ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 3rd Test | ಜುರೇಲ್, ಸರ್ಫರಾಜ್‌ಗೆ ಅವಕಾಶ ಸಾಧ್ಯತೆ

Published 13 ಫೆಬ್ರುವರಿ 2024, 23:51 IST
Last Updated 13 ಫೆಬ್ರುವರಿ 2024, 23:51 IST
ಅಕ್ಷರ ಗಾತ್ರ

ರಾಜ್‌ಕೋಟ್: ಮುಂಬೈನ ಬ್ಯಾಟರ್ ಸರ್ಫರಾಜ್ ಖಾನ್  ಮತ್ತು ಉತ್ತರಪ್ರದೇಶದ ವಿಕೆಟ್‌ಕೀಪರ್ ಧ್ರುವಚಾಂದ್ ಜುರೇಲ್ ಅವರಿಗೆ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಗುವ ನಿರೀಕ್ಷೆ ಇದೆ. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಮಂಗಳವಾರ ಅಭ್ಯಾಸದಲ್ಲಿ ಭಾಗವಹಿಸಲಿಲ್ಲ.

ಗಾಯಗೊಂಡಿರುವ ಕೆ.ಎಲ್. ರಾಹುಲ್ ಮತ್ತು ಲಯ ಕಂಡುಕೊಳ್ಳುವಲ್ಲಿ ಶ್ರೇಯಸ್ ಅಯ್ಯರ್ ವಿಫಲರಾಗಿದ್ದಾರೆ. ಆದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ಆಡಲು ಸರ್ಫರಾಜ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ವಿಕೆಟ್‌ಕೀಪರ್ ಕೋನಾ ಭರತ್ ಅವರು ಬ್ಯಾಟಿಂಗ್‌ನಲ್ಲಿ ನಿರೀಕ್ಷೆಯ ಮಟ್ಟಕ್ಕೆ ಆಡುತ್ತಿಲ್ಲ. ಕಳೆದ ಏಳು ಇನಿಂಗ್ಸ್‌ಗಳಲ್ಲಿ ಅವರು ಒಂದೂ ಅರ್ಧಶತಕ ಹೊಡೆದಿಲ್ಲ.  ಆದರೆ ಬ್ಯಾಟಿಂಗ್‌ನಲ್ಲಿಯೂ ಚೆನ್ನಾಗಿರುವ ಜುರೇಲ್ ಅವರಿಗೆ ಕೀಪಿಂಗ್ ಹೊಣೆ ನೀಡಿದರೆ ಅಚ್ಚರಿಯೇನಿಲ್ಲ. ಮಂಗಳವರದ ಅಭ್ಯಾಸದಲ್ಲಿ ಅವರು ಕೆಲವು ಕಠಿಣ ಕ್ಯಾಚ್‌ಗಳನ್ನು ಚುರುಕಾಗಿ ಡೈವ್ ಮಾಡುವ ಮೂಲಕ ಪಡೆದು ಗಮನ ಸೆಳೆದರು.

ಇನ್ನೊಂದೆಡೆ ಗಿಲ್ ಅವರಿಗೆ ವಿಶಾಖಪಟ್ಟಣದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬಲಗೈ ತೋರುಬೆರಳಿಗೆ ಗಾಯವಾಗಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್‌ನ ಎರಡನೇ ಇನಿಂಗ್ಸ್‌ನಲ್ಲಿ ಗಿಲ್ ಫೀಲ್ಡಿಂಗ್ ಮಾಡಿರಲಿಲ್ಲ.  ಆದರೆ ಗಾಯವೇನೂ ಗಂಭೀರವಲ್ಲ ಎಂದೂ ತಂಡದ ವೈದ್ಯಕೀಯ ಮೂಲಗಳು ತಿಳಿಸಿದ್ದವು. ಇದರಿಂದಾಗಿ ಅವರು ಮುಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.

ಒಂದೊಮ್ಮೆ ಸರ್ಫರಾಜ್ ಸ್ಥಾನ ಪಡೆದರೆ, ರಜತ್ ಪಾಟೀದಾರ್ ಅವರೊಂದಿಗೆ ಸ್ಲಿಪ್‌ ಫೀಲ್ಡಿಂಗ್‌ ಮಾಡುವುದು ಖಚಿತ.  ಇದರಿಂದಾಗಿ ಅವರಿಬ್ಬರೂ ಸೇರಿದಂತೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಕ್ಯಾಚ್ ಪಡೆಯುವ ಅಭ್ಯಾಸ ಮಾಡಿದರು.

ಇದೇ ಹೊತ್ತಿನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪಿಚ್‌ ಪರಿಶೀಲನೆ ನಡಸಿದರು. ಅದರ ನಂತರ ರೋಹಿತ್ ಕೂಡ ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿದರು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರದಿಂದ ಮೂರನೇ ಟೆಸ್ಟ್‌ ನಡೆಯಲಿದೆ.

ಬೆನ್‌ ಸ್ಟೋಕ್ಸ್‌ಗೆ 100ನೇ ಪಂದ್ಯ

ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ ಅವರು ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಆಡಲಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಮುಟ್ಟಲಿದ್ಧಾರೆ. ಸ್ಟೋಕ್ಸ್ ಅವರು 99 ಟೆಸ್ಟ್‌ಗಳಲ್ಲಿ 6251 ರನ್‌ ಗಳಿಸಿದ್ದಾರೆ. 13 ಶತಕ ಮತ್ತು 31 ಅರ್ಧಶತಕ ಗಳಿಸಿದ್ದಾರೆ.

'ಬೆನ್ ಅವರು ಟೆಸ್ಟ್ ಕ್ರಿಕೆಟ್‌ ಮಾದರಿಯ ಸ್ವರೂಪವನ್ನೇ ಬದಲಾಯಿಸಿದ್ದಾರೆ. ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವದ ಮೂಲಕ ದೀರ್ಘ ಮಾದರಿಯ ಆಟಕ್ಕೆ ಹೊಸತನ ತುಂಬಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ’ ಎಂದು ಇಂಗ್ಲೆಂಡ್ ಆಟಗಾರ ಓಲಿ ಪೋಪ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT