ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಧೋನಿ ದಾಖಲೆ ಮುರಿಯುವ ತವಕದಲ್ಲಿ ಕಿಂಗ್ ಕೊಹ್ಲಿ

Last Updated 31 ಜನವರಿ 2021, 4:16 IST
ಅಕ್ಷರ ಗಾತ್ರ

ಚೆನ್ನೈ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಈಗ ತವರಿನಲ್ಲಿ ಮಗದೊಂದು ಮಹತ್ವದ ಸರಣಿಗೆ ಸಜ್ಜಾಗುತ್ತಿದೆ.

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಚೆನ್ನೈನಲ್ಲಿ ಫೆಬ್ರವರಿ 5ರಂದು ಆರಂಭವಾಗಲಿದೆ. ಇದರಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ ಬರೆಯುವ ಇರಾದೆಯಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಮೊದಲ ಟೆಸ್ಟ್ ಬಳಿಕ ಪಿತೃತ್ವ ರಜೆಯ ಮೆರೆಗೆ ತವರಿಗೆ ಮರಳಿರುವ ವಿರಾಟ್ ಕೊಹ್ಲಿ ಈಗ ತಂಡವನ್ನು ಮುನ್ನಡೆಸಲಿದ್ದಾರೆ.

ಧೋನಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ...
ತವರಿನಲ್ಲಿ ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಟೀಮ್ ಇಂಡಿಯಾ ನಾಯಕ ಎಂದೆನಿಸಿಕೊಳ್ಳಲು ವಿರಾಟ್ ಕೊಹ್ಲಿಗಿನ್ನು ಎರಡು ಗೆಲುವಿನ ಅಗತ್ಯವಿದೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಈ ಮಹತ್ವದ ಮೈಲುಗಲ್ಲು ವಿರಾಟ್ ಕೊಹ್ಲಿ ತಲುಪುವ ನಿರೀಕ್ಷೆಯಿದೆ.

ಇದರೊಂದಿಗೆ ಮಾಜಿ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿಯಲಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡವು ತವರಿನಲ್ಲಿ 21 ಗೆಲುವುಗಳನ್ನು ದಾಖಲಿಸಿತ್ತು. ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಈಗಾಗಲೇ 20 ಗೆಲುವುಗಳನ್ನು ಬಾರಿಸಿದ್ದಾರೆ.

ವಿಂಡೀಸ್ ಮಾಜಿ ದಿಗ್ಗಜ ಕ್ಲೈವ್ ಲಾಯ್ಡ್ ಮೀರಿಸಲಿರುವ ಕೊಹ್ಲಿ...
ಅದೇ ಹೊತ್ತಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ವೆಸ್ಟ್‌ಇಂಡೀಸ್‌ನ ಮಾಜಿ ಬ್ಯಾಟಿಂಗ್ ದಿಗ್ಗಜ ಕ್ಲೈವ್ ಲಾಯ್ಡ್ ಅವರ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ.

ಭಾರತದ ಟೆಸ್ಟ್ ತಂಡದ ನಾಯಕನಾಗಿ ಇದುವರೆಗೆ 5,220 ರನ್ ಗಳಿಸಿರುವ ವಿರಾಟ್ ಕೊಹ್ಲಿ, ಕ್ಲೈವ್ ಲಾಯ್ಡ್ ದಾಖಲೆ ಮುರಿಯಲು ಇನ್ನು ಕೇವಲ 14 ರನ್ಗಳಿಸಬೇಕಾದ ಅವಶ್ಯಕತೆಯಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದ್ದಾರೆ.

ಪ್ರಸ್ತುತ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಮಾಜಿ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (8,659), ಆಸ್ಟ್ರೇಲಿಯಾದ ಅಲನ್ ಬಾರ್ಡರ್ (6,623) ಹಾಗೂ ರಿಕಿ ಪಾಂಟಿಂಗ್ (6,542) ಹಂಚಿಕೊಂಡಿದ್ದಾರೆ.

ಅಂದ ಹಾಗೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಚೆನ್ನೈನಲ್ಲಿ ಮತ್ತು ಅಂತಿಮದ ಎರಡು ಪಂದ್ಯಗಳು ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯ ಬಳಿಕ ಐದು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯು ಆಯೋಜನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT