ಭಾನುವಾರ, ಮೇ 22, 2022
26 °C

IND vs ENG: ಡಾನ್ ಬ್ರಾಡ್ಮನ್ ಎಲೈಟ್ ಪಟ್ಟಿಯಲ್ಲಿ ಗುರುತಿಸಿದ ರೋಹಿತ್ ಶರ್ಮಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ದ ಇಲ್ಲಿನ ಚೆಪಾಕ್ ಮೈದಾನದಲ್ಲಿ ಆರಂಭವಾಗಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.

ಅನುಭವಿ ಆರಂಭಿಕ ರೋಹಿತ್ ಶರ್ಮಾ (161) ಆಕರ್ಷಕ ಟೆಸ್ಟ್ ಶತಕವನ್ನು ಬಾರಿಸಿ ಉತ್ತಮ ಮೊತ್ತ ಪೇರಿಸಲು ಭಾರತಕ್ಕೆ ನೆರವಾದರು. ಉಪ ನಾಯಕ ಅಜಿಂಕ್ಯ ರಹಾನೆ ಕೂಡಾ ಸಮಯೋಚಿತ ಅರ್ಧಶತಕ ಬಾರಿಸಿದ್ದಾರೆ. ಈ ಸಂಬಂಧ ದಾಖಲೆಗಳ ಅಂಕಿಅಂಶಗಳ ಪಟ್ಟಿಯಲ್ಲಿ ಇಲ್ಲಿ ಕೊಡಲಾಗಿದೆ.

ಬ್ರಾಡ್ಮನ್ ಬಳಿಕ ರೋಹಿತ್...
ಟೆಸ್ಟ್ ವೃತ್ತಿ ಜೀವನದಲ್ಲಿ ಏಳನೇ ಶತಕ ಬಾರಿಸಿರುವ ರೋಹಿತ್ ಶರ್ಮಾ, ತವರು ಮೈದಾನದಲ್ಲಿ 1,500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ತವರಿನ ಮೈದಾನದಲ್ಲಿ 1500ಕ್ಕೂ ಹೆಚ್ಚು ರನ್ ಗಳಿಸಿ ಅತಿ ಹೆಚ್ಚು ಸರಾಸರಿಯನ್ನು ಕಾಯ್ದುಕೊಂಡಿರುವ ಬ್ಯಾಟ್ಸ್‌ಮನ್‌ಗಳ ಎಲೈಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಬಳಿಕದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ತವರಿನಲ್ಲಿ ರೋಹಿತ್ ಶರ್ಮಾ ಆಡಿರುವ 16 ಟೆಸ್ಟ್ ಪಂದ್ಯಗಳಲ್ಲಿ 83.55ರ ಸರಾಸರಿಯಲ್ಲಿ 1504 ರನ್ ಪೇರಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬ್ರಾಡ್ಮನ್ 33 ಪಂದ್ಯಗಳಲ್ಲಿ 98.22ರ ಸರಾಸರಿಯಲ್ಲಿ 4,322 ರನ್ ಗಳಿಸಿದ್ದಾರೆ. ಇದರಲ್ಲಿ 18 ಶತಕಗಳು ಸೇರಿವೆ. ಭಾರತದ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ಆಡಿರುವ 41 ಪಂದ್ಯಗಳಲ್ಲಿ 13 ಶತಕದ ಬೆಂಬಲದೊಂದಿಗೆ 66.20ರ ಸರಾಸರಿಯಲ್ಲಿ 3,641 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 

ಭಾರತದಲ್ಲೇ 7 ಶತಕ ದಾಖಲೆ:
ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನದ ಎಲ್ಲ ಏಳು ಶತಕಗಳನ್ನು ಭಾರತದಲ್ಲೇ ದಾಖಲಿಸಿದ್ದಾರೆ. ಇದರಲ್ಲಿ ನಾಲ್ಕು ಬಾರಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಮೊದಲ ಏಳು ಶತಕಗಳನ್ನು ತವರಿನಲ್ಲೇ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಹಿಂದೆ ಭಾರತದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್, ಮೊದಲ ಆರು ಶತಕಗಳನ್ನು ತಾಯ್ನಾಡಿನಲ್ಲೇ ಬಾರಿಸಿದ್ದರು. ಈ ದಾಖಲೆಯನ್ನೀಗ ರೋಹಿತ್ ಶರ್ಮಾ ಮುರಿದಿದ್ದಾರೆ.

2018ರ ಬಳಿಕ 19ನೇ ಶತಕ...
2018ರ ಬಳಿಕ ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಪಟ್ಟಿಯಲ್ಲಿ 18 ಶತಕಗಳೊಂದಿಗೆ ರೋಹಿತ್ ಶರ್ಮಾ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ (18 ಶತಕ) ಎರಡು ಮತ್ತು ಇಂಗ್ಲೆಂಡ್ ನಾಯಕ ಜೋ ರೂಟ್ (13 ಶತಕ) ಮೂರನೇ ಸ್ಥಾನದಲ್ಲಿದ್ದಾರೆ.

ಈ ಅವಧಿಯಲ್ಲಿ ರೋಹಿತ್ ಟೆಸ್ಟ್‌ನಲ್ಲಿ ನಾಲ್ಕು, ಏಕದಿನದಲ್ಲಿ 13 ಹಾಗೂ ಟಿ20ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: 

ಎಲ್ಲ ಪ್ರಕಾರದಲ್ಲೂ ಶತಕ...
ಇದರೊಂದಿಗೆ ರೋಹಿತ್ ಶರ್ಮಾ, ಶ್ರೀಲಂಕಾ, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ ಜೊತೆಗೆ ಇಂಗ್ಲೆಂಡ್ ವಿರುದ್ಧ ಎಲ್ಲ ಪ್ರಕಾರದಲ್ಲೂ ಶತಕ ದಾಖಲಿಸಿದ ಹಿರಿಮೆಗೆ ಪಾತ್ರರಾದರು.

ವಿರಾಟ್ ಕೊಹ್ಲಿ 11ನೇ ಬಾರಿಗೆ ಡಕ್ ಔಟ್...
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 11ನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಅಲ್ಲದೆ ನಾಯಕರಾಗಿ ಏಳನೇ ಬಾರಿಗೆ ಡಕ್ ಔಟ್ ಆಗಿದ್ದಾರೆ. ಭಾರತದ ಪರ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಪ್ತಾನರಾಗಿ ಅತಿ ಹೆಚ್ಚು ಎಂಟು ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು