ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL: ದಾಖಲೆ ಅಂತರದ ಜಯದೊಂದಿಗೆ ಲಂಕಾ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಭಾರತ

Last Updated 15 ಜನವರಿ 2023, 19:26 IST
ಅಕ್ಷರ ಗಾತ್ರ

ತಿರುವನಂತಪುರ: ವಿರಾಟ್‌ ಕೊಹ್ಲಿ ಮತ್ತು ಶುಭಮನ್‌ ಗಿಲ್‌ ಅವರ ಶತಕದಾಟ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧ ವಿಶ್ವದಾಖಲೆಯ ಗೆಲುವು ತಂದುಕೊಟ್ಟಿತು.

ತಿರುವನಂತಪುರದ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ (ಔಟಾಗದೆ 166) ಹಾಗೂ ಗಿಲ್‌ (116) ಬ್ಯಾಟಿಂಗ್ ವೈಭವ ಮೆರೆದರು.

ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮ ಬಳಗ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 390 ರನ್‌ ಗಳಿಸಿದರೆ, ಶ್ರೀಲಂಕಾ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟಾಯಿತು. 317 ರನ್‌ಗಳಿಂದ ಗೆದ್ದ ಭಾರತ, ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿತು.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ತಂಡವೊಂದಕ್ಕೆ ದೊರೆತ ಅತಿದೊಡ್ಡ ಗೆಲುವು ಇದು. ನ್ಯೂಜಿಲೆಂಡ್‌ 2008 ರಲ್ಲಿ ಐರ್ಲೆಂಡ್‌ ವಿರುದ್ದ ಪಡೆದಿದ್ದ 290 ರನ್‌ಗಳ ಗೆಲುವಿನ ದಾಖಲೆಯನ್ನು ಭಾರತ ಮುರಿಯಿತು. 2007 ರಲ್ಲಿ ಬರ್ಮುಡಾ ತಂಡವನ್ನು 257 ರನ್‌ಗಳಿಂದ ಮಣಿಸಿದ್ದು ಭಾರತದ ಅತಿದೊಡ್ಡ ಗೆಲುವು ಆಗಿತ್ತು.

ಸವಾಲಿನ ಗುರಿ ಬೆನ್ನಟ್ಟಿದ ಪ್ರವಾಸಿ ತಂಡ ಮೊಹ ಮ್ಮದ್‌ ಸಿರಾಜ್‌ (32ಕ್ಕೆ 4) ಒಳಗೊಂಡಂತೆ ಭಾರತದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ನಲುಗಿತು.

ಉತ್ತಮ ಆರಂಭ: ಮೊದಲು ಬ್ಯಾಟ್‌ ಮಾಡಿದ ಭಾರತ ತಂಡಕ್ಕೆ ರೋಹಿತ್‌ (42 ರನ್‌, 49 ಎ.) ಮತ್ತು ಗಿಲ್ ಮೊದಲ ವಿಕೆಟ್‌ಗೆ 95 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ರೋಹಿತ್‌ ಔಟಾದ ಬಳಿಕ ಜತೆಯಾದ ಕೊಹ್ಲಿ ಹಾಗೂ ಗಿಲ್‌ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಎರಡನೇ ವಿಕೆಟ್‌ಗೆ 131 ರನ್‌ಗಳು ಬಂದವು. ಆಕರ್ಷಕ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಗಿಲ್‌, ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಶತಕ ಗಳಿಸಿದರು.

ಗಿಲ್ ಔಟಾದ ಬಳಿಕ ಬಿರುಸಿನ ಆಟಕ್ಕಿಳಿದ ಕೊಹ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆಗರೆದರು. ಏಕದಿನ ಕ್ರಿಕೆಟ್‌ನಲ್ಲಿ 46ನೇ ಶತಕ ಪೂರೈಸಿದರು. ಸಚಿನ್‌ ತೆಂಡೂಲ್ಕರ್‌ (49 ಶತಕ) ಅವರ ದಾಖಲೆ ಸರಿಗಟ್ಟಲು ಇನ್ನು ಮೂರು ಶತಕಗಳು ಬೇಕು.

ಕೊನೆಯಲ್ಲಿ ಅಬ್ಬರ: ಕೊಹ್ಲಿ ಇನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದರು. ಅಂತಿಮ 10 ಓವರ್‌ಗಳಲ್ಲಿ ತಂಡ 116 ರನ್‌ ಕಲೆಹಾಕಿತು. ಅದರಲ್ಲಿ 84 ರನ್‌ಗಳು ಕೊಹ್ಲಿ ಬ್ಯಾಟ್‌ನಿಂದ ಬಂದವು. ತಾವೆದುರಿಸಿದ ಕೊನೆಯ 25 ಎಸೆತಗಳಲ್ಲಿ ಅವರು 66 ರನ್‌ ಗಳಿಸಿದರು. ಶ್ರೇಯಸ್‌ ಅಯ್ಯರ್‌ (38, 32 ಎ.) ಅವರೊಂದಿಗೆ ಮೂರನೇ ವಿಕೆಟ್‌ಗೆ 108 ರನ್‌ ಸೇರಿಸಿದರು.

ಐದನೇ ಸ್ಥಾನಕ್ಕೆ: ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಜಯವರ್ಧನೆ (12,650) ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದರು. ಭಾರತದ ಬ್ಯಾಟರ್‌ 268 ಪಂದ್ಯಗಳಿಂದ 12,754 ರನ್‌ ಕಲೆಹಾಕಿದ್ದಾರೆ.

ಬಂಡಾರ, ವಂಡರ್ಸೆಗೆ ಗಾಯ: ಶ್ರೀಲಂಕಾ ತಂಡದ ಆಶನ್‌ ಬಂಡಾರ ಮತ್ತು ಜೆಫ್ರಿ ವಂಡರ್ಸೆ ಅವರು ಬೌಂಡರಿ ತಡೆ ಯುವ ಪ್ರಯತ್ನದಲ್ಲಿ ಪರಸ್ಪರ ಡಿಕ್ಕಿಯಾಗಿ ಗಾಯ ಗೊಂಡರು. 43ನೇ ಓವರ್‌ನಲ್ಲಿ ಕೊಹ್ಲಿ ಹೊಡೆದ ಚೆಂಡನ್ನು ತಡೆಯುವ ವೇಳೆ ಈ ಘಟನೆ ನಡೆಯಿತು. ಇಬ್ಬರನ್ನೂ ಸ್ಟ್ರೆಚರ್‌ನಲ್ಲಿ ಅಂಗಳದಲ್ಲಿ ಹೊರಕ್ಕೆ ತರಲಾಯಿತು. ‘ಆಶನ್‌ ಮತ್ತು ವಂಡರ್ಸೆ ಅವರನ್ನು ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಸಂಕ್ಷಿಪ್ತ ಸ್ಕೋರ್‌
ಭಾರತ:
50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 390 (ರೋಹಿತ್‌ ಶರ್ಮ 42, ಶುಭಮನ್‌ ಗಿಲ್‌ 116, ವಿರಾಟ್‌ ಕೊಹ್ಲಿ ಔಟಾಗದೆ 166, ಶ್ರೇಯಸ್‌ ಅಯ್ಯರ್‌ 38, ಕೆ.ಎಲ್‌.ರಾಹುಲ್‌ 7, ಸೂರ್ಯಕುಮಾರ್‌ ಯಾದವ್ 4, ಅಕ್ಷರ್‌ ಪಟೇಲ್‌ ಔಟಾಗದೆ 4, ಕಸುನ್‌ ರಜಿತ 81ಕ್ಕೆ 2)

ಶ್ರೀಲಂಕಾ: 22 ಓವರ್‌ಗಳಲ್ಲಿ 73 (ನುವಾನಿದು ಫರ್ನಾಂಡೊ 19, ಮೊಹಮ್ಮದ್‌ ಸಿರಾಜ್‌ 32ಕ್ಕೆ 4, ಶಮಿ 20ಕ್ಕೆ 2, ಕುಲದೀಪ್‌ ಯಾದವ್ 16ಕ್ಕೆ 2)

ಫಲಿತಾಂಶ: ಭಾರತಕ್ಕೆ 317 ರನ್‌ ಗೆಲುವು; 3–0 ರಲ್ಲಿ ಸರಣಿ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT