ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 3rd Test: ಭಾರತ ಮಧ್ಯಮ ಕ್ರಮಾಂಕಕ್ಕೆ ‘ಟೆಸ್ಟ್’

ಟೆಸ್ಟ್ ಕ್ರಿಕೆಟ್: ಭಾರತ–ಇಂಗ್ಲೆಂಡ್ ಮೂರನೇ ಪಂದ್ಯ ಇಂದಿನಿಂದ; ಬೆನ್ ಸ್ಟೋಕ್ಸ್‌ಗೆ ನೂರನೇ ಟೆಸ್ಟ್
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಜ್‌ಕೋಟ್: ಆತಿಥೇಯ ಭಾರತ ತಂಡಕ್ಕೆ ಗುರುವಾರ ಆರಂಭವಾಗಲಿರುವ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಟ್ಟುನಿಟ್ಟಾದ ಮತ್ತು ಜಾಣ್ಮೆಯನ್ನು ಸಮನಾಗಿ ಬೆರೆಸಿದ ತಂತ್ರಗಾರಿಕೆಯೊಂದಿಗೆ ಆಡಬೇಕಾದ ಅವಶ್ಯಕತೆ ಇದೆ.

ಅನಿರೀಕ್ಷಿತ ಫಲಿತಾಂಶಗಳನ್ನು ನೀಡುವ ಇಂಗ್ಲೆಂಡ್ ತಂಡದ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿವೆ. ಆದರೆ ಆತಿಥೇಯ ಬಳಗಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ದುರ್ಬಲವಾಗಿರುವುದೇ ಚಿಂತೆಯ ವಿಷಯವಾಗಿದೆ. 

ಆರಂಭಿಕ ಬ್ಯಾಟರ್, ನಾಯಕ ರೋಹಿತ್ ಶರ್ಮಾ ಕೂಡ ರನ್‌ಗಳನ್ನು ಗಳಿಸುವಲ್ಲಿ ಹಿಂದಿದ್ದಾರೆ. ಅವರ ಆಕ್ರಮಣಶೈಲಿಯು ಬೌಲರ್‌ಗಳಿಗೆ ತುಸು ಹೊತ್ತು ಸವಾಲಾಗಬಹುದು. ಆದರೆ ದೊಡ್ಡ ಸ್ಕೋರ್ ಗಳಿಸಲು ಸಹಾಯಕವಾಗುತ್ತಿಲ್ಲ. ಅದರಿಂದಾಗಿ ಇನಿಂಗ್ಸ್‌ಗೆ ಬಲ ತುಂಬುವ ಹೊಣೆ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿದೆ.

ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯು ಗಾಢವಾಗಿ ಕಾಡುತ್ತಿದೆ. ಮುಂಬೈನ ಸರ್ಫರಾಜ್ ಖಾನ್  ಅವರಿಗೆ ಪದಾರ್ಪಣೆಯ ಅವಕಾಶ ಸಿಗುವ ಸಾಧ್ಯತೆ ಇದೆ. ಕಳೆದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ರಜತ್ ಪಾಟೀದಾರ್ ಅವರಿಗೂ ತಮ್ಮ ಸಾಮರ್ಥ್ಯ ತೋರಲು ಇನ್ನೊಂದು ಅವಕಾಶ ಲಭಿಸಬಹುದು. ಯುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಅವರೂ ಚೊಚ್ಚಲ ಟೆಸ್ಟ್ ಆಡುವ ಸಾಧ್ಯತೆ ಇದೆ. ಕೆ.ಎಲ್. ಭರತ್ ಅವರು ನಿರೀಕ್ಷೆಗೆ ತಕ್ಕಂತೆ ಆಡದಿರುವುದರಿಂದ ಅವರಿಗೆ ವಿಶ್ರಾಂತಿ ಕೊಟ್ಟು ಜುರೇಲ್‌ಗೆ ಸ್ಥಾನ ನೀಡಬಹುದು.

ಆದರೆ ಇವರಿಬ್ಬರೂ ತಮ್ಮ ಆಯ್ಕೆಯನ್ನು ಸಮರ್ಥಿಸುವಂತೆ ಆಡುವ ಸವಾಲು ಇದೆ. ಏಕೆಂದರೆ; ಅವರು ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್, ಪರಿಣಾಮಕಾರಿ ಸ್ಪಿನ್ನರ್‌ ಟಾಮ್ ಹಾರ್ಟ್ಲಿ ಅವರನ್ನು ಎದುರಿಸುವ ದಿಟ್ಟತನ ತೋರಬೇಕಿದೆ. 

ಹೈದರಾಬಾದಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಆಘಾತ ನೀಡಿತ್ತು.  ವಿಶಾಖಪಟ್ಟಣದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತವು ತಿರುಗೇಟು ನೀಡಿತು. ತಂಡದ ಯಶಸ್ವಿ ಜೈಸ್ವಾಲ್ ದ್ವಿಶತಕ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಬಿರುಗಾಳಿ ವೇಗದ ಬೌಲಿಂಗ್ ಮುಂದೆ ಇಂಗ್ಲೆಂಡ್ ತಂಡವು ತತ್ತರಿಸಿತ್ತು.  ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಇಂಗ್ಲೆಂಡ್ ತುದಿಗಾಲಿನಲ್ಲಿ ನಿಂತಿದೆ.

ಬೆನ್ ಸ್ಟೋಕ್ಸ್  ಅವರು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಗೆಲುವಿನೊಂದಿಗೆ ಅವಿಸ್ಮರಣೀಯಗೊಳಿಸಿಕೊಳ್ಳುವ ಛಲದಲ್ಲಿದ್ದಾರೆ. 'ಬಾಝ್‌ಬಾಲ್‘ ತಂತ್ರವನ್ನು ಮುಂದುವರಿಸುವ ಯೋಚನೆಯಲ್ಲಿಯೂ ಪ್ರವಾಸಿ ತಂಡವಿದೆ. ಆದ್ದರಿಂದ ರೋಹಿತ್ ಬಳಗವು ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಸಾಮರ್ಥ್ಯ ತೋರಬೇಕಾದ ಅನಿವಾರ್ಯತೆ ಇದೆ. 

ಬೆನ್ ಸ್ಟೋಕ್ಸ್

ಬೆನ್ ಸ್ಟೋಕ್ಸ್

ಸರಣಿಯಲ್ಲಿ 1–1 ರ ಸಮಬಲ ಸಾಧಿಸಿರುವ ಉಭಯ ತಂಡಗಳು ಸರ್ಫರಾಜ್ ಖಾನ್, ಧ್ರುವ ಜುರೇಲ್‌ಗೆ ಅವಕಾಶ ಸಾಧ್ಯತೆ ಜಸ್‌ಪ್ರೀತ್ ಬೂಮ್ರಾ, ಆರ್. ಅಶ್ವಿನ್‌ ಮೇಲೆ ಕಣ್ಣು

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಜಸ್‌ಪ್ರೀತ್ ಬೂಮ್ರಾ (ಉಪನಾಯಕ) ಯಶಸ್ವಿ ಜೈಸ್ವಾಲ್ ಶುಭಮನ್ ಗಿಲ್ ರಜತ್ ಪಾಟೀದಾರ್ ಸರ್ಫರಾಜ್ ಖಾನ್ ಧ್ರುವ ಜುರೇಲ್ ಕೆ.ಎಸ್. ಭರತ್ (ಇಬ್ಬರೂ ವಿಕೆಟ್‌ಕೀಪರ್) ಆರ್. ಅಶ್ವಿನ್ ರವೀಂದ್ರ ಜಡೇಜ ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಮುಕೇಶ್ ಕುಮಾರ್ ಆಕಾಶ್ ದೀಪ್ ದೇವದತ್ತ ಪಡಿಕ್ಕಲ್.

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ) ರೆಹಾನ್ ಅಹಮದ್ ಜೇಮ್ಸ್ ಆ್ಯಂಡರ್ಸನ್ ಗಸ್ ಅಟ್ಕಿನ್ಸನ್ ಜಾನಿ ಬೆಸ್ಟೊ (ವಿಕೆಟ್‌ಕೀಪರ್) ಶೋಯಬ್ ಬಶೀರ್ ಡ್ಯಾನ್ ಲಾರೆನ್ಸ್ ಜ್ಯಾಕ್ ಕ್ರಾಲಿ ಬೆನ್ ಡಕೆಟ್ ಬೆನ್ ಫೋಕ್ಸ್ (ವಿಕೆಟ್‌ಕೀಪರ್) ಟಾಮ್ ಹಾರ್ಟ್ಲಿ ಓಲಿ ಪೋಪ್ ಓಲಿ ರಾಬಿನ್ಸನ್ ಜೋ ರೂಟ್ ಮಾರ್ಕ್ ವುಡ್. ಪಂದ್ಯ ಆರಂಭ: ಬೆಳಿಗ್ಗೆ 9.30 ನೇರಪ್ರಸಾರ:

ತವರಿನಂಗಳದಲ್ಲಿ ಪೂಜಾರ ಇಲ್ಲ

ಟೆಸ್ಟ್ ಕ್ರಿಕೆಟ್ ಪರಿಣತ ಚೇತೇಶ್ವರ್ ಪೂಜಾರ ಅವರು ತಂಡದಲ್ಲಿ ಇರದಿರುವುದು ರಾಜ್‌ಕೋಟ್‌ ಅಭಿಮಾನಿಗಳನ್ನು ಕಾಡಲಿದೆ. ತವರಿನಂಗಳದಲ್ಲಿ ಪೂಜಾರ ಅವರು ಆಡುತ್ತಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಅವರು ಉತ್ತಮ ಲಯದಲ್ಲಿ ಇಲ್ಲದ ಕಾರಣಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರು ಸದ್ಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಸೌರಾಷ್ಟ್ರದವರೇ ಆದ ಆಲ್‌ರೌಂಡರ್ ರವೀಂದ್ರ ಜಡೇಜ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ರೆಹಾನ್ ವೀಸಾ ಸಮಸ್ಯೆ ಪರಿಹಾರ: ಸ್ಟೋಕ್ಸ್‌ ಮೆಚ್ಚುಗೆ ಇಂಗ್ಲೆಂಡ್ ತಂಡದ ಲೆಗ್‌ಸ್ಪಿನ್ನರ್ ರೆಹಾನ್ ಅಹಮದ್ ಅವರಿಗೆ ವೀಸಾ ನೀಡುವಲ್ಲಿ ಮೂಡಿದ್ದ ಗೊಂದಲವನ್ನು ಪರಿಹರಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಭಾರತ ಸರ್ಕಾರಕ್ಕೆ ನಾಯಕ ಬೆನ್ ಸ್ಟೋಕ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಯುವ ಆಟಗಾರ ರೆಹಾನ್ ಅವರುಇಂಗ್ಲೆಂಡ್ ತಂಡದಲ್ಲಿದ್ದಾರೆ. ಅವರಿಗೆ ಸಿಂಗಲ್ ಎಂಟ್ರಿ ವೀಸಾ ಇದ್ದ ಕಾರಣ ರಾಜ್‌ಕೋಟ್‌ಗೆ ಬರಲು ತೊಂದರೆಯಾಗಿತ್ತು. ಅದಕ್ಕಾಗಿ ಕೆಲವು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರೈಸಬೇಕಿತ್ತು. ‘ಎಲ್ಲ ಪ್ರಕ್ರಿಯೆಗಳು ಸಾಂಗವಾಗಿ ಮತ್ತು ವೇಗವಾಗಿ ನಡೆದವು. ಇಂದು ಬೆಳಿಗ್ಗೆ ಅವರಿಗೆ ವೀಸಾ ಲಭಿಸಿದೆ. ಇದು ನಮಗೆ ನಿರಾಳತೆ ತಂದಿದೆ. ಬಿಸಿಸಿಐ ಮತ್ತು ಭಾರತ ಸರ್ಕಾರ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ನೆರವು ನೀಡಿವೆ’ ಎಂದು ಸ್ಟೋಕ್ಸ್‌ ಹೇಳಿದ್ದಾರೆ. 500ರ ಕ್ಲಬ್‌ನತ್ತ ಅಶ್ವಿನ್ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಕ್ಲಬ್ ಸೇರಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. 97 ಟೆಸ್ಟ್‌ಗಳನ್ನು ಆಡಿರುವ 37 ವರ್ಷದ ಅಶ್ವಿನ್ ಅವರು ಐದನೂರರ ಗಡಿ ದಾಟಿದ ವಿಶ್ವದ ಒಂಬತ್ತನೇ ಬೌಲರ್ ಆಗಲಿದ್ದಾರೆ.  ಅನಿಲ್ ಕುಂಬ್ಳೆ ಅವರ ನಂತರ ಈ ಸಾಧನೆ ಮಾಡಿದ ಭಾರತದ ಸ್ಪಿನ್ನರ್ ಆಗಲಿದ್ದಾರೆ.  

ರೆಹಾನ್ ವೀಸಾ ಸಮಸ್ಯೆ ಪರಿಹಾರ: ಸ್ಟೋಕ್ಸ್‌ ಮೆಚ್ಚುಗೆ

ಇಂಗ್ಲೆಂಡ್ ತಂಡದ ಲೆಗ್‌ಸ್ಪಿನ್ನರ್ ರೆಹಾನ್ ಅಹಮದ್ ಅವರಿಗೆ ವೀಸಾ ನೀಡುವಲ್ಲಿ ಮೂಡಿದ್ದ ಗೊಂದಲವನ್ನು ಪರಿಹರಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಭಾರತ ಸರ್ಕಾರದ ಕ್ರಮಕ್ಕೆ ನಾಯಕ ಬೆನ್ ಸ್ಟೋಕ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಮೂಲದ ಯುವ ಆಟಗಾರ ರೆಹಾನ್ ಅವರುಇಂಗ್ಲೆಂಡ್ ತಂಡದಲ್ಲಿದ್ದಾರೆ. ಅವರಿಗೆ ಸಿಂಗಲ್ ಎಂಟ್ರಿ ವೀಸಾ ಇದ್ದ ಕಾರಣ ರಾಜ್‌ಕೋಟ್‌ಗೆ ಬರಲು ತೊಂದರೆಯಾಗಿತ್ತು. ಅದಕ್ಕಾಗಿ ಕೆಲವು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರೈಸಬೇಕಿತ್ತು.

‘ಎಲ್ಲ ಪ್ರಕ್ರಿಯೆಗಳು ಸಾಂಗವಾಗಿ ಮತ್ತು ವೇಗವಾಗಿ ನಡೆದವು. ಇಂದು ಬೆಳಿಗ್ಗೆ ಅವರಿಗೆ ವೀಸಾ ಲಭಿಸಿದೆ. ಇದು ನಮಗೆ ನಿರಾಳತೆ ತಂದಿದೆ. ಬಿಸಿಸಿಐ ಮತ್ತು ಭಾರತ ಸರ್ಕಾರ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ನೆರವು ನೀಡಿವೆ’ ಎಂದು ಸ್ಟೋಕ್ಸ್‌ ಹೇಳಿದ್ದಾರೆ.

500ರ ಕ್ಲಬ್‌ನತ್ತ ಅಶ್ವಿನ್

ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಕ್ಲಬ್ ಸೇರಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.

97 ಟೆಸ್ಟ್‌ಗಳನ್ನು ಆಡಿರುವ 37 ವರ್ಷದ ಅಶ್ವಿನ್ ಅವರು ಐದನೂರರ ಗಡಿ ದಾಟಿದ ವಿಶ್ವದ ಒಂಬತ್ತನೇ ಬೌಲರ್ ಆಗಲಿದ್ದಾರೆ.  ಅನಿಲ್ ಕುಂಬ್ಳೆ ಅವರ ನಂತರ ಈ ಸಾಧನೆ ಮಾಡಿದ ಭಾರತದ ಸ್ಪಿನ್ನರ್ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT