ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI: ಮಿಂಚಿದ ಶುಭಮನ್‌ ಗಿಲ್‌, ಇಶಾನ್, ಸಂಜು, ಪಾಂಡ್ಯ; ಭಾರತ 351/5

Published 1 ಆಗಸ್ಟ್ 2023, 17:46 IST
Last Updated 1 ಆಗಸ್ಟ್ 2023, 17:46 IST
ಅಕ್ಷರ ಗಾತ್ರ

ತರೂಬಾ: ಶುಭಮನ್‌ ಗಿಲ್‌ (85) ಮತ್ತು ಇಶಾನ್‌ ಕಿಶನ್‌ (77) ಅವರು ಹಾಕಿಕೊಟ್ಟ ಭದ್ರ ಬುನಾದಿಯ ನೆರವಿನಿಂದ ಭಾರತ ತಂಡ, ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ ಸವಾಲಿನ ಗುರಿ ನೀಡಿದೆ.

ಮಂಗಳವಾರ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 351 ರನ್‌ ಗಳಿಸಿತು. ಸಂಜು ಸ್ಯಾಮ್ಸನ್‌ (51) ಮತ್ತು ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ (ಅಜೇಯ 70, 52 ಎ.) ಅವರೂ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಟಾಸ್‌ ಗೆದ್ದ ಆತಿಥೇಯ ತಂಡದ ನಾಯಕ ಶೆಯ್‌ ಹೋಪ್‌ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಭಾರತದ ಆರಂಭಿಕ ಜೋಡಿ ಗಿಲ್‌ ಮತ್ತು ಇಶಾನ್‌ ಮೊದಲ ವಿಕೆಟ್‌ಗೆ 19.4 ಓವರ್‌ಗಳಲ್ಲಿ 143 ರನ್‌ ಸೇರಿಸಿ, ವಿಂಡೀಸ್‌ ನಾಯಕನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು.

ವೆಸ್ಟ್‌ ಇಂಡೀಸ್‌ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಆರಂಭಿಕ ವಿಕೆಟ್‌ಗೆ ದಾಖಲಾದ ದೊಡ್ಡ ಜತೆಯಾಟವಿದು. ಶಿಖರ್‌ ಧವನ್‌ ಮತ್ತು ಅಜಿಂಕ್ಯ ರಹಾನೆ 2017 ರಲ್ಲಿ 132 ರನ್‌ಗಳನ್ನು ಸೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಎಡಗೈ ಬ್ಯಾಟರ್‌ ಇಶಾನ್‌, ಸರಣಿಯ ಮೂರು ಪಂದ್ಯಗಳಲ್ಲೂ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. ಗಿಲ್‌ ತಾಳ್ಮೆಯಿಂದ ಆಡಿದರೆ, ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಇಶಾನ್‌ ಬೀಸಾಟವಾಡಿದರು. 64 ಎಸೆತಗಳನ್ನು ಎದುರಿಸಿದ ಅವರು ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದರು.

ಶತಕದತ್ತ ದಾಪುಗಾಲಿಟ್ಟಿದ್ದ ಇಶಾನ್, ಸ್ಪಿನ್ನರ್ ಯಾನಿಕ್‌ ಕಾರಿಯಾ ಎಸೆತದಲ್ಲಿ ಔಟಾದರು. ಕ್ರೀಸ್‌ಬಿಟ್ಟು ಮುಂದೆ ಬಂದು ಆಡುವ ಪ್ರಯತ್ನದಲ್ಲಿ ಸ್ಟಂಪ್‌ಔಟ್‌ ಆದರು. ಋತುರಾಜ್‌ ಗಾಯಕವಾಡ್ (8 ರನ್‌, 14 ಎ.) ಬೇಗನೇ ಮರಳಿದರು.

ಬಳಿಕ ಬಂದ ಸಂಜು ಸ್ಯಾಮ್ಸನ್‌ (51 ರನ್‌) ಅವರು ಗಿಲ್‌ಗೆ ತಕ್ಕ ಸಾಥ್‌ ನೀಡಿದರು. ಮೂರನೇ ವಿಕೆಟ್‌ಗೆ 69 ರನ್‌ಗಳು ಬಂದವು. 41 ಎಸೆತಗಳನ್ನು ಎದುರಿಸಿದ ಸಂಜು, 2 ಬೌಂಡರಿ ಮತ್ತು 4 ಸಿಕ್ಸರ್‌ ಹೊಡೆದು ರನ್‌ರೇಟ್‌ ಹೆಚ್ಚಿಸಲು ನೆರವಾದರು. ರೊಮಾರಿಯೊ ಶೆಫರ್ಡ್‌ ಎಸೆತದಲ್ಲಿ ಶಿಮ್ರೊನ್‌ ಹೆಟ್ಮೆಯರ್‌ಗೆ ಕ್ಯಾಚ್‌ಕೊಟ್ಟು ಅವರು ಪೆವಿಲಿಯನ್‌ಗೆ ಮರಳಿದರು.

ಗಿಲ್‌ ಅವರಿಗೂ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ಗುಡಾಕೇಶ್‌ ಮೋತಿಗೆ ವಿಕೆಟ್‌ ಒಪ್ಪಿಸಿದರು. ಹಾರ್ದಿಕ್‌ ಮತ್ತು ಸೂರ್ಯಕುಮಾರ್ ಯಾದವ್ (35 ರನ್‌, 30 ಎ., 4X2, 6X2) ಐದನೇ ವಿಕೆಟ್‌ಗೆ 65 ರನ್‌ ಕಲೆಹಾಕಿದರು. ಕೊನೆಯ ಓವರ್‌ಗಳಲ್ಲಿ ಹಾರ್ದಿಕ್‌ ಅಬ್ಬರಿಸಿದ್ದರಿಂದ ತಂಡದ ಮೊತ್ತ 350ರ ಗಡಿ ದಾಟಿತು. ಅವರ ಬ್ಯಾಟ್‌ನಿಂದ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳು ಸಿಡಿದವು.

ಸರಣಿಯ ಮೊದಲ ಎರಡು ಪಂದ್ಯಗಳ ಬಳಿಕ ಉಭಯ ತಂಡಗಳು 1–1 ರಿಂದ ಸಮಬಲ ಸಾಧಿಸಿವೆ.

ಭಾರತ ತಂಡ ಮೊದಲ ಎರಡು ಪಂದ್ಯಗಳಲ್ಲಿ ಮಾಡಿದಂತೆ ಈ ಪಂದ್ಯದಲ್ಲೂ ಪ್ರಯೋಗ ಮುಂದುವರಿಸಿತು. ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು ಕಣಕ್ಕಿಳಿಯಲಿಲ್ಲ. ಉಮ್ರನ್‌ ಮಲಿಕ್‌ ಮತ್ತು ಅಕ್ಷರ್‌ ಪಟೇಲ್‌ ಅವರ ಬದಲು ಋತುರಾಜ್‌ ಗಾಯಕವಾಡ್‌ ಹಾಗೂ ಜೈದೇವ್‌ ಉನದ್ಕತ್‌ ಅವರನ್ನು ಕಣಕ್ಕಿಳಿಸಿತು.

ಸಂಕ್ಷಿಪ್ತ ಸ್ಕೋರ್‌: 

ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 351 (ಇಶಾನ್‌ ಕಿಶನ್‌ 77, ಶುಭಮನ್‌ ಗಿಲ್‌ 85, ಋತುರಾಜ್‌ ಗಾಯಕವಾಡ್‌ 8, ಸಂಜು ಸ್ಯಾಮ್ಸನ್‌ 51, ಹಾರ್ದಿಕ್ ಪಾಂಡ್ಯ ಔಟಾಗದೆ 70, ಸೂರ್ಯಕುಮಾರ್‌ ಯಾದವ್ 35, ರೊಮಾರಿಯೊ ಶೆಫರ್ಡ್‌ 73ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT