ಐಸಿಸಿ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್: ಶ್ವೇತಾ ಮಿಂಚು, ಭಾರತ ಫೈನಲ್‌ಗೆ

ಪೋಚೆಫ್‌ಸ್ಟ್ರೂಮ್, ದಕ್ಷಿಣ ಆಫ್ರಿಕಾ: ಆರಂಭಿಕ ಬ್ಯಾಟರ್ ಶ್ವೇತಾ ಶೆರಾವತ್ (61) ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಭಾರತ ತಂಡ, ಐಸಿಸಿ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 107 ರನ್ ಗಳಿಸಿದರೆ, ಭಾರತ 14.2 ಓವರ್‌ಗಳಲ್ಲಿ 2 ವಿಕೆಟ್‌ಗೆ 110 ರನ್ ಗಳಿಸಿ ಗೆದ್ದಿತು.
45 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಅಜೇಯ 61 ರನ್ ಗಳಿಸಿದ ಶ್ವೇತಾ ಅವರು ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಸೌಮ್ಯಾ ತಿವಾರಿ 22 ರನ್ ಗಳಿಸಿದರು.
ಇದಕ್ಕೂ ಮುನ್ನ ಲೆಗ್‌ಸ್ಪಿನ್ನರ್ ಪಾರ್ಶವಿ ಚೋಪ್ರಾ (20ಕ್ಕೆ 3) ಅವರ ಚುರುಕಿನ ದಾಳಿಯ ನೆರವಿನಿಂದ ಭಾರತ ತಂಡ ಎದುರಾಳಿಗಳನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತ್ತು. ಬೌಲಿಂಗ್ ನಡೆಸಿದ ಭಾರತದ ಆರು ಮಂದಿಯಲ್ಲಿ ಐವರಿಗೆ ವಿಕೆಟ್ ದಕ್ಕಿತು. ನ್ಯೂಜಿಲೆಂಡ್ ಪರ ಜಾರ್ಜಿಯಾ ಪ್ಲಿಮೆರ್ (35) ಮತ್ತು ಇಸಬೆಲಾ ಗೇಜ್ (26) ಮಾತ್ರ ಅಲ್ಪ ಪ್ರತಿರೋಧ ಒಡ್ಡಿದರು.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದ ವಿಜೇತರನ್ನು,ಶಫಾಲಿ ವರ್ಮಾ ನೇತೃತ್ವದ ಭಾರತವು ಫೈನಲ್‌ನಲ್ಲಿ ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 107 (ಜಾರ್ಜಿಯಾ ಪ್ಲಿಮೆರ್ 35, ಇಸಬೆಲಾ ಗೇಜ್ 26, ಪಾರ್ಶವಿ ಚೋಪ್ರಾ 20ಕ್ಕೆ 3, ತಿತಾಸ್ ಸಾಧು 17ಕ್ಕೆ 1, ಮನ್ನತ್ ಕಶ್ಯಪ್ 21ಕ್ಕೆ 1, ಶಫಾಲಿ ವರ್ಮಾ 7ಕ್ಕೆ 1)
ಭಾರತ: 14.2 ಓವರ್‌ಗಳಲ್ಲಿ 2 ವಿಕೆಟ್‌ಗೆ 110 (ಶಫಾಲಿ ವರ್ಮಾ 10, ಶ್ವೇತಾ ಶೆರಾವತ್ ಔಟಾಗದೆ 61, ಸೌಮ್ಯ ತಿವಾರಿ 22, ಅನಾ ಬ್ರೌನಿಂಗ್ 18ಕ್ಕೆ 2) ಫಲಿತಾಂಶ: ಭಾರತಕ್ಕೆ 8 ವಿಕೆಟ್ ಗೆಲುವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.