ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ: ಅಕ್ಷರ್‌ಗೆ ಮತ್ತೊಮ್ಮೆ 5 ವಿಕೆಟ್; ಭಾರತಕ್ಕೆ ಇನಿಂಗ್ಸ್ ಮುನ್ನಡೆ

Last Updated 27 ನವೆಂಬರ್ 2021, 13:56 IST
ಅಕ್ಷರ ಗಾತ್ರ

ಕಾನ್ಪುರ: ಎಡಗೈ ಸ್ಪಿನ್ ಮೋಡಿಗಾರ ಅಕ್ಷರ್ ಪಟೇಲ್ ಮತ್ತೊಮ್ಮೆ ತಮ್ಮ ಕೈಚಳಕ ಮೆರೆದರು. ಬ್ಯಾಟರ್‌ಗಳ ಮಂಡಿಯೆತ್ತರಕ್ಕೂ ಪುಟಿಯದ ಚೆಂಡಿನ ಲಯವನ್ನು ಸರಿಯಾಗಿ ನಿರ್ದೇಶಿಸಿದ ಅಕ್ಷರ್ (34–6–62–5) ಪಂಚಗುಚ್ಛದ ಸಾಧನೆ ಮಾಡಿದರು. ಇದರಿಂದಾಗಿ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗಳ ಹಿನ್ನಡೆ ಅನುಭವಿಸಿತು.

ಆರಂಭಿಕ ಜೋಡಿ ಟಾಮ್ ಲಥಾಮ್ ಮತ್ತು ವಿಲ್ ಯಂಗ್ ಜೊತೆಯಾಟದಲ್ಲಿ 151 ರನ್‌ಗಳು ಸೇರಿದರೂ ತಂಡವು 142.3 ಓವರ್‌ಗಳಲ್ಲಿ 296 ರನ್‌ ಗಳಿಸಿತು. ಶ್ರೇಯಸ್ ಅಯ್ಯರ್ ಶತಕದ ಬಲದಿಂದ ಭಾರತ ತಂಡವು 345 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 5 ಓವರ್‌ಗಳಲ್ಲಿ 1 ವಿಕೆಟ್‌ಗೆ 14 ರನ್ ಗಳಿಸಿದೆ. ಮಯಂಕ್ ಅಗರವಾಲ್ (ಬ್ಯಾಟಿಂಗ್ 4) ಮತ್ತು ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದಾರೆ.

ಅಕ್ಷರ್‌ ಜೊತೆಗೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ (82ಕ್ಕೆ3) ಕಿವೀಸ್ ಪತನಕ್ಕೆ ಕೈಜೋಡಿಸಿದರು. ಚೆನ್ನೈನ ಅಶ್ವಿನ್ ಇನ್ನೊಂದು ವಿಕೆಟ್ ಪಡೆದರೆ ಹರಭಜನ್ ಸಿಂಗ್ (417ವಿಕೆಟ್) ದಾಖಲೆಯನ್ನು ಸರಿಗಟ್ಟುವುದರ ಜೊತೆಗೆ ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಭಾರತದ ಮೂರನೇ ಬೌಲರ್ ಆಗಲಿದ್ದಾರೆ.

ನಾಲ್ಕನೇ ಪಂದ್ಯ; ಐದರ ಗೊಂಚಲು

ಗುಜರಾತ್ ಆಟಗಾರ ಅಕ್ಷರ್ ಪಟೇಲ್‌ಗೆ ಇದು ನಾಲ್ಕನೇ ಟೆಸ್ಟ್ ಮಾತ್ರ. ಆದರೆ ಅವರು ಐದನೇ ಬಾರಿ ವಿಕೆಟ್‌ಗಳ ಐದರ ಗೊಂಚಲು ಗಳಿಸಿದ ಸಾಧನೆ ಮಾಡಿದರು.

ಹೋದ ಫೆಬ್ರುವರಿಯಲ್ಲಿ ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಆ ಸರಣಿಯ ಮೂರು ಪಂದ್ಯಗಳಲ್ಲಿ ಅವರು ಒಟ್ಟು 27 ವಿಕೆಟ್ ಗಳಿಸಿದ್ದರು. ಅದರಲ್ಲಿ ನಾಲ್ಕು ಬಾರಿ ಐದು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು.

ಗ್ರೀನ್‌ ಪಾರ್ಕ್‌ನಲ್ಲಿ ಎರಡನೇ ದಿನದಾಟದಲ್ಲಿ ಅಕ್ಷರ್ ಸೇರಿದಂತೆ ಭಾರತದ ಯಾವುದೇ ಬೌಲರ್‌ಗೂ ವಿಕೆಟ್ ಒಲಿದಿರಲಿಲ್ಲ.ಶುಕ್ರವಾರ ಕಿವೀಸ್ ತಂಡವು 57 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿತ್ತು. ಅರ್ಧಶತಕ ಗಳಿಸಿದ್ದ ಲಥಾಮ್ ಮತ್ತು ಯಂಗ್ ಕ್ರೀಸ್‌ನಲ್ಲಿದ್ದರು. ಈ ಜೋಡಿಯು ಮೂರನೇ ದಿನದಾಟದಲ್ಲಿಯೂ ತಾಳ್ಮೆಯ ಆಟ ಮುಂದುವರಿಸಿತು.

ದಿನದ 10ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿಯುವಲ್ಲಿ ಅಶ್ವಿನ್ ಸಫಲರಾದರು. ಬದಲೀ ವಿಕೆಟ್‌ಕೀಪರ್ ಶ್ರೀಕರ್ ಭರತ್ ಪಡೆದ ಕ್ಯಾಚ್‌ಗೆ ಯಂಗ್ ಪೆವಿಲಿಯನ್‌ಗೆ ಮರಳಬೇಕಾಯಿತು. ಆದರೆ ಇನ್ನೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ಲಥಾಮ್ ಜೊತೆಗೆ ಸೇರಿದ ನಾಯಕ ಕೇನ್ ವಿಲಿಯಮ್ಸನ್, ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ, ಮಧ್ಯಮವೇಗಿ ಉಮೇಶ್ ಯಾದವ್ ಹಾಕಿದ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ ಕೇನ್ ವಿಲಿಯಮ್ಸನ್ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತರು. ಇದರಿಂದ ಭಾರತದ ಅವಕಾಶದ ಬಾಗಿಲು ತೆರೆಯಿತು. ಅಕ್ಷರ್ ಆಟ ಆರಂಭವಾಯಿತು.

ರಾಸ್ ಟೇಲರ್ ವಿಕೆಟ್ ಗಳಿಸುವ ಮೂಲಕ ತಮ್ಮ ಖಾತೆ ತೆರೆದ ಅಕ್ಷರ್, ಹೆನ್ರಿ ನಿಕೋಲ್ಸ್‌, ಶತಕದತ್ತ ಹೆಜ್ಜೆಯಿಟ್ಟಿದ್ದ ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲಥಾಮ್ (95; 282ಎಸೆತ), ಅಪಾರ ತಾಳ್ಮೆಯಿಂದ ಆಡುತ್ತಿದ್ದ ಟಾಮ್ ಬ್ಲಂಡೆಲ್ (13; 94ಎ), ಕೈಲ್ ಜೆಮಿಸನ್ ಮತ್ತು ಟಿಮ್ ಸೌಥಿ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ಕೇನ್ ಬಳಗವು ಹಿನ್ನಡೆ ಅನುಭವಿಸಿತು.

1978ರಲ್ಲಿ, ಆಸ್ಟ್ರೇಲಿಯಾದ ವೇಗಿ ಚಾರ್ಲಿ ಟರ್ನರ್ ಮೊದಲ ನಾಲ್ಕು ಪಂದ್ಯಗಳಲ್ಲಿ ಆರು ಬಾರಿ ಐದು ವಿಕೆಟ್‌ ಉರುಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅದಾದ ಬಳಿಕ ಇಂಗ್ಲೆಂಡ್‌ನ ಟಾಮ್ ರಿಚರ್ಡ್‌ಸನ್‌ (1887-1888), ಆಸಿಸ್‌ನ ರಾಡ್ನಿ ಹಾಗ್ (1893-1895) ನಾಲ್ಕು ಪಂದ್ಯಗಳ ಐದು ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT