ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಜೇಮ್ಸ್ ಆ್ಯಂಡರ್ಸನ್ ದಾಖಲೆ ಸರಿಗಟ್ಟಿದ ಅಶ್ವಿನ್

Last Updated 8 ಫೆಬ್ರುವರಿ 2021, 13:26 IST
ಅಕ್ಷರ ಗಾತ್ರ

ಚೆನ್ನೈ: ನಿರ್ಜೀವ ಪಿಚ್ ಅಂದುಕೊಂಡವರಿಗೆ ನಿಜಕ್ಕೂ ಅಚ್ಚರಿ ಕಾದಿರಬಹುದು. ಯಾಕೆಂದರೆ ನಾಲ್ಕನೇ ದಿನದಾಟದಲ್ಲಿ ಚೆನ್ನೈನ ಚೆಪಾಕ್ ಮೈದಾನ ಏಕಾಏಕಿ ಬದಲಾಗಿತ್ತು. ಇಲ್ಲಿ ಬದಲಾಗಿತ್ತು ಅನ್ನೋದಕ್ಕಿಂತಲೂ ಮಿಗಿಲಾಗಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ತಮ್ಮ ಸಂಪೂರ್ಣ ಅನುಭವ ಸಂಪತ್ತಿನೊಂದಿಗೆ ಬೌಲರ್‌ಗಳಿಗೆ ನೆರವಿಲ್ಲದ ಪಿಚ್‌ನಲ್ಲೂ ಚಾಣಕ್ಷತೆಯನ್ನು ಮೆರೆದರು ಎಂದು ಹೇಳಿದರೆ ತಪ್ಪಾಗಲಾರದು.

ದಿನ ಸಾಗಿದಂತೆ ಬಿರುಕು ಬಿದ್ದು ಪಿಚ್ ಬೌಲರ್‌ಗಳಿಗೆ ನೆರವಾಗುವುದು ಸಹಜ. ಆದರೆ ಅದರ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು. ಹೌದು, ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಅಶ್ವಿನ್ ಆರು ವಿಕೆಟ್ (61ಕ್ಕೆ 6 ) ಸಾಧನೆ ಮಾಡಿದ್ದಾರೆ.

ಈ ಮೂಲಕ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ 28ನೇ ಬಾರಿಗೆ ಐದು ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದೆನಿಸಿದ್ದಾರೆ. ಈ ಪೈಕಿ 22 ಬಾರಿ ತವರಿನ ನೆಲದಲ್ಲಿ ಐದು ವಿಕೆಟ್ ಸಾಧನೆ ಮೆರೆದಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ಯಯ್ಯ ಮುರಳೀಧರನ್ (45), ರಂಗನಾ ಹೇರಾತ್ (26) ಮತ್ತು ಭಾರತದ ಅನಿಲ್ ಕುಂಬ್ಳೆ (25) ಬಳಿಕದ ಸ್ಥಾನದಲ್ಲಿ ಅಶ್ವಿನ್ ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಏಷ್ಯಾ ನೆಲದಲ್ಲಿ 26ನೇ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ದ್ವಿತೀಯ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ ಹೊರದಬ್ಬಿದ ಆರ್. ಅಶ್ವಿನ್ ವಿಶಿಷ್ಟ ದಾಖಲೆ ಬರೆದರು. ಅಲ್ಲದೆ 100ಕ್ಕೂ ಹೆಚ್ಚು ವರ್ಷಗಳಲ್ಲಿ ಇನ್ನಿಂಗ್ಸ್‌ನ ಪ್ರಥಮ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಖ್ಯಾತಿಗೆ ಪಾತ್ರವಾದರು.

114 ವರ್ಷಗಳ ಹಿಂದೆ 1907ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾದ ಬೆರ್ಟ್ ವೊಗ್ಲರ್ ಇದೇ ಸಾಧನೆ ಮಾಡಿದ್ದರು. ಅಂದ ಹಾಗೆ ಟೆಸ್ಟ್ ಇನ್ನಿಂಗ್ಸ್‌ನ ಪ್ರಥಮ ಎಸೆತದಲ್ಲೇ ವಿಕೆಟ್ ಪಡೆದ ಮೊತ್ತ ಮೊದಲ ಸ್ಪಿನ್ನರ್ ಎಂಬ ದಾಖಲೆಯು ಇಂಗ್ಲೆಂಡ್‌ನ ಬಾಬಿ ಪೀಲ್ ಹೆಸರಲ್ಲಿದೆ. ಅವರು 1888ನೇ ಇಸವಿಯಲ್ಲಿ ಈ ದಾಖಲೆ ಬರೆದಿದ್ದರು.

ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು 5 ವಿಕೆಟ್ ಸಾಧನೆ:
1. ಮುತ್ತಯ್ಯ ಮುರಳೀಧರನ್: 67 (133 ಪಂದ್ಯ)
2. ಶೇನ್ ವಾರ್ನ್: 37 (145 ಪಂದ್ಯ)
3. ಸರ್ ಆರ್‌ಜೆ ಹಾಡ್ಲಿ: 36 (86 ಪಂದ್ಯ)
4. ಅನಿಲ್ ಕುಂಬ್ಳೆ: 35 (132 ಪಂದ್ಯ)
5. ರಂಗನಾ ಹೇರಾತ್: 34 (93 ಪಂದ್ಯ)
6. ಜೇಮ್ಸ್ ಆಂಡ್ರೆಸನ್: 30 (158* ಪಂದ್ಯ)
7. ಗ್ಲೆನ್ ಮೆಕ್‌ಗ್ರಾಥ್: 29 (124 ಪಂದ್ಯ)
8. ಆರ್. ಅಶ್ವಿನ್: 28 (75* ಪಂದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT