ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ WTC Final: ಕೈಲ್ ಜೆಮಿಸನ್ ಬಿರುಗಾಳಿ; ಭಾರತ ಸಾಧಾರಣ ಮೊತ್ತ

ಅರ್ಧಶತಕ ಪೂರೈಸದ ಕೊಹ್ಲಿ, ರಹಾನೆ
Last Updated 20 ಜೂನ್ 2021, 19:00 IST
ಅಕ್ಷರ ಗಾತ್ರ

ಸೌತಾಂಪ್ಟನ್: ಎತ್ತರಕಾಯದ ವೇಗಿ ಕೈಲ್ ಜೆಮಿಸನ್ ಸ್ವಿಂಗ್ ಬೌಲಿಂಗ್‌ನಿಂದಾಗಿ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯಿತು.

ಐದು ವಿಕೆಟ್ ಗಳಿಸಿದ ಜೆಮಿಸನ್ ದಾಳಿಯಿಂದಾಗಿ ಭಾರತ ತಂಡವು 92.1 ಓವರ್‌ಗಳಲ್ಲಿ 217 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಶನಿವಾರ ರೋಹಿತ್ ಶರ್ಮಾ ವಿಕೆಟ್ ಗಳಿಸಿ ಪೆಟ್ಟುಕೊಟ್ಟಿದ್ದ ಜೆಮಿಸನ್ ಮೂರನೇ ದಿನದಾಟದಲ್ಲಿ ನಾಲ್ಕು ವಿಕೆಟ್ ಕಿತ್ತರು.

ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಚಹಾ ದಿನದಾಟದ ಅಂತ್ಯಕ್ಕೆ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 101 ರನ್ ಗಳಿಸಿತು.

ಡೆವೊನ್ ಕಾನ್ವೆ ಅರ್ಧಶತಕ (54) ಗಳಿಸಿ ಔಟಾದರು. ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಕ್ರೀಸ್‌ನಲ್ಲಿದ್ದರು.

ಪಂದ್ಯದ ಮೊದಲ ದಿನವಾದ ಶುಕ್ರವಾರದ ಆಟವು ಮಳೆಗೆ ಆಹುತಿಯಾಗಿತ್ತು. ಶನಿವಾರ ಆರಂಭವಾದ ಆಟವು ಸಂಜೆ ಹೊತ್ತಿಗೆ ಮಂದಬೆಳಕಿನಿಂದಾಗಿ ಸ್ಥಗಿತವಾಗಿತ್ತು. ಭಾರತ ತಂಡವು ಮೂರು ವಿಕೆಟ್‌ಗಳಿಗೆ 146 ರನ್ ಗಳಿಸಿತ್ತು. ವಿರಾಟ್ (44) ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದರು.

ಭಾನುವಾರ ದಿನದಾಟದ ಮೂರನೇ ಓವರ್‌ನಲ್ಲಿ ಕೈಲ್ ಜೆಮಿಸನ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ವಿರಾಟ್ ಬಿದ್ದರು. ರಿಷಭ್ ಪಂತ್ (4) ಹೆಚ್ಚು ಆಡದಂತೆಯೂ ಜೆಮಿಸನ್ ನೋಡಿಕೊಂಡರು.

ಆದರೆ ಈ ಹಂತದಲ್ಲಿ ರಹಾನೆ ತಾಳ್ಮೆಯಿಂದ ಆಡಿದರು. ಅವರಿಗೆ ರವೀಂದ್ರ ಜಡೇಜ (15; 53ಎ) ಕೂಡ ಉತ್ತಮ ಜೊತೆ ನೀಡಿದರು. ಆರನೇ ವಿಕೆಟ್‌ ಜೊತೆಯಾಟದಲ್ಲಿ 28 ರನ್‌ಗಳನ್ನು ಸೇರಿಸಿದರು.

ನ್ಯೂಜಿಲೆಂಡ್ ವೇಗಿಗಳ ಸತತ ದಾಳಿಯಿಂದ ತುಸು ಬಸವಳಿದಂತೆ ಕಂಡ ರಹಾನೆ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ನೀಲ್ ವಾಗ್ನರ್ ಎಸೆತವನ್ನು ಆಡುವ ಭರದಲ್ಲಿ ಟಾಮ್ ಲಥಾಮ್‌ಗೆ ಕ್ಯಾಚಿತ್ತರು. ಕೇವಲ ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡರು. ಭರವಸೆ ಮೂಡಿಸಿದ್ದ ಜೊತೆಯಾಟವೂ ಮುರಿಯಿತು.

ಜಡೇಜ ಜೊತೆಗೂಡಿದ ಅಶ್ವಿನ್ (22; 27 ಎಸೆತ) ಚೇತೊಹಾರಿ ಆಟವಾಡಿದರು. ಇದರಿಂದಾಗಿ ತಂಡದ ಮೊತ್ತವು ಇನ್ನೂರರ ಗಡಿ ದಾಟಿತು. ಆದರೆ ತಂಪು ವಾತಾವರಣ ಮತ್ತು ವೇಗಿಗಳ ದಾಳಿಯ ಮುಂದೆ ಭಾರತದ ಆಲ್‌ರೌಂಡರ್‌ ಜೋಡಿಯ ಆಟವು ಹೆಚ್ಚು ಹೊತ್ತು ನಡೆಯಲಿಲ್ಲ.

ಟಿಮ್ ಸೌಥಿ ಎಸೆತದಲ್ಲಿ ಅಶ್ವಿನ್ ಔಟಾದರೆ, ಟ್ರೆಂಟ್ ಬೌಲ್ಟ್‌ ಎಸೆತಕ್ಕೆ ಜಡೇಜ ಪೆವಿಲಿಯನ್‌ ದಾರಿ ಹಿಡಿದರು. ಇಶಾಂತ್ ಮತ್ತು ಬೂಮ್ರಾ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡ ಜೆಮಿಸನ್ ಐದು ವಿಕೆಟ್ ಗೊಂಚಲಿನ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT