ಭಾನುವಾರ, ಸೆಪ್ಟೆಂಬರ್ 19, 2021
30 °C
ಟೆಸ್ಟ್: ಕುತೂಹಲ ಕೆರಳಿಸಿದ ಕೊನೆಯ ದಿನದಾಟ

IND vs ENG: ರಹಾನೆ–ಪೂಜಾರ ಆಸರೆ; ಸೋಲು ತಪ್ಪಿಸಿಕೊಳ್ಳುವ ಒತ್ತಡದಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಲಾರ್ಡ್ಸ್‌ ಅಂಗಳದಲ್ಲಿ ಭಾನುವಾರ ಭಾರತ ತಂಡವನ್ನು ಆತಂಕದ ಸುಳಿಯಿಂದ ಪಾರು ಮಾಡಿದರು.

ಇದರಿಂದಾಗಿ ಭಾರತ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 82 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 181 ರನ್ ಗಳಿಸಿತು. 154 ರನ್‌ಗಳ ಮುನ್ನಡೆ ಸಾಧಿಸಿದೆ. ರಿಷಭ್ ಪಂತ್ (ಬ್ಯಾಟಿಂಗ್ 14) ಮತ್ತು ಇಶಾಂತ್ ಶರ್ಮಾ (ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದಾರೆ. ಆದರೆ ಭಾರತಕ್ಕೆ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವ ಒತ್ತಡವಿದೆ. ಕೊನೆಯ ದಿನವಾದ ಸೋಮವಾರದ ಆಟವು  ಕುತೂಹಲ ಕೆರಳಿಸಿದೆ. ಬೆಳಗಿನ ಅವಧಿಯಲ್ಲಿ ಭಾರತವು ತನ್ನ ವಿಕೆಟ್‌ಗಳನ್ನು ಬೇಗ ಕಳೆದುಕೊಂಡರೆ, ಆತಿಥೇಯರಿಗೆ ಗುರಿ ತಲುಪಲು ಉತ್ತಮ ಅವಕಾಶ ಸಿಗುತ್ತದೆ.

ಆಗ ಭಾರತದ ಬೌಲರ್‌ಗಳ ಮೇಲೆ ತಂಡವನ್ನು ಸೋಲಿನಿಂದ ಪಾರು ಮಾಡುವ ಒತ್ತಡ ಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಪ್ರವಾಸಿ ಬಳಗದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಊಟದ ವಿರಾಮದವರೆಗೂ ಆಡಿದರೆ ಅಥವಾ 220ಕ್ಕೂ ಹೆಚ್ಚು ರನ್‌ಗಳ ಗೆಲುವಿನ ಗುರಿಯನ್ನು ನೀಡುವಲ್ಲಿ ಯಶಸ್ವಿಯಾದರೆ, ಆತಿಥೇಯ ತಂಡಕ್ಕೆ ಕಠಿಣ ಸವಾಲು ಎದುರಾಗಬಹುದು. 

ಇಂಗ್ಲೆಂಡ್ ತಂಡವು  ಜೋ ರೂಟ್ ಶತಕದ ಬಲದಿಂದ 27 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಆತಿಥೇಯ ಬೌಲರ್‌ಗಳು ಪೆಟ್ಟು ಕೊಟ್ಟರು.

ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕೆ.ಎಲ್. ರಾಹುಲ್ (5), ಅರ್ಧಶತಕ ಗಳಿಸಿದ್ದ ರೋಹಿತ್ ಶರ್ಮಾ (21) ಮತ್ತು ನಾಯಕ ವಿರಾಟ್ ಕೊಹ್ಲಿ (20 ರನ್) ಅವರು 55 ರನ್‌ಗಳಾಗುವಷ್ಟರಲ್ಲಿ ಔಟಾದರು. ಆರಂಭಿಕ ಜೋಡಿಯ ವಿಕೆಟ್‌ಗಳನ್ನು ಮಾರ್ಕ್‌ ವುಡ್ ಗಳಿಸಿದರು. ಕೊಹ್ಲಿ ಆಟಕ್ಕೆ ತಡೆಯೊಡ್ಡಿದ ಸ್ಯಾಮ್ ಕರನ್ ಸಂಭ್ರಮಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಪೂಜಾರ (45; 206ಎಸೆತ) ಮತ್ತು ರಹಾನೆ (61, 146 ಎ) ಶತಕದ ಜೊತೆಯಾಟವಾಡಿದರು. ಕಳೆದ ಕೆಲವು ಪಂದ್ಯಗಳಿಂದ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿರುವ ಪೂಜಾರ, ಇಲ್ಲಿ ತಮ್ಮ ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದರು.

ರಹಾನೆ ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದರೂ, ನಂತರ ರನ್‌ ಗಳಿಕೆಗೂ ಒತ್ತು ನೀಡಿದರು. ಐದು ಬೌಂಡರಿಗಳನ್ನು ಬಾರಿಸಿದ ಅರ್ಧಶತಕ ಗಳಿಸಿದರು. ಇವರಿಬ್ಬರ ಜೊತೆಯಾಟವನ್ನೂ ಮಾರ್ಕ್‌ ವುಡ್ ಮುರಿದರು. 73ನೇ ಓವರ್‌ನಲ್ಲಿ ವುಡ್ ಎಸೆತದಲ್ಲಿ ಔಟಾದರು.

ರೆಡ್ ಡ್ಯೂಕ್ಸ್‌ ಫುಟ್‌ಬಾಲ್?: ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಬಳಸಲಾದ ರೆಡ್ ಡ್ಯೂಕ್‌ ಚೆಂಡನ್ನು ‘ಫುಟ್‌ಬಾಲ್‌’  ಆಡಿದ ಇಂಗ್ಲೆಂಡ್‌ ತಂಡದ ಇಬ್ಬರು ಆಟಗಾರರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಾಲ್ಕನೇ ದಿನದಾಟದ ಊಟದ ವಿರಾಮದ ನಂತರದ ಅವಧಿಯಲ್ಲಿ ಈ ಘಟನೆ ನಡೆದಿದೆ. ಎರಡನೇ ಇನಿಂಗ್ಸ್‌ನ 35ನೇ ಓವರ್ ಅನ್ನು ಒಲಿ ರಾಬಿನ್ಸನ್ ಬೌಲಿಂಗ್ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಫೀಲ್ಡರ್‌ಗಳು ಚೆಂಡನ್ನು ಫುಟ್‌ಬಾಲ್ ಆಡಿದ್ದಾರೆ.

ವಿಡಿಯೊದಲ್ಲಿ ಆಟಗಾರರ ಮುಖಗಳನ್ನು ತೋರಿಸಿಲ್ಲ. ಆದರೆ, ಸ್ಪೈಕ್ಸ್‌ (ಮೊಳೆಗಳು) ಇರುವ ಬೂಟುಗಳನ್ನು ಧರಿಸಿದ್ದ ಇಬ್ಬರು ಆಟಗಾರರು ಚೆಂಡನ್ನು ಕಾಲಿನಿಂದ ಪಾಸ್ ಮಾಡಿದರು. ಕಿಕ್ ಮಾಡಿದ್ದು ಕೂಡ ದೃಶ್ಯದಲ್ಲಿದೆ. ಪಂದ್ಯದ ಅಧಿಕೃತ ಪ್ರಸಾರಕರೇ ಈ ವಿಡಿಯೊವನ್ನು ಚಿತ್ರಿಕರಿಸಿದೆ.

‘ಇದು ಚೆಂಡು ವಿರೂಪಗೊಳಿಸುವ ಕೃತ್ಯ’ ಎಂದು ಕೆಲವರು ಟೀಕಿಸಿದ್ದಾರೆ. ಆದರೆ, ಭಾರತ ತಂಡವು ಇದುವರೆಗೆ ರೆಫರಿ ಕ್ರಿಸ್ ಬ್ರಾಡ್ ಅವರಿಗೆ ಯಾವುದೇ ದೂರು ಸಲ್ಲಿಸಿಲ್ಲವೆಂದು ತಿಳಿದುಬಂದಿದೆ. ಅಂಪೈರ್‌ಗಳು ಚೆಂಡನ್ನು ಕೂಡ ಬದಲಾವಣೆ ಮಾಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು