ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್‌ ಜಾಧವ್ ವಿದಾಯ

Published 3 ಜೂನ್ 2024, 14:25 IST
Last Updated 3 ಜೂನ್ 2024, 14:25 IST
ಅಕ್ಷರ ಗಾತ್ರ

ಪುಣೆ: ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ್ದ ಆಲ್‌ರೌಂಡ್‌ ಆಟಗಾರ ಕೇದಾರ್‌ ಜಾಧವ್ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

39 ವರ್ಷ ವಯಸ್ಸಿನ ಜಾಧವ್‌, 2014ರ ನವೆಂಬರ್‌ನಲ್ಲಿ ರಾಂಚಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ‍ಪದಾರ್ಪಣೆ ಮಾಡಿದ್ದರು. 2020ರ ಫೆಬ್ರುವರಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡಕ್ಕೆ ಆಡಿದ್ದರು.

‘1500 ಗಂಟೆಗಳ ನನ್ನ ವೃತ್ತಿಜೀವನದುದ್ದಕ್ಕೂ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಎಲ್ಲ ಮಾದರಿಗಳ ಕ್ರಿಕೆಟ್‌ನಿಂದ ನಿವೃತ್ತನಾಗುತ್ತಿದ್ದೇನೆ’ ಎಂದು ‘ಎಕ್ಸ್’ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.

ಭಾರತದ ಪರ 73 ಏಕದಿನ ಪಂದ್ಯಗಳಲ್ಲಿ 52 ಇನಿಂಗ್ಸ್ ಆಡಿರುವ ಬಲಗೈ ಬ್ಯಾಟರ್‌ ಜಾಧವ್ ಎರಡು ಶತಕ ಮತ್ತು ಆರು ಅರ್ಧಶತಕ ಸೇರಿದಂತೆ 42.09ರ ಸರಾಸರಿಯಲ್ಲಿ 1389 ರನ್​ ಗಳಿಸಿದ್ದಾರೆ. ಸ್ಪಿನ್ನರ್‌ ಆಗಿರುವ ಅವರು 27 ವಿಕೆಟ್‌ ಪಡೆದಿದ್ದಾರೆ. 9 ಟಿ20 ಪಂದ್ಯಗಳಿಂದ 1 ಅರ್ಧಶತಕದೊಂದಿಗೆ 122 ರನ್ ಕಲೆಹಾಕಿದ್ದಾರೆ.

2017ರಲ್ಲಿ ಪುಣೆಯಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ 351 ರನ್‌ ಚೇಸಿಂಗ್‌ ಮಾಡಿ ಭಾರತ ಜಯ ಸಾಧಿಸಿತ್ತು. ಈ ಗೆಲುವಿನಲ್ಲಿ ಜಾಧವ್‌ ಮಹತ್ವದ ಪಾತ್ರ ವಹಿಸಿದ್ದರು. 63 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ (122 ರನ್‌) ಮತ್ತು ಜಾಧವ್‌ ಆಸರೆಯಾಗಿದ್ದರು. ಆ ಪಂದ್ಯದಲ್ಲಿ ಜಾಧವ್‌ 76 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸೇರಿದಂತೆ 120 ರನ್‌ ಗಳಿಸಿ, ಪಂದ್ಯದ ಆಟಗಾರರ ಗೌರವಕ್ಕೆ ಪಾತ್ರವಾಗಿದ್ದರು.

ಕುತೂಹಲಕಾರಿ ವಿಷಯವೆಂದರೆ ಪುಣೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಜಾಧವ್‌ ಅವರು ಕೊಲ್ಲಾಪುರ್ ಟಸ್ಕರ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಿವೃತ್ತಿ ಘೋಷಣೆಯು ಅದಕ್ಕೆ ಅನ್ವಯವಾಗಲಿದೆಯೇ ಎಂಬುದು ಖಚಿತವಿಲ್ಲ.

ಜಾಧವ್‌ ಅವರು ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳಿಗೆ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT