ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಆಕ್ರಮಣಕಾರಿ ಇಂಗ್ಲೆಂಡ್ ಎದುರು ಆತಂಕಕ್ಕೊಳಗಾದ ಭಾರತ: ಆ್ಯಂಡರ್ಸನ್

Published 4 ಫೆಬ್ರುವರಿ 2024, 14:54 IST
Last Updated 4 ಫೆಬ್ರುವರಿ 2024, 14:54 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತದ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ ವೇಳೆ ಆತಂಕಕ್ಕೊಳಗಾದರು. ರೋಹಿತ್‌ ಶರ್ಮಾ ಬಳಗ ನೀಡಿರುವ 399 ರನ್‌ಗಳ ಗುರಿಯನ್ನು ತಮ್ಮ ತಂಡ ಯಶಸ್ವಿಯಾಗಿ ಬೆನ್ನತ್ತಲಿದೆ ಎಂದು ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್ ಹೇಳಿದ್ದಾರೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಯ ಎರಡನೇ ಪಂದ್ಯವು ಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಯಶಸ್ವಿ ಜೈಸ್ವಾಲ್‌ ಗಳಿಸಿದ ಅಮೋಘ ದ್ವಿಶತಕದ ಬಲದಿಂದ 1ನೇ ಇನಿಂಗ್ಸ್‌ನಲ್ಲಿ 396 ರನ್‌ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್‌ 253 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಹೀಗಾಗಿ, ಟೀಂ ಇಂಡಿಯಾ 143 ರನ್‌ ಅಂತರದ ಮುನ್ನಡೆ ಗಳಿಸಿತಾದರೂ ಎರಡನೇ ಇನಿಂಗ್ಸ್‌ನಲ್ಲಿ 255 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿದೆ.

ಈ ಕುರಿತು ಮಾತನಾಡಿರುವ ಆ್ಯಂಡರ್ಸನ್, 'ಅವರು (ಭಾರತದ ಬ್ಯಾಟರ್‌ಗಳು) ಬ್ಯಾಟಿಂಗ್ ಮಾಡುತ್ತಿದ್ದಾಗ, ಆತಂಕಕ್ಕೊಳಗಾದಂತೆ ಕಂಡರು. ಎಷ್ಟು ರನ್‌ ಕಲೆಹಾಕಬೇಕಾಗಬಹುದು ಎಂಬ ಸ್ಪಷ್ಟತೆಯೂ ಅವರಲ್ಲಿ ಕಾಣಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಅಷ್ಟು ರನ್‌ ಮುನ್ನಡೆ ಗಳಿಸಿದ್ದರೂ ತುಂಬಾ ಎಚ್ಚರಿಕೆಯ ಆಟಕ್ಕೆ ಮುಂದಾದರು. ಒಂದುವೇಳೆ, ಭಾರತ 600 ರನ್‌ಗಳ ಗುರಿ ನೀಡಿದರೂ, ಅದನ್ನು ಬೆನ್ನತ್ತುವ ಕುರಿತು ಕೋಚ್‌ ಅವರೊಂದಿಗೆ ನಿನ್ನೆ ರಾತ್ರಿ ಚರ್ಚಿಸಿದ್ದೆವು' ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ ತಂಡ ಭಾರತದ ವಿರುದ್ಧ 2022ರಲ್ಲಿ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಪಂದ್ಯದ 4ನೇ ಇನಿಂಗ್ಸ್‌ನಲ್ಲಿ 378 ರನ್‌ಗಳ ಗುರಿ ಬೆನ್ನತ್ತಿ ಜಯಿಸಿತ್ತು. 2008ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್‌ ನೀಡಿದ್ದ 387 ರನ್‌ಗಳ ಕಠಿಣ ಗುರಿ ಎದುರು ಗೆದ್ದಿತ್ತು.

ಆ್ಯಂಡರ್ಸನ್ ಬೌಲಿಂಗ್‌ ವೈಖರಿ

ಆ್ಯಂಡರ್ಸನ್ ಬೌಲಿಂಗ್‌ ವೈಖರಿ

ಪಿಟಿಐ ಚಿತ್ರ

ಸದ್ಯದ ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಯುವ ಬ್ಯಾಟರ್‌ ಶುಭಮನ್ ಗಿಲ್ ಶತಕದ (104 ರನ್) ಬಲದಿಂದ ಭಾರತ ನೀಡಿರುವ 399 ರನ್‌ ಗುರಿ ಬೆನ್ನತ್ತಿರುವ ಆಂಗ್ಲರು, 14 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 67 ರನ್‌ ಗಳಿಸಿದ್ದಾರೆ. ಜಾಕ್‌ ಕ್ರಾಲಿ (29) ಮತ್ತು ರೆಹಾನ್‌ ಅಹ್ಮದ್‌ (9) ಕ್ರೀಸ್‌ನಲ್ಲಿದ್ದಾರೆ. 27 ಎಸೆತಗಳಲ್ಲಿ 28 ರನ್‌ ಗಳಿಸಿದ್ದ ಬೆನ್‌ ಡಕೆಟ್‌ ಔಟಾಗಿದ್ದಾರೆ.

'ಇದು (ಇಂಗ್ಲೆಂಡ್‌ ಬ್ಯಾಟಿಂಗ್‌ ವೈಖರಿ) ನಾವು ನಾಳೆಯೇ ಗುರಿ ಬೆನ್ನತ್ತಲು ಪ್ರಯತ್ನಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿದೆ. ಇನ್ನೂ 180 ಓವರ್‌ಗಳ ಆಟ ಬಾಕಿ ಇದೆ ಎಂಬುದು ಗೊತ್ತಿದೆ. ಆದರೆ, 60 ಇಲ್ಲವೇ 70 ಓವರ್‌ಗಳಲ್ಲಿ ಪಂದ್ಯ ಮುಗಿಸಲು ನೋಡುತ್ತೇವೆ. ನಾವು ಆಡುವ ರೀತಿ ಅದು' ಎನ್ನುವ ಮೂಲಕ ತಮ್ಮ ತಂಡದ ಆಕ್ರಮಣಕಾರಿ ಬ್ಯಾಟಿಂಗ್‌ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

'ಬಾಝ್‌ಬಾಲ್‌' ಶೈಲಿಯಲ್ಲಿ ಬ್ಯಾಟ್‌ ಬೀಸುತ್ತಿರುವ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು ಇನ್ನೂ 322 ರನ್‌ ಬೇಕಿದೆ.

695 ವಿಕೆಟ್‌
ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದಿದ್ದ ಆ್ಯಂಡರ್ಸನ್‌, ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ ಉರುಳಿಸಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಡೆದ ವಿಕೆಟ್‌ಗಳ ಸಂಖ್ಯೆಯನ್ನು 695ಕ್ಕೆ ಏರಿಸಿಕೊಂಡಿದ್ದಾರೆ.

41 ವರ್ಷದ ಅ್ಯಂಡರ್ಸನ್‌ ಈವರೆಗೆ 183 ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಈ ಮಾದರಿಯಲ್ಲಿ ಹೆಚ್ಚು ವಿಕೆಟ್‌ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

800 ವಿಕೆಟ್‌ ಉರುಳಿಸಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಮತ್ತು 708 ವಿಕೆಟ್‌ ಪಡೆದಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್‌ ಮಾತ್ರವೇ ಇಂಗ್ಲೆಂಡ್‌ ವೇಗಿಗಿಂತ ಮುಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT