ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ 2nd T20I: ಭಾರತದ ಗೆಲುವಿಗೆ 154 ರನ್ ಗುರಿ ಒಡ್ಡಿದ ಕಿವೀಸ್

Last Updated 19 ನವೆಂಬರ್ 2021, 15:30 IST
ಅಕ್ಷರ ಗಾತ್ರ

ರಾಂಚಿ: ಇಲ್ಲಿನ ಜೆಎಸ್‌ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು ಭಾರತದ ಗೆಲುವಿಗೆ 154 ರನ್‌ಗಳ ಗುರಿ ಒಡ್ಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.

ನ್ಯೂಜಿಲೆಂಡ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್ ಹಾಗೂ ಡೆರಿಲ್ ಮಿಚೆಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ 48 ರನ್‌ಗಳ ಜೊತೆಯಾಟ ನೀಡಿದರು. ಕೇವಲ 15 ಎಸೆತಗಳನ್ನು ಎದುರಿಸಿದ ಗಪ್ಟಿಲ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು.

ಬಳಿಕ ಮಿಚೆಲ್ ಜೊತೆಗೂಡಿದ ಮಾರ್ಕ್ ಚಾಪ್‌ಮನ್ (21) ಮಗದೊಂದು ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇದಾದ ಬೆನ್ನಲ್ಲೇ ಡೆರಿಲ್ ಮಿಚೆಲ್ (31) ಅವರನ್ನು ಹೊರದಬ್ಬಿದ ಹರ್ಷಲ್ ಪಟೇಲ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಕೆಟ್ ಕಬಳಿಸಿದರು.

ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ (15) ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಈ ನಡುವೆ 21 ಎಸೆತಗಳಲ್ಲಿ 34 (3 ಸಿಕ್ಸರ್, 1 ಬೌಂಡರಿ) ರನ್ ಗಳಿಸಿದ ಗ್ಲೆನ್ ಫಿಲಿಪ್ಸ್ ಭಾರತದ ಪಾಳಯದಲ್ಲಿ ಆತಂಕವನ್ನು ಸೃಷ್ಟಿಸಿದರು. ಆದರೆ ಫಿಲಿಪ್ಸ್ ಅವರಿಗೂ ಹರ್ಷಲ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು.

ಅಂತಿಮ ಹಂತದಲ್ಲಿ ಕಿವೀಸ್ ಓಟಕ್ಕೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಪರಿಣಾಮ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ಜೇಮ್ಸ್ ನಿಶಾಮ್ (3), ಮಿಚೆಲ್ ಸ್ಯಾಂಟ್ನರ್ (8*) ಹಾಗೂ ಆ್ಯಡಂ ಮಿಲ್ನೆ (5*) ರನ್ ಗಳಿಸಿದರು.

ಭಾರತದ ಪರ ಪದಾರ್ಪಣೆ ಮಾಡಿರುವ ಹರ್ಷಲ್ ಪಟೇಲ್ ಎರಡು ವಿಕೆಟ್ ಕಿತ್ತು ಮಿಂಚಿದರು. ಆರ್. ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT