ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 4th Test: ಭಾರತಕ್ಕೆ ಸರಣಿ ಜಯದ ನಿರೀಕ್ಷೆ

ರಾಂಚಿ: ನಾಲ್ಕನೇ ಟೆಸ್ಟ್ ಇಂದಿನಿಂದ* ಆಕಾಶ್ ದೀಪ್‌ಗೆ ಅವಕಾಶ ಸಾಧ್ಯತೆ
Published 23 ಫೆಬ್ರುವರಿ 2024, 0:30 IST
Last Updated 23 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಂಚಿ: ದಿಗ್ಗಜ ಆಟಗಾರ ಎಂ.ಎಸ್‌.ಧೋನಿ ಅವರ ತವರಿನಲ್ಲಿ ಭಾರತಕ್ಕೆ ಸರಣಿ ಜಯದ ಅವಕಾಶ ಒದಗಿರುವುದು ಆಕಸ್ಮಿಕ. ಆದರೆ ಇಂಗ್ಲೆಂಡ್‌ ವಿರುದ್ಧ ಶುಕ್ರವಾರ ಆರಂಭವಾಗುವ ನಾಲ್ಕನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ತಂಡದ ಸಮತೋಲನದ ಬಗ್ಗೆ ಕೆಲಮಟ್ಟಿಗೆ ಸಂದೇಹಗಳೂ ಇವೆ.

ಕಾರ್ಯಭಾರ ತಗ್ಗಿಸುವ ಭಾಗವಾಗಿ ಮುಂಚೂಣಿ ವೇಗದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಕೆಲವು  ಆಟಗಾರರು ಗಾಯಾಳಾಗಿದ್ದಾರೆ. ಜೊತೆಗೆ ಪಿಚ್‌ ಹೇಗೆ ವರ್ತಿಸಬಹುದೆಂಬುದು ಅಂದಾಜಿಗೆ ನಿಲುಕುತ್ತಿಲ್ಲ. ಭಾರತ ಐದು ಟೆಸ್ಟ್‌ಗಳ ಸರಣಿಯಲ್ಲಿ ಈಗ 2–1 ಮುನ್ನಡೆ ಸಾಧಿಸಿದೆ.

ಮಾಮೂಲಿನಂತೆ ಈ ಪಿಚ್‌ ಸಹ ಸ್ಪಿನ್ನರ್‌ಗಳಿಗೆ (ಭಾರತದಲ್ಲಿ ಸಾಮಾನ್ಯ) ನೆರವಾಗುವ ನಿರೀಕ್ಷೆಯಿದೆ. ಆದರೆ ಎಷ್ಟನೇ ದಿನ ಮತ್ತು ಯಾವ ಮಟ್ಟದಲ್ಲಿ ಎಂಬುದು ಗೋಜಲಾಗಿದೆ. ಇಲ್ಲಿ ಆಡಿರುವ ಕೊನೆಯ ಕೆಲವು ಪಂದ್ಯಗಳಲ್ಲಿ ಪಿಚ್‌ ಬೇರೆ ಬೇರೆ ರೀತಿ ವರ್ತಿಸಿದೆ.

ವಿಕೆಟ್‌ನ ಎರಡೂ ಕಡೆ ಚೆಂಡು ತಿರುವು ಪಡೆಯಲು ಅನುಕೂಲವಾಗುವ ಮುನ್ಸೂಚನೆಗಳು ಕಾಣುತ್ತಿವೆ. ಕೆಲವೇ ವರ್ಷಗಳ ಹಿಂದೆ ಇಂಥ ಪಿಚ್‌ ಭಾರತಕ್ಕೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಅಂಥ ಆತ್ಮವಿಶ್ವಾಸ ಕಾಣುತ್ತಿಲ್ಲ.

ಇಂಗ್ಲೆಂಡ್‌ ಆಟಗಾರರು ಚೆಂಡಿನ ಲೆಂತ್‌ ಅಳೆದು ಮುನ್ನುಗ್ಗಿ ಹೊಡೆಯುವ ಬದಲು ಸ್ವೀಪ್‌, ರಿವರ್ಸ್‌ ಸ್ವೀಪ್‌ನಂಥ ಹೊಡೆತಗಳನ್ನು ನೆಚ್ಚಿಕೊಂಡಿದ್ದಾರೆ. ಅದರಲ್ಲಿ ವಿಫಲರಾದಾಗ, ಮುಜುಗರವಾಗುವಂತೆ ಕುಸಿತ ಕಂಡಿದ್ದಾರೆ. ಮೂರನೇ ಟೆಸ್ಟ್‌ನ ಅಂತಿಮ ದಿನ ಪ್ರವಾಸಿಗರು 30.4 ಓವರುಗಳಲ್ಲಿ 122 ರನ್‌ಗಳಿಗೆ ಉರುಳಿದ್ದು ಇದಕ್ಕೆ ನಿದರ್ಶನ. ಬಾಝ್‌ಬಾಲ್‌ ತಂತ್ರ ತಿರುಗುಬಾಣವಾಯಿತು. ಆದರೆ ಬೆನ್‌ ಸ್ಟೋಕ್ಸ್‌ ವಿಚಲಿತರಾಗಿಲ್ಲ. ಉಳಿದ ಪಂದ್ಯಗಳಲ್ಲೂ ಅದೇ ರೀತಿಯ ಅಕ್ರಮಣಕಾರಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಪಿಚ್‌ ಬಗ್ಗೆ ಇಂಗ್ಲೆಂಡ್‌ ಹೆಚ್ಚು ತಲೆಕೆಡಿಸಿಕೊಂಡಿದೆ. ನಾಯಕ ಸ್ಟೋಕ್ಸ್‌ ಅವರಿಂದ ಹಿಡಿದು ಓಲಿ ಪೋಪ್‌ ವರೆಗೆ ಪಿಚ್‌ ಹೇಗೆ ವರ್ತಿಸಬಹುದೆಂಬ ಬಗ್ಗೆ ಸಾಕಷ್ಟು ಗೊಂದಲವಿದೆ. ಇದೊಂದು ಬಿಡಿಸಲಾಗ ಒಗಟಾಗಿದೆ. ಪರಿಸ್ಥಿತಿ ಮತ್ತು ಪಿಚ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದ ತಂಡ ಈಗ ಆ ಬಗ್ಗೆಯೇ ಯೋಚಿಸುತ್ತಿದೆ.

ಭಾರತ ತಂಡದ ಕಥೆಯೂ ಭಿನ್ನವಾಗಿಲ್ಲ. ಅನುಭವಿ ಕೋಚ್‌ ರಾಹುಲ್ ದ್ರಾವಿಡ್ ಅವರೂ ಸಹ ಇದನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿದ್ದರು. ಗುರುವಾರವೂ ಅವರು, ಸಣ್ಣದಾಗಿ ಕತ್ತರಿಸಿದ ಪಿಚ್‌ ಮೇಲಿನ ಹುಲ್ಲು, ಶುಚಿಗೊಳಿಸುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ಕ್ಯುರೇಟರ್‌ ಡಾ.ಶ್ಯಾಮ್ ಬಹಾದ್ದೂರ್ ಸಿಂಗ್ ಮತ್ತು ಇತರ ಸಿಬ್ಬಂದಿ ಜೊತೆ ಚರ್ಚಿಸಿದರು.

ಈ ಪಂದ್ಯದಲ್ಲಿ ಬೂಮ್ರಾ ಅವರಿಂದ ತೆರವಾಗಿರುವ ಸ್ಥಾನದಲ್ಲಿ ಆಕಾಶ್‌ ದೀಪ್‌ ಅವರಿಗೆ ಪದಾರ್ಪಣೆ ಅವಕಾಶ ಸಿಗಬಹುದು. ಮೂರನೇ ಟೆಸ್ಟ್‌ನಲ್ಲಿ ವಿಫಲರಾದ ರಜತ್ ಪಾಟಿದಾರ್ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು.

ಎರಡು ಬದಲಾವಣೆ:

ಇನ್ನೊಂದೆಡೆ ಮೂರನೇ ಟೆಸ್ಟ್‌ನ ದಯನೀಯ ಸೋಲು ಇಂಗ್ಲೆಂಡ್ ತಂಡದ ಆತ್ಮವಿಶ್ವಾಸವನ್ನು ಕೆಲಮಟ್ಟಿಗೆ ಕದಡಿಸಿದೆ.

ಈ ಹಿಂದಿನ ಪಂದ್ಯಗಳಂತೆ ಈ ಪಂದ್ಯಕ್ಕೂ ಇಂಗ್ಲೆಂಡ್ ಒಂದು ದಿನ ಮೊದಲೇ 11ರ ತಂಡವನ್ನು ಅಂತಿಮಗೊಳಿಸಿದೆ. ಮಾರ್ಕ್ ವುಡ್‌ ಬದಲಿಗೆ 30 ವರ್ಷದ ವೇಗದ ಬೌಲರ್ ಓಲಿ ರಾಬಿನ್ಸನ್ ತಂಡವನ್ನು ಸೇರಿಕೊಂಡಿದ್ದಾರೆ. ರೆಹಾನ್ ಆಹ್ಮದ್ ಬದಲು ಆಫ್‌ ಸ್ಪಿನ್ನರ್, 20 ವರ್ಷದ ಶೋಯೆಬ್ ಬಷೀರ್ ಅವರಿಗೆ ಪದಾರ್ಪಣೆ ಅವಕಾಶ ನೀಡಿದೆ.

ಮಳೆ ಸಾಧ್ಯತೆ:

ಹವಾಮಾನ ವರದಿಯ ಕೊನೆಯ ಮೂರು ದಿನ ಮಳೆಯಾಗುವ ಸಾಧ್ಯತೆಯೂ ಇದೆ. ಗುರುವಾರ ಸಂಜೆ ಜೋರು ಗಾಳಿಯ ನಂತರ ತುಂತುರು ಮಳೆಯಾಗಿದೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್‌ ಖಾನ್, ಧ್ರುವ್ ಜುರೇಲ್ (ವಿಕೆಟ್‌ ಕೀಪರ್‌), ಕೆ.ಎಸ್‌.ಭರತ್ (ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ಆರ್‌.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.

ಇಂಗ್ಲೆಂಡ್‌ (11ರ ತಂಡ): ಬೆನ್ ಸ್ಟೋಕ್ಸ್‌ (ನಾಯಕ), ಜಾಕ್ ಕ್ರಾಲಿ, ಬೆನ್ ಡಕೆಟ್, ಜೋ ರೂಟ್, ಜಾನಿ ಬೇಸ್ಟೊ, ಶೋಯೆಬ್ ಬಷೀರ್, ಬೆನ್ ಫೋಕ್ಸ್‌, ಟಾಮ್‌ ಹಾರ್ಟ್ಲಿ, ಓಲಿ ಪೋಪ್, ಓಲಿ ರಾಬಿನ್ಸನ್, ಜೇಮ್ಸ್‌ ಆ್ಯಂಡರ್ಸನ್.

ಪಂದ್ಯ ಆರಂಭ: ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT