸ್ ನೆಲದಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತದ ಏಳನೇ ಹಾಗೂ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಸಾಧನೆ ಮಾಡಿದ ಗೌರವಕ್ಕೂ ಸುಂದರ್ ಹಾಗೂ ಶಾರ್ದೂಲ್ ಭಾಜನರಾದರು.

ಏಳನೇ ವಿಕೆಟ್‌ಗೆ ಆಸೀಸ್ ನೆಲದಲ್ಲಿ ಭಾರತೀಯ ಆಟಗಾರರ ಶತಕದ ಜೊತೆಯಾಟದ ಪಟ್ಟಿ ಇಲ್ಲಿದೆ:
204: ರಿಷಭ್ ಪಂತ್-ರವೀಂದ್ರ ಜಡೇಜ, ಸಿಡ್ನಿ 2018/19,
132: ವಿಜಯ್ ಹಜಾರೆ-ಎಚ್ ಅಧಿಕಾರಿ,ಅಡಿಲೇಡ್, 1947/48
103: ವಾಷಿಂಗ್ಟನ್ ಸುಂದರ್- ಶಾರ್ದೂಲ್ ಠಾಕೂರ್, ಬ್ರಿಸ್ಬೇನ್, 2020/21
101: ಮೊಹಮ್ಮದ್ ಅಜರುದ್ದೀನ್- ಮನೋಜ್ ಪ್ರಭಾಕರ್, ಅಡಿಲೇಡ್, 1991/92

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT