ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind VS Eng: ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಸೇರಿಕೊಂಡ ಪ್ರಸಿದ್ಧ ಕೃಷ್ಣ

Last Updated 1 ಸೆಪ್ಟೆಂಬರ್ 2021, 10:58 IST
ಅಕ್ಷರ ಗಾತ್ರ

ಲಂಡನ್: ನಾಳೆಯಿಂದ ಓವಲ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

25ರ ಹರೆಯದ ಪ್ರಸಿದ್ಧ ಕೃಷ್ಣ ಅವರು ಸರಣಿ ಆರಂಭವಾದಾಗಿನಿಂದ ತಂಡದ ಜೊತೆಯೇ ಇದ್ದು, ಅವರನ್ನು ಹೆಚ್ಚುವರಿ ಆಟಗಾರನಾಗಿ ಕರೆದೊಯ್ಯಲಾಗಿದೆ.

‘ತಂಡದ ಮ್ಯಾನೇಜ್‌ಮೆಂಟ್‌ನ ಕೋರಿಕೆಯ ಮೇರೆಗೆ ಆಯ್ಕೆ ಸಮಿತಿಯು ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನು ನಾಲ್ಕನೇ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಸೇರ್ಪಡೆ ಮಾಡಿದೆ’ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬಲಗೈ ವೇಗದ ಬೌಲರ್ ಆಗಿರುವ ಕೃಷ್ಣ, ಮಾರ್ಚ್‌ನಲ್ಲಿ ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಎಲ್ಲಾ ಮೂರು ಪಂದ್ಯಗಳನ್ನು ಆಡಿದ್ದ ಅವರು, ಪದಾರ್ಪಣೆ ಪಂದ್ಯದಲ್ಲೇ 54 ರನ್ ನೀಡಿ 4 ವಿಕೆಟ್ ಉರುಳಿಸುವ ಜೊತೆಗೆ ಸರಣಿಯಲ್ಲಿ ಒಟ್ಟು 6 ವಿಕೆಟ್ ಪಡೆದಿದ್ದರು.

ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಪ್ರಸಿದ್ಧ ಕೃಷ್ಣ 20.26 ಸರಾಸರಿ ಮತ್ತು 2.79 ಎಕಾನಮಿ ದರದಲ್ಲಿ 34 ವಿಕೆಟ್ ಪಡೆದಿದ್ದಾರೆ.

ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದ ನಾಲ್ಕು ಆಟಗಾರರಲ್ಲಿ ಕೃಷ್ಣ ಕೂಡ ಒಬ್ಬರಾಗಿದ್ದರು. ಮೇ 8 ರಂದು ಕೋವಿಡ್ -19 ಪಾಸಿಟಿವ್ ಬಂದ ಬಳಿಕ ಐಪಿಎಲ್‌ ಸರಣಿ ರದ್ದಾಗಿತ್ತು. ಬಳಿಕ ಚೇತರಿಸಿಕೊಂಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡ ಭಾರತ ತಂಡವನ್ನು ಸೇರಿಕೊಂಡಿದ್ದರು.

5 ಪಂದ್ಯಗಳ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿವೆ.

ಭಾರತ ತಂಡ: ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಚೆತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT