ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs ENG 3rd Test | ಯಶಸ್ವಿ ಜೈಸ್ವಾಲ್‌ ಶತಕ ಸಂಭ್ರಮ

ಟೆಸ್ಟ್ ಕ್ರಿಕೆಟ್: ಕುಲದೀಪ್, ಸಿರಾಜ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್; ಭಾರತಕ್ಕೆ ಭಾರಿ ಮುನ್ನಡೆ
Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಜ್‌ಕೋಟ್: ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಪಾನೀಪುರಿ ಮಾರಾಟದ ಕತೆಗೆ ಪೂರ್ಣವಿರಾಮ ಹಾಕುವ ಸಮಯ ಬಂದಿದೆ. ಈಗ ಏನಿದ್ದರೂ ಈ ಆಟಗಾರನ ಅಮೋಘ ಸಾಧನೆಯ ಕುರಿತು ಮಾತನಾಡುವುದೇ ಹೆಚ್ಚು ಸ್ವಾರಸ್ಯಕರ.

ಇತಿಹಾಸ ತನ್ನಷ್ಟಕ್ಕೆ ತಾನಿರುತ್ತದೆ. ಬಡತನವನ್ನೇ ಎಳೆದು ಮಾತನಾಡುವುದಕ್ಕಿಂತ ವ್ಯಕ್ತಿಯ ಸಾಮರ್ಥ್ಯ ಮತ್ತು ವಾಗ್ದಾನಗಳನ್ನು ನಿಭಾಯಿಸುವ ರೀತಿಯೇ ನಿಜವಾದ ಚರ್ಚೆಯ ವಿಷಯಗಳು. 22 ವರ್ಷದ ‘ಮುಂಬೈಕರ್’ ಭಾರತ ತಂಡಕ್ಕಾಗಿ ಮೇಲಿಂದ ಮೇಲೆ ದೊಡ್ಡ ಶತಕಗಳನ್ನು ದಾಖಲಿಸುತ್ತಿದ್ದಾರೆ.  ಆದ್ದರಿಂದ ಅವರ ಬಾಲ್ಯದ ಕಷ್ಟದ ದಿನಗಳನ್ನು ಪದೇ ಪದೇ ನೆನಪಿಸುವುದನ್ನು ಬಿಟ್ಟು ಸಾಮರ್ಥ್ಯ ಮತ್ತು ಸಾಧನೆಯೇ ಮುಖ್ಯವಾಗಿ ಚರ್ಚೆಯಾಗಬೇಕು.

ಶನಿವಾರ 133 ಎಸೆತಗಳಲ್ಲಿ 104 ರನ್‌ ಗಳಿಸಿದ ಅವರ ಸಾಧನೆಯೂ ಇದರಲ್ಲಿ ಒಂದು.  ಐದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳು ಆ ಶತಕದಲ್ಲಿವೆ. ಅವರ ಆಟದ ಬಲದಿಂದ ಭಾರತ ತಂಡವು 322 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ನ ತೃತೀಯ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 51 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 196 ರನ್ ಗಳಿಸಿದೆ. ಅದರಲ್ಲಿ ಯಶಸ್ವಿಯದ್ದೇ ಸಿಂಹಪಾಲು. ಉಳಿದಂತೆ ಶುಭಮನ್ ಗಿಲ್ (ಬ್ಯಾಟಿಂಗ್ 65) ಅರ್ಧಶಕ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಯಶಸ್ವಿ ಬೆನ್ನುನೋವಿನಿಂದಾಗಿ  ನಿವೃತ್ತಿ ಪಡೆದು ವಿಶ್ರಾಂತಿಗೆ ತೆರಳಿದರು.

ಏಳು ಟೆಸ್ಟ್ ಆಡಿರುವ ಜೈಸ್ವಾಲ್ ಮೂರನೇ ಶತಕ ದಾಖಲಿಸುವಲ್ಲಿ ‘ಯಶಸ್ವಿ’ ಆಗಿದ್ದಾರೆ. ಒಟ್ಟಾರೆ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 12 ಶತಕ ಮತ್ತು ನಾಲ್ಕು ಅರ್ಧಶತಕ ಗಳಿಸಿದ್ದಾರೆ. 

ಸಿರಾಜ್–ಕುಲದೀಪ್ ಮಿಂಚು

ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 126 ರನ್‌ಗಳ ಮುನ್ನಡೆ ಗಳಿಸಲು ವೇಗಿ ಮೊಹಮ್ಮದ್ ಸಿರಾಜ್ (84ಕ್ಕೆ4), ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (77ಕ್ಕೆ2) ಮತ್ತು ರವೀಂದ್ರ ಜಡೇಜ (51ಕ್ಕೆ2) ಅವರ ಬೌಲಿಂಗ್ ಕಾರಣವಾಯಿತು.

ಶುಕ್ರವಾರ ದಿನದಾಟದ ಮುಕ್ತಾಯಕ್ಕೆ  ಇಂಗ್ಲೆಂಡ್ ತಂಡವು 35 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 207 ರನ್‌ ಗಳಿಸಿತ್ತು.  133 ರನ್‌ ಗಳಿಸಿದ್ದ ಬೆನ್ ಡಕೆಟ್ ಕ್ರೀಸ್‌ನಲ್ಲಿದ್ದರು. ಅವರೊಂದಿಗೆ ಅನುಭವಿ ಜೋ ರೂಟ್ ಕೂಡ ಇದ್ದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 445 ರನ್‌ಗಳನ್ನು ದಾಟುವ ಹುಮ್ಮಸ್ಸಿನಲ್ಲಿದ್ದ ಇಂಗ್ಲೆಂಡ್‌ಗೆ ಆತಿಥೇಯ ಬೌಲರ್‌ಗಳು ಅಡ್ಡಿಯಾದರು.

ದಿನದಾಟದ ಐದನೇ ಓವರ್‌ನಲ್ಲಿ ರೂಟ್ ಅವರ ವಿಕೆಟ್ ಕಬಳಿಸಿದ ಬೂಮ್ರಾ ಸಂಭ್ರಮಿಸಿದರು. ನಂತರದ ಓವರ್‌ನಲ್ಲಿ ಯಾದವ್ ಎಸೆತದಲ್ಲಿ ಜಾನಿ ಬೆಸ್ಟೊ ಔಟಾದರು. ಹತ್ತು ಓವರ್‌ಗಳ ನಂತರ ಡಕೆಟ್ ವಿಕೆಟ್ ಕಬಳಿಸಿದ ಕುಲದೀಪ್ ಕುಣಿದಾಡಿದರು.

ನಾಯಕ ಬೆನ್ ಸ್ಟೋಕ್ಸ್ (41; 89ಎ) ಮತ್ತು ಬೆನ್ ಫೋಕ್ಸ್‌ (13 ರನ್)  ಒಂದಿಷ್ಟು ಹೊತ್ತು ಬೌಲರ್‌ಗಳನ್ನು ಕಾಡಿದರು. ಆದರೆ ಜಡೇಜ ಮತ್ತು ಸಿರಾಜ್ ಅವರ ದಾಳಿಯ ಮುಂದೆ ಅವರು ಶರಣಾಗಲೇ ಬೇಕಾಯಿತು. ಕೆಳಕ್ರಮಾಂಕದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲದಂತೆಯೂ ಅವರು ನೋಡಿಕೊಂಡರು.

ಚೆನ್ನೈಗೆ ಮ ರಳಿದ ಅಶ್ವಿನ್

ರಾಜ್‌ಕೋಟ್: ಭಾರತ ತಂಡದ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ತಮ್ಮ ತಾಯಿಯ ಅನಾರೋಗ್ಯದ ಕಾರಣದಿಂದ ಟೆಸ್ಟ್ ಪಂದ್ಯದಿಂದ ನಿರ್ಗಮಿಸಿದ್ದಾರೆ. 

ಶುಕ್ರವಾರವಷ್ಟೇ ಇಂಗ್ಲೆಂಡ್ ತಂಡದ ಜ್ಯಾಕ್ ಕ್ರಾಲಿ ವಿಕೆಟ್ ಪಡದಿದ್ದ ಅಶ್ವಿನ್ ಟೆಸ್ಟ್‌ನಲ್ಲಿ 500 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಆದರೆ ತಮ್ಮ ತಾಯಿಯು ಅನಾರೋಗ್ಯಗೊಂಡಿರುವ ಸುದ್ದಿ ತಿಳಿದು ತವರು ಚೆನ್ನೈಗೆ ಮರಳಿದರು.

‘ಅಶ್ವಿನ್ ಅವರು ಕುಟುಂಬದಲ್ಲಿ ತುರ್ತು ಕಾರಣದಿಂದಾಗಿ ತೆರಳಿದ್ದಾರೆ. ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಂಡಳಿಯು ಅವರೊಂದಿಗೆ ಇದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಿಂದಾಗಿ ತಂಡವು ಸದ್ಯದ ಪಂದ್ಯದಲ್ಲಿ 10 ಆಟಗಾರರೊಂದಿಗೆ ಆಡಬೇಕಿದೆ. ಸರಣಿಯ ಮುಂದಿನ ಎರಡು ಪಂದ್ಯಗಳಿಗೂ ಅಶ್ವಿನ್ ಮರಳುವ ಕುರಿತು ಸ್ಪಷ್ಟವಾಗಿಲ್ಲ. ಒಂದೊಮ್ಮೆ ಅವರು ಬರದಿದ್ದರೆ ವಾಷಿಂಗ್ಟನ್ ಸುಂದರ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಮೂರನೇ ದಿನದಾಟದಲ್ಲಿ ಅವರ ಕೊರತೆ ಕಾಡಿತು. ಅಶ್ವಿನ್ ಬದಲಿಗೆ ದೇವದತ್ತ ಪಡಿಕ್ಕಲ್ ಅವರು ಬದಲೀ ಫೀಲ್ಡರ್ ಆಗಿ ಕಣಕ್ಕಿಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT