ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ: ರಾಹುಲ್‌, ಪಾಂಡ್ಯ ಅಮಾನತು 

7

ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ: ರಾಹುಲ್‌, ಪಾಂಡ್ಯ ಅಮಾನತು 

Published:
Updated:
Prajavani

ನವದೆಹಲಿ: ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಬಿಸಿಸಿಐ ಅಮಾನತುಗೊಳಿಸಿದ್ದು ತನಿಖೆಗೆ ಆದೇಶಿಸಿದೆ.

‘ಕಾಫಿ ವಿಥ್‌ ಕರಣ್‌’ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ಈ ಇಬ್ಬರು ತಾವನುಭವಿಸಿದ ಲೈಂಗಿಕತೆಯ ಕುರಿತು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್‌ ಅವರು ಇವರಿಬ್ಬರ ಮೇಲೆ ಎರಡು ಪಂದ್ಯಗಳ ನಿಷೇಧ ಹೇರಬೇಕು ಎಂದು ಗುರುವಾರ ಶಿಫಾರಸು ಮಾಡಿದ್ದರು.

ಸಮಿತಿ ಸದಸ್ಯೆ ಡಯಾನ ಎಡುಲ್ಜಿ ಅಮಾನತು ಮಾಡುವಂತೆ ಶಿಫಾರಸು ಮಾಡಿದ್ದರು. ಅಮಾನತಿಗೆ ಒಳಗಾದ ಕಾರಣ ಇಬ್ಬರೂ ಆಸ್ಟ್ರೇಲಿಯಾದಿಂದ ವಾಪಸ್ ಬರಬೇಕಾಗಿದೆ.

ತವರಿಗೆ ಮರಳಲಿರುವ ಆಟಗಾರರು
ನವದೆಹಲಿ: ‘ಹಾರ್ದಿಕ್ ಮತ್ತು ರಾಹುಲ್ ಅವರು ಏಕದಿನ ಸರಣಿಯಿಂದ ಅಮಾನತಾಗಿರುವುದು ದೃಢಪಟ್ಟಿದೆ. ಅವರು ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ನಾಳೆ ಆಸ್ಟ್ರೇಲಿಯಾದಿಂದ ಹೊರಡಲಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಆಸ್ಟ್ರೇಲಿಯಾ ಎದುರಿನ ಏಕದಿನ ಟೂರ್ನಿಯ ನಂತರ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ. ಆ ಸರಣಿಯಲ್ಲಿಯೂ ಇವರಿಬ್ಬರಿಗೆ ಸ್ಥಾನ ಸಿಗುವುದು ಖಚಿತವಿಲ್ಲ’ ಎಂದೂ ಅಧಿಕಾರಿ ತಿಳಿಸಿದ್ದಾರೆ.

‘ಅವರಿಬ್ಬರ ವಿರುದ್ಧ ತನಿಖೆ ಆರಂಭಿಸುವ ಮುನ್ನ ಮತ್ತೊಮ್ಮೆ ಶೋಕಾಸ್ ನೋಟಿಸ್ ನೀಡಲಾಗುವುದು. ಬಿಸಿಸಿಐನ ಆಂತರಿಕ ಸಮಿತಿ ಅಥವಾ ಹಂಗಾಮಿ ಒಂಬುಡ್ಸ್‌ಮನ್‌ ಅವರು ವಿಚಾರಣೆ ನಡೆಸುವರು. ಇವರಿಬ್ಬರಲ್ಲಿ ಯಾರಿಗೆ ಹೊಣೆ ನೀಡುವುದು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ಟಿವಿ ಶೋನಲ್ಲಿ ತಾವು ನೀಡಿದ ಹೇಳಿಕೆಗೆ ಹಾರ್ದಿಕ್ ಪಾಂಡ್ಯ ಅವರು ಈಗಾಗಲೇ ಟ್ವಿಟರ್ ಮೂಲಕ ಕ್ಷಮೆ ಕೋರಿದ್ದಾರೆ. ಆದರೆ, ರಾಹುಲ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಕಾನೂನು ಸಲಹೆ: ಬಿಸಿಸಿಐ ಈ ಕುರಿತು ಕಾನೂನು ಸಲಹೆ ಪಡೆದಿದೆ. ಅದರ ಕುರಿತು ಪ್ರತಿಕ್ರಿಯಿಸಿದ ಪದಾಧಿಕಾರಿಯೊಬ್ಬರು, ‘ಈ ವಿಷಯದ ಕುರಿತು ಕಾನೂನು ಕ್ರಮ ಜರುಗಿಸಲು ಮಂಡಳಿಯಲ್ಲಿ ಯಾವುದೇ ನಿಯಮವಿಲ್ಲ’ ಎಂದು ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಒಎ ಸದಸ್ಯೆ ಡಯಾನಾ ಎಡುಲ್ಜಿ, ‘ಇಬ್ಬರೂ ಆಟಗಾರರ ವಿಚಾರಣೆ ಮುಗಿಯುವವರೆಗೆ ಮತ್ತು ಕ್ರಮದ ಕುರಿತ ನಿರ್ಧಾರ ಕೈಗೊಳ್ಳುವವರೆಗೆ ಅಮಾನತಿನಲ್ಲಿಡುವುದು ಅನಿವಾರ್ಯವಾಗಿದೆ. ಈಚೆಗೆ ಮಂಡಳಿಯ ಸಿಇಒ ರಾಹುಲ್ ಜೊಹ್ರಿ ಅವರ ವಿರುದ್ಧ ಲೈಂಗಿಕ ಶೋಷಣೆ ಆರೋಪ ಕೇಳಿ ಬಂದಾಗಲೂ ಇದೇ ಕ್ರಮವನ್ನು ಅನುಸರಿಸಲಾಗಿತ್ತು’ ಎಂದಿದ್ದಾರೆ.

ಹಾರ್ದಿಕ್‌ ಪಾಂಡ್ಯಗೆ ಅಪ್ಪನ ಬೆಂಬಲ
ನವದೆಹಲಿ:
‘ಹಾರ್ದಿಕ್ ಭಾಗವಹಿ ಸಿದ್ದು ಮನರಂಜನಾ ಕಾರ್ಯಕ್ರಮ. ಲಘುಹಾಸ್ಯದ ಧಾಟಿಯಲ್ಲಿ ಅವರು ಹೇಳಿರುವ ಮಾತುಗಳನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಸ್ವರೂಪಕ್ಕೆ ತಕ್ಕಂತೆ ವೀಕ್ಷ ಕರಿಗೆ ಮನರಂಜನೆ ನೀಡಲು ಅವರು ಪ್ರಯತ್ನಿಸಿದ್ದರು’ ಎಂದು ಹಾರ್ದಿಕ್ ತಂದೆ ಹಿಮಾಂಶು ಪಾಂಡ್ಯ ಹೇಳಿದ್ದಾರೆ.

ಚೌಧರಿ ಕಳವಳ: ‘ಹಾರ್ದಿಕ್ ಮತ್ತು ರಾಹುಲ್ ಅವರ ಈ ರೀತಿಯ ನಡವಳಿಕೆಯನ್ನು ಬುಕ್ಕಿಗಳು ಬಳಸಿ ಕೊಳ್ಳುವ ಅಪಾಯವಿತ್ತು. ಹನಿಟ್ರ್ಯಾಪ್ ಮಾಡಿ, ಮ್ಯಾಚ್ ಫಿಕ್ಸಿಂಗ್ ಮತ್ತಿತರ ಅವ್ಯವಹಾರಗಳಿಗೆ ಒಡ್ಡುವ ಅಪಾ ಯವೂ ಇರುತ್ತದೆ’ ಎಂದು ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ ಕಳವಳ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !