ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೀನ್ ಬೌಲ್ಡ್ ಆದ ಬಾಬರ್‌ ಅಜಂ; ರಸ್ತೆ ಸುರಕ್ಷತೆ ಪಾಠ ಹೇಳಿದ ಹು–ಧಾ ಪೊಲೀಸ್

Published 12 ಸೆಪ್ಟೆಂಬರ್ 2023, 13:10 IST
Last Updated 12 ಸೆಪ್ಟೆಂಬರ್ 2023, 13:10 IST
ಅಕ್ಷರ ಗಾತ್ರ

ಈ ಬಾರಿಯ ಏಷ್ಯಾಕಪ್‌ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್‌ 4 ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 228 ರನ್ ಅಂತರದ ಭಾರಿ ಗೆಲುವು ಸಾಧಿಸಿದೆ.

ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ–ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಪರ ವಿರಾಟ್ ಕೊಹ್ಲಿ (122) ಹಾಗೂ ಕೆ.ಎಲ್.ರಾಹುಲ್ (111) ಅಜೇಯ ಶತಕ ಬಾರಿಸಿ ಮಿಂಚಿದರು. ಇವರ ಆಟದ ಬಲದಿಂದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 356 ರನ್ ಗಳಿಸಿತು.

ಈ ಬೃಹತ್ ಗುರಿ ಬೆನ್ನತ್ತಿದ ಪಾಕ್‌ ಪಡೆ ಕೇವಲ 128 ರನ್‌ಗೆ ಆಲೌಟ್‌ ಆಯಿತು. ಫಖರ್‌ ಜಮಾನ್‌ (27), ಅಘಾ ಸಲ್ಮಾನ್‌ (23) ಮತ್ತು ಇಫ್ತಿಕರ್‌ ಅಹಮದ್‌ (23) ಹೊರತುಪಡಿಸಿ ಬೇರಾವ ಬ್ಯಾಟರ್‌ ಎರಡಂಕಿಗಿಂತ ಹೆಚ್ಚು ರನ್‌ ಗಳಿಸಲಿಲ್ಲ.

ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ನಾಯಕ ಬಾಬರ್‌ ಅಜಂ ಆಟ ಕೇವಲ 10 ರನ್‌ಗೆ ಸೀಮಿತವಾದರೆ, ನಾಲ್ಕನೇ ಸ್ಥಾನದಲ್ಲಿರುವ ಇಮಾಮ್‌ ಉಲ್‌ ಹಕ್‌ 9 ರನ್‌ ಗಳಿಸಲಷ್ಟೇ ಶಕ್ತರಾದರು.

ರಸ್ತೆ ಸುರಕ್ಷತೆ ಪಾಠ ಹೇಳಿದ ಹು–ಧಾ ಪೊಲೀಸ್
ಪಾಕ್‌ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಕಿದ ಇನ್‌ಸ್ವಿಂಗ್‌ ಎಸೆತವನ್ನು ಸರಿಯಾಗಿ ಗುರುತಿಸಲು ವಿಫಲವಾದ ಬಾಬರ್‌ ಅಜಂ ಕ್ಲೀನ್ ಬೌಲ್ಡ್‌ ಆದರು.

ಓವರ್‌ನ ನಾಲ್ಕನೇ ಎಸೆತವನ್ನು ಬಾಬರ್‌ 'ಡ್ರೈವ್‌' ಮಾಡಲು ಮುಂದಾದರು. ಆದರೆ, ಆಫ್‌ಸ್ಟಂಪ್‌ನತ್ತ ಬಿದ್ದ ಚೆಂಡು ತಕ್ಷಣ ಒಳಮುಖವಾಗಿ ವಿಕೆಟ್‌ನತ್ತ ಚಲಿಸಿತು. ಏಕದಿನ ಕ್ರಿಕೆಟ್‌ನ ನಂಬರ್‌ 1 ಬ್ಯಾಟರ್‌ ಅನ್ನು ವಂಚಿಸಿ ಬೆಲ್ಸ್‌ ಎಗರಿಸಿತು.

ಈ ಸಂದರ್ಭದ ಚಿತ್ರವನ್ನು ತನ್ನ ಎಕ್ಸ್‌ (ಟ್ವಿಟರ್‌) ಪುಟದಲ್ಲಿ ಹಂಚಿಕೊಂಡಿರುವ ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತಾಲಯ, ಚಾಲಕರಿಗೆ ರಸ್ತೆ ಸುರಕ್ಷತೆಯ ಪಾಠ ಹೇಳಿದೆ. 'ನಂ.1 ಬ್ಯಾಟ್ಸಮನ್ ಆದ್ರೇನು.. ನಂ.1 ಡ್ರೈವರ್ ಆದ್ರೇನು.. ಗಮನವಿಟ್ಟು 'ಡ್ರೈವ್‌' ಮಾಡದಿದ್ದರೆ, ಕ್ಲೀನ್ ಬೌಲ್ಡ್ ಆಗ್ತೀರಾ' ಎಂದು ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT