ಭಾನುವಾರ, ಆಗಸ್ಟ್ 14, 2022
28 °C

ಚಾಹಲ್-ರಾಹುಲ್, ಜಡೇಜ-ನಟರಾಜ ಗೆಲುವಿನ ಸ್ಟಾರ್ಸ್; ಪ್ರಮುಖ ಹೈಲೈಟ್ಸ್ ಇಲ್ಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ಯಾನ್‌ಬೆರಾ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿರುವ ಭಾರತ ಗೆಲುವಿನ ನಗೆ ಬೀರಿದೆ.

ರಾಹುಲ್ 12ನೇ ಅರ್ಧಶತಕ...

ಶುಕ್ರವಾರ ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಇನ್ ಫಾರ್ಮ್ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ (1) ಹಾಗೂ ನಾಯಕ ವಿರಾಟ್ ಕೊಹ್ಲಿ (9) ಬೇಗನೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಕ್ರೀಸಿನ ಮತ್ತೊಂದು ತುದಿಯಲ್ಲಿ ನೆಲೆಯೂರಿದ ಕೆ.ಎಲ್ ರಾಹುಲ್ ತಂಡವನ್ನು ಮುನ್ನಡೆಸಿದರು. ಇತ್ತೀಚೆಗಷ್ಟೇ ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಹುಲ್, ತಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.

 

ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರಾಹುಲ್ ಟಿ20 ವೃತ್ತಿ ಜೀವನದಲ್ಲಿ 12ನೇ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಭಾರತ ಸ್ಫರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾದರು. 40 ಎಸೆತಗಳನ್ನು ಎದುರಿಸಿದ ರಾಹುಲ್ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಇದನ್ನೂ ಓದಿ: 

ಜಡೇಜ ಬಿರುಸಿನ ಆಟ...

ಕೆಎಲ್ ರಾಹುಲ್ ಉತ್ತಮ ಆರಂಭದ ಹೊರತಾಗಿಯೂ ಆಸೀಸ್ ನಿಖರ ದಾಳಿಗೆ ಕುಸಿದ ಭಾರತ ಒಂದು ಹಂತದಲ್ಲಿ 13.5 ಓವರ್‌ಗಳಲ್ಲೇ 92 ರನ್ನಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ತಂಡವು 150ರ ಗಡಿ ದಾಟುವುದು ಅಸಾಧ್ಯವೆನಿಸಿತ್ತು.

 

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜ, ಭಾರತದ ಮೊತ್ತವನ್ನು 160ರ ಗಡಿ ದಾಟಿಸಲು ನೆರವಾದರು. ಕೊನೆಯ ಏಕದಿನ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟಿರುವ ಜಡ್ಡು, ಮಗದೊಮ್ಮೆ ಮಿಂಚಿನ ಆಟ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಕೇವಲ 23 ಎಸೆತಗಳನ್ನು ಎದುರಿಸಿದ ಜಡೇಜಾ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 44 ರನ್ ಗಳಿಸಿದರು. ಇನ್ನುಳಿದಂತೆ ಸಂಜು ಸ್ಯಾಮ್ಸನ್ (23) ಹಾಗೂ ಹಾರ್ದಿಕ್ ಪಾಂಡ್ಯ (16) ಎರಡಂಕಿಯನ್ನು ತಲುಪಿದರು.

 

ಜಡೇಜ ಬದಲಿಗೆ ಚಾಹಲ್; ಭಾರತಕ್ಕೆ ವರದಾನ

ಭಾರತೀಯ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರವೀಂದ್ರ ಜಡೇಜ ಹೆಲ್ಮೆಟ್‌ಗೆ ಬಡಿಯಿತು. ಪರಿಣಾಮ ತುರ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಐಸಿಸಿ ನೂತನ 'concussion substitute' ನಿಯಮದನ್ವಯ ಪಂದ್ಯದ ದ್ವಿತಿಯಾರ್ಧದಲ್ಲಿ ಜಡೇಜ ಬದಲಿ ಆಟಗಾರನಾಗಿ ಯಜುವೇಂದ್ರ ಚಾಹಲ್ ಅವರನ್ನು ಕಣಕ್ಕಿಳಿಸಲಾಯಿತು.

 

 

 

ಈ ನಿರ್ಣಾಯಕ ಬದಲಾವಣೆಯು ಭಾರತದ ಪಾಲಿಗೆ ವರದಾನವಾಗಿ ಪರಿಣಮಿಸಿತು. ಅತ್ತ ಆಸ್ಟ್ರೇಲಿಯಾ ತಂಡವು ತನ್ನ ಅಸಮಾಧಾನವನ್ನು ತೋರ್ಪಡಿಸಿತ್ತು.

 

ಚಾಹಲ್‌ಗೆ ಮೂರು ವಿಕೆಟ್, ಪಂದ್ಯಶ್ರೇಷ್ಠ...
162 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್ ಒಂದು ಹಂತದಲ್ಲಿ 7.3 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಆಸೀಸ್ ಸುಲಭವಾಗಿ ರನ್ ಬೆನ್ನಟ್ಟುವುದಾಗಿ ಅಂದಾಜಿಸಲಾಗಿತ್ತು. ಈ ಹಂತದಲ್ಲಿ ದಾಳಿಗಿಳಿದ ಯಜುವೇಂದ್ರ ಚಾಹಲ್ ಅಪಾಯಕಾರಿ ಆ್ಯರನ್ ಫಿಂಚ್ ಹೊರದುಬ್ಬುವ ಮೂಲಕ ಪಂದ್ಯದಲ್ಲಿ ತಿರುವಿಗೆ ಕಾರಣವಾದರು.

 

 

 

ಫಿಂಚ್ ಬೆನ್ನಲ್ಲೇ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಕೊನೆಯ ಹಂತದಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಪಡೆದ ಚಹಲ್ ಭಾರತದ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದರು. ಯಜುವೇಂದ್ರ ಚಾಹಲ್ ಬದಲಿ ಆಟಗಾರನಾಗಿ ಕಣಕ್ಕಿಳಿಯುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿ ವಿಶಿಷ್ಟ ದಾಖಲೆಗೆ ಅರ್ಹವಾದರು.

 

ಡೆಬ್ಯು ಸ್ಟಾರ್ ನಟರಾಜನ್...
ಇಲ್ಲಿ ಯುವ ಎಡಗೈ ವೇಗದ ಬೌಲರ್ ಟಿ ನಟರಾಜನ್ ಬೌಲಿಂಗ್ ಪ್ರದರ್ಶನವನ್ನು ವಿಶಿಷ್ಟವಾಗಿ ಉಲ್ಲೇಖಿಸಬೇಕು. ಆಸೀಸ್ ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸುತ್ತಿರುವ ಹೊರತಾಗಿಯೂ ಎಲ್ಲ ರೀತಿಯ ಒತ್ತಡವನ್ನು ನಿಭಾಯಿಸಿದ ನಟರಾಜನ್, ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ ಮೂರು ಅಮೂಲ್ಯ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇತ್ತೀಚೆಗಷ್ಟೇ ಏಕದಿನ ಅಂತರ ರಾಷ್ಟ್ರೀಯ ಕ್ರಿಕೆಟ್‌ಗೂ ಕಾಲಿರಿಸಿರುವ 'ಯಾರ್ಕರ್ ಸ್ಟಾರ್' ನಟರಾಜನ್, ಮೊದಲ ಟಿ20ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಡಾರ್ಸಿ ಶಾರ್ಟ್ ಹಾಗೂ ಮಿಚೆಲ್ ಸ್ಟಾರ್ಕ್ ವಿಕೆಟ್‌ಗಳನ್ನು ಕಬಳಿಸಿದರು.

 

 

 

ಪಾಂಡ್ಯ, ಸಂಜು 'ಸೂಪರ್' ಕ್ಯಾಚ್...
ಏಕದಿನ ಸರಣಿಯಲ್ಲಿ ಭಾರತ ಕಳಪೆ ಕ್ಷೇತ್ರರಕ್ಷಣೆಯಿಂದಾಗಿ ಹಿನ್ನೆಡೆ ಅನುಭವಿಸಿತ್ತು. ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಇದು ಮುಂದುವರಿದರೂ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಪಡೆದ ಕ್ಯಾಚ್‌ಗಳು ಪಂದ್ಯದ ಗತಿಯನ್ನು ಬದಲಾಯಿಸಿದವು. ಪಂದ್ಯದಲ್ಲಿ ಪಾಂಡ್ಯ ಎರಡು ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆದರು. ಇನ್ನೊಂದೆಡೆ ಚಹಲ್ ದಾಳಿಯಲ್ಲಿ ಸಂಜು ಸ್ಯಾಮ್ಸನ್ ಡೈವ್ ಹೊಡೆದು ಕ್ಯಾಚ್ ಹಿಡಿಯುವ ಮೂಲಕ ಸ್ಟೀವನ್ ಸ್ಮಿತ್ ಹೊರದಬ್ಬುವಲ್ಲಿ ನೆರವಾದರು. ಅತ್ತ ವಿರಾಟ್ ಕೊಹ್ಲಿ ಹಾಗೂ ಮನೀಷ್ ಪಾಂಡೆ ಕ್ಯಾಚ್‌ಗಳನ್ನು ಕೈಚೆಲ್ಲಿದರು.

 

 

 

 

ಧವನ್, ಕೊಹ್ಲಿ, ಪಾಂಡೆ ಫೇಲ್...
ಈ ಎಲ್ಲದರ ನಡುವೆ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫ್ಯಲ್ಯ ಅನುಭವಿಸಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಅನುಭವಿ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಮೊದಲ ಟಿ20ನಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ವೈಫಲ್ಯ ಅನುಭವಿಸಿದರು. ಕರ್ನಾಟಕದ ಮನೀಷ್ ಪಾಂಡೆ (2) ಕೂಡಾ ಛಾಪು ಒತ್ತುವಲ್ಲಿ ವಿಫಲವಾದರು. ಹಾಗಾಗಿ ಮುಂದಿನ ಪಂದ್ಯದಲ್ಲಿ ಪಾಂಡೆ ಬದಲು ಶ್ರೇಯಸ್ ಅಯ್ಯರ್ ಅವಕಾಶ ಗಿಟ್ಟಿಸುವರೇ ಕಾದು ನೋಡಬೇಕಿದೆ.

 

ಪ್ರಭಾವಿ ಎನಿಸಿಕೊಂಡ ಮೊಯಿಸೆಸ್ ಹೆನ್ರಿಕ್ಸ್...
ಆಸೀಸ್ ತಂಡದಲ್ಲಿ ಪ್ರಮುಖವಾಗಿಯೂ ಗಾಯಾಳು ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಅನುಪಸ್ಥಿತಿಯು ಎದ್ದು ಕಾಣುತ್ತಿತ್ತು. ಈ ನಡುವೆ ಆಲ್‌ರೌಂಡರ್ ಮೊಯಿಸೆಸ್ ಹೆನ್ರಿಕ್ಸ್ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಮೊದಲು ಬೌಲಿಂಗ್‌ನಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ ಹೆನ್ರಿಕ್ಸ್ ಬಳಿಕ ಬ್ಯಾಟಿಂಗ್‌ನಲ್ಲಿ 30 ರನ್ ಗಳಿಸಿ ಭಾರತದ ಪಾಳೇಯದಲ್ಲಿ ಅಪಾಯವನ್ನು ತಂದೊಡ್ಡಿದರು.

ಒಟ್ಟಿನಲ್ಲಿ ಕ್ಯಾನ್‌ಬೆರಾದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಬಾರಿಸಿದ್ದ ಟೀಮ್ ಇಂಡಿಯಾ ಇದೀಗ ಅದೇ ಮೈದಾನದಲ್ಲಿ ಟಿ20 ಸರಣಿಯಲ್ಲೂ ಗೆಲುವಿನ ಓಟ ಮುಂದುವರಿಸಿದೆ. ಸರಣಿಯ ದ್ವಿತೀಯ ಪಂದ್ಯವು ಡಿ. 6 ಭಾನುವಾರದಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಮೊದಲೆರಡು ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಭಾರತ ಅನುಕ್ರಮವಾಗಿ 66 ಹಾಗೂ 51 ರನ್ ಅಂತರದ ಸೋಲಿಗೆ ಶರಣಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು