ಮಂಗಳವಾರ, ಏಪ್ರಿಲ್ 13, 2021
32 °C

IND vs ENG: ರಿಷಭ್ ಪಂತ್ ಶತಕ, ಭಾರತಕ್ಕೆ 89 ರನ್ ಇನ್ನಿಂಗ್ಸ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Rishabh Pant walks off the field after his dismissal. Credit: Reuters photo.

ಅಹಮದಾಬಾದ್: ರಿಷಭ್ ಪಂತ್ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಎರಡೂವರೆ ವರ್ಷಗಳ ನಂತರ ಸ್ವದೇಶದ ಅಂಗಳದಲ್ಲಿ ಶತಕ ದಾಖಲಿಸಿದರು. ಜೊತೆಗೆ ಭಾರತ ತಂಡವನ್ನೂ ಸಂಕಷ್ಟದಿಂದ ಪಾರು ಮಾಡಿದರು.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದ ಎರಡನೇ ದಿನ ಆತಿಥೇಯರು ಅಲ್ಪಮೊತ್ತಕ್ಕೆ ಕುಸಿಯುವ ಹಂತದಲ್ಲಿದ್ದಾಗ ರಿಷಭ್ (101; 118ಎಸೆತ) ಅಪದ್ಭಾಂದವರಾದರು.  ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್  60; 117ಎಸೆತ) ಅವರೊಂದಿಗೆ ಏಳನೇ ವಿಕೆಟ್ ಜೊತೆಯಾಟದಲ್ಲಿ 113 ರನ್‌ ಗಳಿಸಿದ್ದು ಭಾರತದ ಹೋರಾಟಕ್ಕೆ ಮರುಜೀವ ತುಂಬಿತು. ಮೊದಲ ಇನಿಂಗ್ಸ್‌ನಲ್ಲಿ 89 ರನ್‌ಗಳ ಮುನ್ನಡೆ ಸಾಧಿಸಿದೆ.

ಗುರುವಾರ ಟಾಸ್ ಗೆದ್ದ ಇಂಗ್ಲೆಂಡ್ ತಂಡವು 205 ರನ್‌ ಗಳಿಸಿ ಆಲೌಟ್ ಆಗಿತ್ತು. ಅದಕ್ಕುತ್ತರವಾಗಿ ಆತಿಥೇಯ ಬಳಗವು 94 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 294 ರನ್ ಗಳಿಸಿದೆ.  ಅಲ್‌ರೌಂಡರ್ ವಾಷಿಂಗ್ಟನ್ ಮತ್ತು ಅಕ್ಷರ್ ಪಟೇಲ್ (ಬ್ಯಾಟಿಂಗ್ 11) ಕ್ರೀಸ್‌ನಲ್ಲಿದ್ದಾರೆ.

ಓದಿ: .

ರಿಷಭ್ ಪಂತ್ ಕ್ರೀಸ್‌ಗೆ ಬರುವ ಮುನ್ನ ಭಾರತ ತಂಡವು 80 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ ಶರ್ಮಾ  ಅವರೊಂದಿಗೆ ಸೇರಿದ ಪಂತ್ ಆತ್ಮವಿಶ್ವಾಸದ ಸಂಚಲನ ಮೂಡಿಸಿದರು.  ಚೇತೇಶ್ವರ್ ಪೂಜಾರ ವಿಕೆಟ್ ಕಬಳಿಸಿದ್ದ ಸ್ಪಿನ್ನರ್ ಜ್ಯಾಕ್ ಲೀಚ್, ವಿರಾಟ್ ಕೊಹ್ಲಿ ಸೊನ್ನೆ ಸುತ್ತಲು ಕಾರಣರಾದ ಬೆನ್ ಸ್ಟೋಕ್ಸ್‌ ಮತ್ತು ಅಜಿಂಕ್ಯ ರಹಾನೆ (27 ರನ್) ವಿಕೆಟ್‌ ಗಳಿಸಿದ ಜೇಮ್ಸ್‌ ಆ್ಯಂಡರ್ಸನ್ ಅವರಿಗೆ ರಿಷಭ್ ಬಿಸಿ ಮುಟ್ಟಿಸಿದರು.

ರೋಹಿತ್ ಜೊತೆಗೆ 41 ರನ್‌ಗಳ ಜೊತೆಯಾಟವಾಡಿದರು.  ತಮ್ಮ ಅರ್ಧಶತಕಕ್ಕೆ ಒಂದು ರನ್ ಅಗತ್ಯವಿದ್ದ ಸಂದರ್ಭದಲ್ಲಿ ರೋಹಿತ್ ಅವರು ಸ್ಟೋಕ್ಸ್‌ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಿದ್ದರು. ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಮತ್ತು ಚೆನ್ನೈನ ವಾಷಿಂಗ್ಟನ್ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾದರು.  26 ಓವರ್‌ಗಳನ್ನು ಆಡಿದ ಈ ಎಡಗೈ ಬ್ಯಾಟಿಂಗ್ ಜೋಡಿಯ ಆಟಕ್ಕೆ ಪ್ರವಾಸಿ ಬಳಗವು ಸುಸ್ತಾಯಿತು.

ಓದಿ: 

ಅದರಲ್ಲೂ ರಿಷಭ್ ಆಟ ವಿಭಿನ್ನ ರೂಪದಲ್ಲಿ ಹೊರಹೊಮ್ಮಿತು. ತಾಳ್ಮೆ ಮತ್ತು ಚುರುಕುತನಗಳ ಸಮಪ್ರಮಾಣದ ಮಿಶ್ರಣ ಇದ್ದದ್ದು ವಿಶೇಷ. ಎಲ್ಲಕ್ಕಿಂತ ಮಿಗಿಲಾಗಿ ಅವರ ಈ ಹಿಂದಿನ ಇನಿಂಗ್ಸ್‌ಗಳಲ್ಲಿ ಕಂಡಿದ್ದ ಏಕಾಗ್ರತೆ ಕೊರತೆ ಇಲ್ಲಿ ಇರಲಿಲ್ಲ. 82 ಎಸೆತಗಳಲ್ಲಿ ಅರ್ಧಶತಕದ ಗಡಿಮುಟ್ಟಿದರು. ಆದರೆ, ಶತಕದ ಗಡಿ ಮುಟ್ಟಲು ಇನ್ನುಳಿದ 50 ರನ್ ಗಳಿಸಿದ್ದು ಕೇವಲ 33 ಎಸೆತಗಳಲ್ಲಿ.  ಅವರು ಸಿಕ್ಸರ್‌ ಮೂಲಕವೇ ನೂರರ ಗಡಿ ತಲುಪಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಅವರ ಮೂರನೇ ಶತಕ. ಈ ಹಿಂದೆ ಅವರು ಸಿಡ್ನಿ ಮತ್ತು ಇಂಗ್ಲೆಂಡ್‌ನ ದ ಓವಲ್‌ನಲ್ಲಿ ಶತಕ ಹೊಡೆದಿದ್ದರು.ಇಂಗ್ಲೆಂಡ್‌ನ ಇಬ್ಬರು ಸ್ಪಿನ್ನರ್‌ಗಳ ಪೈಕಿ ಜ್ಯಾಕ್ ಲೀಚ್ ಮಾತ್ರ ಯಶಸ್ವಿಯಾದರು. ಡಾಮ್ ಬೆಸ್ ಅವರನ್ನು ರಿಷಭ್ ದಂಡಿಸಿದ ರೀತಿಯು ವೀರೇಂದ್ರ ಸೆಹ್ವಾಗ್ ಶೈಲಿಯನ್ನು ನೆನಪಿಗೆ ತಂದಿತ್ತು. ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್ ಅವರ ನಿಖರ ಎಸೆತವನ್ನು ರಿಷಭ್ ರಿವರ್ಸ್‌ ಸ್ವೀಪ್ ಮಾಡಿ ಬೌಂಡರಿಗೆ ಕಳಿಸಿದ್ದು ಚಿತ್ತಾಪಹಾರಿಯಾಗಿತ್ತು. ಅವರು ಒಟ್ಟು 13 ಬೌಂಡರಿ ಮತ್ತು ಎರಡು ಸಿಕ್ಸರ್‌ ಗಳಿಸಿದರು. 85ನೇ ಓವರ್‌ನಲ್ಲಿ ಆ್ಯಂಡರ್ಸನ್ ಬೌಲಿಂಗ್‌ನಲ್ಲಿಯೆ ಜೋ ರೂಟ್‌ಗೆ ಕ್ಯಾಚಿತ್ತ ರಿಷಭ್ ಇನಿಂಗ್ಸ್‌ಗೆ ತೆರೆ ಬಿತ್ತು.

ಒಂದು ಸಾವಿರ ರನ್‌ ಪೂರೈಸಿದ ದಾಖಲೆ

ಅಹಮದಾಬಾದ್: ರೋಹಿತ್ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಒಂದು ಸಾವಿರ ರನ್‌ ಪೂರೈಸಿದ ದಾಖಲೆ ಮಾಡಿದರು.

ಶುಕ್ರವಾರದ ಇನಿಂಗ್ಸ್‌ನಲ್ಲಿ ಅವರು 19 ರನ್‌ ಗಳಿಸಿದಾಗ ಈ ಮೈಲುಗಲ್ಲು ತಲುಪಿದರು. 17 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.  ಇದರೊಂದಿಗೆ ಮಯಂಕ್ ಅಗರವಾಲ್ 19 ಪಂದ್ಯಗಳಲ್ಲಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದರು.

ಈ ಇನಿಂಗ್ಸ್‌ನಲ್ಲಿ ರೋಹಿತ್ 49 ರನ್‌ಗಳನ್ನು ಗಳಿಸಿದಾಗ ಮತ್ತೊಂದು ದಾಖಲೆ ಅವರ ಪಾಲಾಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸಾವಿರ ರನ್ ಪೂರೈಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಆದರು. ಅಜಿಂಕ್ಯ ರಹಾನೆ ಮೊದಲಿಗರಾಗಿದ್ದಾರೆ. 

ವಿರಾಟ್‌ ಶೂನ್ಯ ದಾಖಲೆ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎರಡನೇ ಬಾರಿ ಖಾತೆ ತೆರೆಯದೇ ಔಟಾದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು