ಶುಕ್ರವಾರ, ಮೇ 20, 2022
23 °C

IND vs ENG: ರೂಟ್ 156*; ಸ್ಟೋಕ್ಸ್ ಫಿಫ್ಟಿ; ಭೋಜನ ವಿರಾಮಕ್ಕೆ ಇಂಗ್ಲೆಂಡ್ 355/3

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಲ್ಲಿನ ಚೆಪಾಕ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (156*) ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 119 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 355 ರನ್ ಪೇರಿಸಿದ್ದು, ಬೃಹತ್ ಮೊತ್ತದತ್ತ ಮುನ್ನಡೆದಿದೆ. 

ರೂಟ್‌ಗೆ ಉತ್ತಮ ಬೆಂಬಲ ನೀಡುತ್ತಿರುವ ಬೆನ್ ಸ್ಟೋಕ್ಸ್ (63*) ಆಕರ್ಷಕ ಅರ್ಧಶತಕವನ್ನು ಬಾರಿಸಿದ್ದಾರೆ. 

ಮೂರು ವಿಕೆಟ್ ನಷ್ಟಕ್ಕೆ 263 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಎರಡನೇ ದಿನದಾಟದ ಮೊದಲ ಅವಧಿಯಲ್ಲೂ ಭಾರತೀಯ ಬೌಲರ್‌ಗಳನ್ನು ಕಾಡಿದರು. 

100ನೇ ಟೆಸ್ಟ್ ಪಂದ್ಯದಲ್ಲೂ ಸ್ಮರಣೀಯ ಶತಕ ಬಾರಿಸಿರುವ ಜೋ ರೂಟ್ ಕ್ರೀಸಿನಲ್ಲಿ ನೆಲೆಯೂರುವ ಮೂಲಕ ಇಂಗ್ಲೆಂಡ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇವರಿಗೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರಿಂದ ಉತ್ತಮ ಬೆಂಬಲ ದೊರಕಿತು. 

ಇದನ್ನೂ ಓದಿ: 

ಭಾರತೀಯ ಬೌಲರ್‌ಗಳನ್ನು ಬೆವರಿಳಿಸಿದ ರೂಟ್, 100ನೇ ಪಂದ್ಯದಲ್ಲಿ 150 ರನ್‌ಗಳ ಗಡಿ ದಾಟಿದರು. ಈ ಮೂಲಕ ಸತತ ಮೂರನೇ ಪಂದ್ಯದಲ್ಲೂ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದರು. 98 ಹಾಗೂ 99ನೇ ಟೆಸ್ಟ್ ಪಂದ್ಯಗಳಲ್ಲೂ ಜೋ ರೂಟ್ ಶತಕೋತ್ತರ ಶತಕಾರ್ಧದ ಸಾಧನೆ ಮಾಡಿದ್ದರು. 

ದಿನದಾಟದ ಮೊದಲ ಅವಧಿಯಲ್ಲಿ ಒಂದೇ ಒಂದು ವಿಕೆಟ್ ಕಬಳಿಸುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಲಿಲ್ಲ. ಅಲ್ಲದೆ ಈ ಅವಧಿಯಲ್ಲಿ 92 ರನ್‌ಗಳು ಹರಿದುಬಂದಿದ್ದವು. 

277 ಎಸೆತಗಳನ್ನು ಎದುರಿಸಿರುವ ರೂಟ್ 16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 156 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ಸ್ಟೋಕ್ಸ್, 98 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಇದನ್ನೂ ಓದಿ: 

ಪ್ರಸ್ತುತ ಪಂದ್ಯದಲ್ಲಿ ಅಧಿಪತ್ಯ ಸ್ಥಾಪಿಸುವತ್ತ ಮುನ್ನಡೆದಿರುವ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸುವ ಇರಾದೆಯಲ್ಲಿದೆ. 

ಮೊದಲ ದಿನದಾಟದಲ್ಲಿ ನಾಯಕ ರೂಟ್‌ಗೆ ಉತ್ತಮ ಬೆಂಬಲ ನೀಡಿರುವ ಆರಂಭಿಕ ಡಾಮಿನಿಕ್ ಸಿಬ್ಲಿ 87 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು. 

IND vs ENG: ಮೊದಲ ದಿನದಾಟದ ಸಂಪೂರ್ಣ ವರದಿ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು