ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: 'ಬಾಕ್ಸಿಂಗ್ ಡೇ ಟೆಸ್ಟ್‌'ನಲ್ಲಿ ಕನ್ನಡಿಗರ ಅಬ್ಬರ; ಭಾರತ ಮೇಲುಗೈ

Last Updated 26 ಡಿಸೆಂಬರ್ 2021, 15:54 IST
ಅಕ್ಷರ ಗಾತ್ರ

ಸೆಂಚುರಿಯನ್: ಕನ್ನಡಿಗರಾದ ಕೆ.ಎಲ್. ರಾಹುಲ್ ಭರ್ಜರಿ ಶತಕ (122*) ಹಾಗೂ ಮಯಂಕ್ ಅಗರವಾಲ್ ಆಕರ್ಷಕ ಅರ್ಧಶತಕದ (60) ನೆರವಿನಿಂದ ಭಾರತ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ನಿಗದಿತ 90 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.

ಈ ಮೂಲಕ 'ಬಾಕ್ಸಿಂಗ್ ಡೇ ಟೆಸ್ಟ್' ಪಂದ್ಯದಲ್ಲಿ ಕನ್ನಡಿಗರ ಅಬ್ಬರದ ಆಟದ ನೆರವಿನಿಂದ ಮೊದಲ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ.

ಕನ್ನಡಿಗರ ಮಿಂಚು...
ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಆರಂಭಿಕ ಜೋಡಿ ರಾಹುಲ್-ಮಯಂಕ್, ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಭದ್ರ ಅಡಿಪಾಯ ಹಾಕುವಲ್ಲಿ ನೆರವಾದರು.

ಇವರಿಬ್ಬರು ಮೊದಲ ವಿಕೆಟ್‌ಗೆ ಶತಕದ (117 ರನ್) ಜೊತೆಯಾಟ ಕಟ್ಟಿದರು. 123 ಎಸೆತಗಳನ್ನು ಎದುರಿಸಿದ ಅಗರವಾಲ್ ಒಂಬತ್ತು ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿದರು.

ಗಿಡಿ ಡಬಲ್ ಆಘಾತ...
ಈ ಹಂತದಲ್ಲಿ ದಾಳಿಗಿಳಿದ ಲುಂಗಿ ಗಿಡಿ, ಉತ್ತಮವಾಗಿ ಆಡುತ್ತಿದ್ದ ಮಯಂಕ್ ಜೊತೆಗೆ ಚೇತೇಶ್ವರ್ ಪೂಜಾರ (0) ಅವರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಶೂನ್ಯಕ್ಕೆ ಔಟ್ ಆದ ಪೂಜಾರ ನಿರಾಸೆ ಮೂಡಿಸಿದರು.

ರಾಹುಲ್ ಆಕರ್ಷಕ ಶತಕ...
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ರಾಹುಲ್ ತಂಡವನ್ನು ಮುನ್ನಡೆಸಿದರು. ಅಲ್ಲದೆ ತೃತೀಯ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ಕಟ್ಟಿದರು. ಈ ನಡುವೆ 35 ರನ್ ಗಳಿಸಿದ ನಾಯಕ ಕೊಹ್ಲಿ ಅವರಿಗೂ ಗಿಡಿ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನೊಂದೆಡೆ ಉಪ ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್, ಟೆಸ್ಟ್ ‌ಕ್ರಿಕೆಟ್‌ನಲ್ಲಿ ಏಳನೇ ಶತಕ ಸಾಧನೆ ಮಾಡಿದರು.

ಅವರಿಗೆ ಅಜಿಂಕ್ಯ ರಹಾನೆ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಅಲ್ಲದೆ ಮುರಿಯದ ನಾಲ್ಕನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 81 ಎಸೆತಗಳನ್ನು ಎದುರಿಸಿದ ರಹಾನೆ ಎಂಟು ಬೌಂಡರಿಗಳ ನೆರವಿನಿಂದ 40 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅತ್ತ 248 ಎಸೆತಗಳನ್ನು ಎದುರಿಸಿರುವ ರಾಹುಲ್ 122 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಅವರ ಸೊಗಸಾದ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ದಕ್ಷಿಣ ಆಫ್ರಿಕಾ ಪರ ಗಿಡಿ 45 ರನ್ ತೆತ್ತು ಮೂರು ವಿಕೆಟ್‌ ಕಬಳಿಸಿದರು. ಇತರೆಲ್ಲ ಬೌಲರ್‌ಗಳು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT