ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup 2023: ಕುಲದೀಪ್ ಸ್ಪಿನ್ ಮೋಡಿ, ಪಾಕ್ ವಿರುದ್ಧ ಭಾರತಕ್ಕೆ 228 ರನ್​ ಜಯ

Published 11 ಸೆಪ್ಟೆಂಬರ್ 2023, 17:55 IST
Last Updated 11 ಸೆಪ್ಟೆಂಬರ್ 2023, 17:55 IST
ಅಕ್ಷರ ಗಾತ್ರ

ಕೊಲಂಬೊ: ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ ಅವರು ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಸುರಿಸಿದ ರನ್‌ ಮಳೆಯಲ್ಲಿ ಪಾಕಿಸ್ತಾನ ತಂಡ ತತ್ತರಿಸಿತು.

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಇವರಿಬ್ಬರು ಗಳಿಸಿದ ಭರ್ಜರಿ ಶತಕದ ನೆರವಿನಿಂದ ರೋಹಿತ್‌ ಶರ್ಮಾ ಬಳಗ, ಪಾಕ್‌ ವಿರುದ್ಧ 228 ರನ್‌ಗಳಿಂದ ಗೆದ್ದು ಬೀಗಿತು.

ಮೀಸಲು ದಿನವಾದ ಸೋಮವಾರ ಮುಂದುವರಿದ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 356 ರನ್‌ ಕಲೆಹಾಕಿತು. ಕುಲದೀಪ್‌ ಯಾದವ್‌ (25ಕ್ಕೆ 5) ಅವರ ಕೈಚಳಕದ ಮುಂದೆ ನಲುಗಿದ ಬಾಬರ್‌ ಅಜಂ ಬಳಗ 32 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟಾಯಿತು.

ಗಾಯಗೊಂಡ ಕಾರಣ ನಸೀಮ್‌ ಶಾ ಮತ್ತು ಹ್ಯಾರಿಸ್‌ ರವೂಫ್‌ ಅವರು ಬ್ಯಾಟಿಂಗ್‌ಗೆ ಬರಲಿಲ್ಲ. ಇದರಿಂದ ಪಾಕ್‌ ತಂಡದ ಎಂಟನೇ ವಿಕೆಟ್ ಬಿದ್ದೊಡನೆ ಪಂದ್ಯಕ್ಕೆ ತೆರೆಬಿತ್ತು. ಫಖರ್‌ ಜಮಾನ್ (27) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಕೊಹ್ಲಿ, ರಾಹುಲ್‌ ಅಬ್ಬರ: ಭಾನುವಾರ ಮಳೆಯಿಂದ ಅರ್ಧದಲ್ಲೇ ನಿಂತಿದ್ದ ಪಂದ್ಯ ಮೀಸಲು ದಿನವಾದ ಸೋಮವಾರ ಮುಂದುವರಿಯಿತು. 24.1 ಓವರ್‌ಗಳಲ್ಲಿ 147 ರನ್‌ಗಳಿಂದ ಆಟ ಮುಂದುವರಿಸಿದ ಭಾರತ ತಂಡ ಬೃಹತ್‌ ಮೊತ್ತ ಪೇರಿಸಿತು.

ಕೊಹ್ಲಿ 94 ಎಸೆತಗಳಲ್ಲಿ 122 ರನ್‌ ಗಳಿಸಿದರೆ, ರಾಹುಲ್‌ 106 ಎಸೆತಗಳಲ್ಲಿ 111 ರನ್‌ ಕಲೆಹಾಕಿದರು. ಪಾಕ್‌ ತಂಡದ ವೇಗ ಹಾಗೂ ಸ್ಪಿನ್‌ ದಾಳಿಯನ್ನು ಪುಡಿಗಟ್ಟಿದ ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 233 ರನ್‌ ಸೇರಿಸಿತು.

ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಾಧನೆ ಮಾಡಿದ ಕೊಹ್ಲಿ, ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (49 ಶತಕ) ಅವರನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರು.

ಸುಮಾರು ನಾಲ್ಕು ತಿಂಗಳ ಬಳಿಕ ಕಣಕ್ಕಿಳಿದ ಕರ್ನಾಟಕದ ವಿಕೆಟ್‌ ಕೀಪರ್ ಬ್ಯಾಟರ್‌ ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ ಪೂರೈಸಿದರು. ತಮ್ಮ ಫಿಟ್‌ನೆಸ್‌ ಬಗ್ಗೆ ಎದ್ದಿದ್ದ ಅನುಮಾನಗಳನ್ನು ಸೊಗಸಾದ ಬ್ಯಾಟಿಂಗ್‌ ಮೂಲಕ ದೂರ ಮಾಡಿದರು.

ರೋಹಿತ್‌ ಮತ್ತು ಶುಭಮನ್‌ ಗಿಲ್‌ ಅವರು ಭಾನುವಾರ ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಕೊಹ್ಲಿ ಹಾಗೂ ರಾಹುಲ್‌ ಆರಂಭದ ಕೆಲವು ಓವರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಆದರೂ ರನ್‌ ರೇಟ್‌ 7ರ ಆಸುಪಾಸು ಇರುವಂತೆ ನೋಡಿಕೊಂಡರು.

ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಕೊಹ್ಲಿ ಬಿರುಸಿನ ಆಟಕ್ಕಿಳಿದರು. ಬೌಂಡರಿ, ಸಿಕ್ಸರ್‌ಗಳ ಮೂಲಕ ಪಾಕ್‌ ಬೌಲಿಂಗ್‌ ವಿಭಾಗದ ದಿಕ್ಕು ತಪ್ಪಿಸಿದರು. ಪಾಕ್‌ ನಾಯಕ ಬಾಬರ್‌ ಅಜಂ ಅವರು ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರೂ ಯಾವುದೇ ಫಲ ದೊರೆಯಲಿಲ್ಲ. ಭಾರತ ತಂಡ ಸೋಮವಾರ ಆಡಿದ 25.5 ಓವರ್‌ಗಳಲ್ಲಿ 209 ರನ್‌ ಕಲೆಹಾಕಿತು.

ಆಕರ್ಷಕ ಡ್ರೈವ್‌ಗಳು, ಅಪ್ಪರ್‌ ಕಟ್ ಹಾಗೂ ಪುಲ್‌ ಶಾಟ್‌ಗಳು ಕೊಹ್ಲಿ ಅವರ ಇನಿಂಗ್ಸ್‌ನ ಮೆರುಗು ಹೆಚ್ಚಿಸಿದವು. ರಾಹುಲ್‌ ಅವರು ಲೆಗ್‌ ಸ್ಪಿನ್ನರ್‌ ಶಾದಾಬ್‌ ಖಾನ್‌ ಅವರ ಬೌಲಿಂಗ್‌ನಲ್ಲಿ ಹೊಡೆದ ಸಿಕ್ಸರ್‌ ಸೊಗಸಾಗಿತ್ತು. ರಾಹುಲ್‌ ಭರ್ತಿ 100 ಎಸೆತಗಳಲ್ಲಿ ಶತಕ ಪೂರೈಸಿದರೆ, ಕೊಹ್ಲಿ 84 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು.

ಭಾರತಕ್ಕೆ ಪ್ರಮುಖ ‘ಬೆದರಿಕೆ’ ಎನಿಸಿಕೊಂಡಿದ್ದ ಪಾಕ್‌ ತಂಡದ ಎಡಗೈ ವೇಗಿ ಶಾಹೀನ್‌ ಶಾ ಆಫ್ರಿದಿ ಅವರನ್ನು ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಸಮರ್ಥವಾಗಿ ಎದುರಿಸಿದರು. ಅವರು 10 ಓವರ್‌ಗಳಲ್ಲಿ 79 ರನ್‌ಗಳನ್ನು ಬಿಟ್ಟುಕೊಟ್ಟರು. ವೇಗದ ಬೌಲರ್‌ ಹ್ಯಾರಿಸ್‌ ರವೂಫ್‌ ಗಾಯದ ಕಾರಣ ಸೋಮವಾರ ಕಣಕ್ಕಿಳಿಯದೇ ಇದ್ದುದು ಪಾಕ್‌ ತಂಡದ ಬೌಲಿಂಗ್‌ನ ಶಕ್ತಿ ಅಲ್ಪ ಕುಂದುವಂತೆ ಮಾಡಿತು.

ದಾಖಲೆ ಜತೆಯಾಟ: ವಿರಾಟ್‌ ಮತ್ತು ರಾಹುಲ್‌ ಅವರು ಮೂರನೇ ವಿಕೆಟ್‌ಗೆ ಸೇರಿಸಿದ 233 ರನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಯಾವುದೇ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜತೆಯಾಟ ಎನಿಸಿದೆ. ನವಜೋತ್‌ ಸಿಧು ಮತ್ತು ಸಚಿನ್‌ ತೆಂಡೂಲ್ಕರ್‌ ಅವರು 1996 ರಲ್ಲಿ ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಎರಡನೇ ವಿಕೆಟ್‌ಗೆ ಕಲೆಹಾಕಿದ್ದ 231 ರನ್‌ಗಳು ಇದುವರೆಗಿನ ದಾಖಲೆಯಾಗಿತ್ತು.

ವಿರಾಟ್‌ ಅತಿವೇಗದ 13 ಸಾವಿರ ರನ್‌

ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 13 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕೊಹ್ಲಿ, 267ನೇ ಇನಿಂಗ್ಸ್‌ನಲ್ಲಿ (278ನೇ ಪಂದ್ಯ) ಈ ಮೈಲಿಗಲ್ಲು ದಾಟಿದರು. ಸಚಿನ್‌ ಅವರು 13 ಸಾವಿರ ರನ್‌ ಪೂರೈಸಲು 321 ಇನಿಂಗ್ಸ್‌ಗಳನ್ನು (330ನೇ ಪಂದ್ಯ) ತೆಗೆದುಕೊಂಡಿದ್ದರು.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್‌ಗಳ ಗಡಿ ದಾಟಿದ ಐದನೇ ಬ್ಯಾಟರ್‌ ಎನಿಸಿಕೊಂಡರು. ಸಚಿನ್‌ ಅಲ್ಲದೆ ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಹಾಗೂ ಸನತ್‌ ಜಯಸೂರ್ಯ ಈ ಸಾಧನೆ ಮಾಡಿದ್ದಾರೆ.

ಕೊಲಂಬೊದಲ್ಲಿ ಸತತ ನಾಲ್ಕನೇ ಶತಕ

ಕೊಲಂಬೊದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕ ಗಳಿಸಿದ ಸಾಧನೆಯನ್ನು ಕೊಹ್ಲಿ ಮಾಡಿದರು.

ಅವರು ಇಲ್ಲಿ ಆಡಿದ್ದ ಈ ಹಿಂದಿನ ಮೂರು ಪಂದ್ಯಗಳಲ್ಲಿ ಕ್ರಮವಾಗಿ 128 (119 ಎ.), 131 (96 ಎ.) ಮತ್ತು 110 ರನ್‌ (116 ಎ.) ಕಲೆಹಾಕಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಒಂದೇ ತಾಣದಲ್ಲಿ ಸತತ ನಾಲ್ಕು ಶತಕ ಗಳಿಸಿದ್ದ ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟಿದರು. ಆಮ್ಲಾ, ಸೆಂಚೂರಿಯನ್‌ ಕ್ರೀಡಾಂಗಣದಲ್ಲಿ ಇಂತಹ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT