ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಗಿಲ್ ಶತಕ, ಭಾರತ 255ಕ್ಕೆ ಆಲೌಟ್; ಇಂಗ್ಲೆಂಡ್‌ಗೆ 399 ರನ್ ಗುರಿ

Published 4 ಫೆಬ್ರುವರಿ 2024, 8:58 IST
Last Updated 4 ಫೆಬ್ರುವರಿ 2024, 8:58 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ‘ಕೋಚ್ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಇವತ್ತು ಅವರ ನಿರೀಕ್ಷೆಗೆ ತಕ್ಕಂತೆ ಆಡಿದ್ದೇನೆ. ತಂಡಕ್ಕೆ ಅತ್ಯಗತ್ಯವಾಗಿದ್ದ ಸಂದರ್ಭದಲ್ಲಿ ಶತಕ ಗಳಿಸಿರುವುದು ತೃಪ್ತಿ ತಂದಿದೆ’–

ಭಾರತ ಕ್ರಿಕೆಟ್ ತಂಡದ ‘ಯುವರಾಜ’ ಶುಭಮನ್ ಗಿಲ್ ಅವರ ಸಂತಸದ ನುಡಿಗಳಿವು.

ಇಂಗ್ಲೆಂಡ್ ಎದುರು ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ ನಂತರದ ಅವರು ಈ ಮಾತು ಹೇಳಲು ಕಾರಣವಿತ್ತು. ದೀರ್ಘ ಸಮಯದಿಂದ ಲಯ ಕಂಡುಕೊಳ್ಳಲು ಪರದಾಡಿದ್ದ ಅವರು ಇಲ್ಲಿ ಅಮೋಘ ಶತಕ ಗಳಿಸಿದರು. 24 ವರ್ಷದ ಗಿಲ್ (104; 147ಎಸೆತ) ಬ್ಯಾಟಿಂಗ್ ಬಲದಿಂದ ಭಾರತ ತಂಡವು ಇಂಗ್ಲೆಂಡ್‌ಗೆ 399 ರನ್‌ಗಳ ಕಠಿಣ ಗುರಿಯೊಡ್ಡಿದೆ.

ಭಾನುವಾರ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಸಮಯವಿರುವುದರಿಂದ ಗುರಿ ಮುಟ್ಟುವ ಅವಕಾಶ ಪ್ರವಾಸಿಗರಿಗೆ ಇದೆ. ಆದರೆ, ಡಾ. ವೈಎಸ್‌ಆರ್ ಎಸಿಎ–ವಿಡಿಸಿಎ ಕ್ರೀಡಾಂಗಣದ ಪಿಚ್‌ನಲ್ಲಿ ಚೆಂಡು ಹೆಚ್ಚು ತಿರುವು ಪಡೆಯುತ್ತಿದೆ. ಅನಿರೀಕ್ಷಿತ ಬೌನ್ಸ್‌ ಮತ್ತು ನಿಧಾನಗತಿಯ ಎಸೆತಗಳನ್ನು ಎದುರಿಸಿ ಆಡುವುದು ಸುಲಭವಲ್ಲ. ಆದರೆ ಮೊದಲ ಟೆಸ್ಟ್‌ನಲ್ಲಿ ಗೆದ್ದಿದ್ದ ಇಂಗ್ಲೆಂಡ್ ಈ ಸರಣಿಯಲ್ಲಿ 2–0 ಮುನ್ನಡೆ ಗಳಿಸುವ ಛಲದಲ್ಲಿದೆ. 

ಗಿಲ್ ಶತಕ ಸೊಬಗು

ಶನಿವಾರ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 28 ರನ್‌ ಗಳಿಸಿತ್ತು.

ಭಾನುವಾರ ಬೆಳಿಗ್ಗೆ ಆಟ ಮುಂದುವರಿಸಿದ ಭಾರತ ತಂಡಕ್ಕೆ ಇಂಗ್ಲೆಂಡ್ ವೇಗಿ ಜೇಮ್ಸ್‌ ಅ್ಯಂಡರ್ಸನ್ ಬಲವಾದ ಪೆಟ್ಟುಕೊಟ್ಟರು. ತಮ್ಮ ಆರಂಭಿಕ ಸ್ಪೆಲ್‌ನಲ್ಲಿ (4–1–6–2) ರೋಹಿತ್ ಮತ್ತು ಮೊದಲ ಇನಿಂಗ್ಸ್‌ ದ್ವಿಶತಕ ಸಾಧಕ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಗಳಿಸಿದರು.

ಈ ಹಂತದಲ್ಲಿ ಗಿಲ್ ತಮ್ಮ ನೈಜ ಆಟ ತೋರಿಸುವ ಅವಕಾಶವನ್ನು ಕೈಬಿಡಲಿಲ್ಲ. ಈ ಸರಣಿಯ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವಿಫಲರಾಗಿದ್ದರು. ಆದರೆ ಇಲ್ಲಿ ಚೆಂದದ ಡ್ರೈವ್, ಸ್ವೀಪ್‌, ರಿವರ್ಸ್ ಸ್ವೀಪ್‌ಗಳನ್ನು ಆಡಿದರು.

ಮೂರನೇ ವಿಕೆಟ್ ಜೊತೆಯಾಟದಲ್ಲಿ ಗಿಲ್ ಅವರು ಶ್ರೇಯಸ್ ಅಯ್ಯರ್ ಜೊತೆಗೆ 81  ರನ್ ಗಳಿಸಿದರು. ಅಕ್ಷರ್ ಪಟೇಲ್ ಜೊತೆಗೆ ಐದನೇ ವಿಕೆಟ್‌ಗೆ 89 ರನ್‌ ಸೇರಿಸಿದರು. 132 ಎಸೆತಗಳಲ್ಲಿ ಶತಕದ ಗಡಿ ತಲುಪಿದರು.  ಅದರಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ 3ನೇ ಶತಕ.

ಚಹಾ ವಿರಾಮಕ್ಕೂ ಸ್ವಲ್ಪ ಮುಂಚೆ ಗಿಲ್ ವಿಕೆಟ್ ಗಳಿಸಿದ ಶೋಯಬ್ ಬಷೀರ್ ನಿಟ್ಟುಸಿರು ಬಿಟ್ಟರು.

ಅಕ್ಷರ್ ಮತ್ತು ಅಶ್ವಿನ್ (29 ರನ್) ಅವರು ತಂಡದ ಮೊತ್ತ ಹೆಚ್ಚಿಸುವಲ್ಲಿ ಕಾಣಿಕೆ ನೀಡಿದರು. ಆದರೆ ಸ್ಪಿನ್ನರ್ ಟಾಮ್ ಹಾರ್ಟ್ಲಿ (77ಕ್ಕೆ4) ಮತ್ತು ರೆಹಾನ್ ಅಹಮದ್ (88ಕ್ಕೆ3) ಅವರು ಪರಿಣಾಮಕಾರಿ ದಾಳಿ ನಡೆಸಿದರು. ಆತಿಥೇಯ ತಂಡವು 255 ರನ್‌ಗಳಿಗೆ ಇನಿಂಗ್ಸ್ ಮುಗಿಸಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಬೆನ್ ಡಕೆಟ್ (28 ರನ್) ಅವರ ವಿಕೆಟ್ ಗಳಿಸಿರುವ ಅಶ್ವಿನ್ ಭರವಸೆ ಮೂಡಿಸಿದ್ದಾರೆ.  ಜಾಕ್ ಕ್ರಾಲಿ (ಬ್ಯಾಟಿಂಗ್ 29) ಮತ್ತು ರೆಹಾನ್ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT