ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಹಣದ ಕೊರತೆಯಿಲ್ಲ: ಶೋಯಬ್ ಅಖ್ತರ್‌ಗೆ ತಿರುಗೇಟು ನೀಡಿದ ಕಪಿಲ್ ದೇವ್

Last Updated 9 ಏಪ್ರಿಲ್ 2020, 11:06 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತಕ್ಕೆ ಹಣದ ಅಗತ್ಯವಿಲ್ಲ. ಜನರ ಜೀವನವನ್ನು ಪಣಕ್ಕಿಟ್ಟು ಕ್ರಿಕೆಟ್ ಪಂದ್ಯ ಆಡುವ ಜರೂರತ್ತೂ ಇಲ್ಲ’ ಎಂದು ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಅವರು ಪಾಕಿಸ್ತಾನದ ಆಟಗಾರ ಶೋಯಬ್ ಅಖ್ತರ್‌ಗೆ ತಿರುಗೇಟು ನೀಡಿದ್ದಾರೆ.

‘ಕೊವಿಡ್‌ –19 ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಪಂದ್ಯ ಆಡಬೇಕು’ ಎಂದು ಶೋಯಬ್ ಸಲಹೆ ನೀಡಿದ್ದರು.

‘ಅವರ ಅಭಿಪ್ರಾಯ ಅವರಿಗೆ ಬಿಟ್ಟಿದ್ದು. ಆದರೆ, ನಮ್ಮ ದೇಶಕ್ಕೆ ಇವತ್ತು ಹಣದ ಕೊರತೆಯಿಲ್ಲ. ನಮ್ಮ ಬಳಿ ಸಾಕಷ್ಟಿದೆ. ಸದ್ಯ ನಮ್ಮ ಸರ್ಕಾರಗಳು ತೆಗೆದುಕೊಳ್ಳುವ ಕ್ರಮಗಳು ಯಶಸ್ವಿಯಾಗುವಂತೆ ನಾವು ಕೈಜೋಡಿಸಬೇಕು. ಎಲ್ಲರೂ ಸೇರಿ ಕಾರ್ಯನಿರ್ವಹಿಸಬೇಕು. ಆದರೆ ರಾಜಕೀಯ ಪಕ್ಷಗಳು ಪರಸ್ಪರ ಟೀಕೆಗಳನ್ನು ಮಾಡುತ್ತಿರುವುದನ್ನು ಟಿವಿಯಲ್ಲಿ ನೋಡಿದ್ದೇನೆ. ಇದು ನಿಲ್ಲಬೇಕು’ ಎಂದು ಕಪಿಲ್ ಹೇಳಿದ್ದಾರೆ.

‘ಬಿಸಿಸಿಐ ಈ ಹೋರಾಟಕ್ಕೆ ತನ್ನ ಬೆಂಬಲವನ್ನು ನೀಡಿದೆ. ದೊಡ್ಡ ಮೊತ್ತವನ್ನೂ (₹ 51 ಕೋಟಿ) ದೇಣಿಗೆ ನೀಡಿದೆ. ಭವಿಷ್ಯದಲ್ಲಿ ಮತ್ತಷ್ಟು ಅಗತ್ಯಬಿದ್ದರೆ ಕೊಡುವಷ್ಟು ಸಾಮರ್ಥ್ಯವೂ ಅದಕ್ಕಿದೆ’ ಎಂದಿದ್ದಾರೆ.

‘ಈಗಿನ ಪರಿಸ್ಥಿತಿಯಲ್ಲಿ ನಿಧಿ ಸಂಗ್ರಹಕ್ಕಾಗಿ ಪಂದ್ಯ ಆಯೋಜಿಸುವುದೆಂದರೆ, ನಮ್ಮ ಕ್ರಿಕೆಟಿಗರ ಜೀವವನ್ನು ಪಣಕ್ಕಿಟ್ಟಂತೆಯೇ ಲೆಕ್ಕ. ಇದು ಸಮಂಜಸವಲ್ಲ. ಹಾಗೊಮ್ಮೆ ಪಂದ್ಯ ಇಟ್ಟರೂ ಎಷ್ಟು ಮೊತ್ತ ಸಂಗ್ರಹವಾಗುತ್ತದೆ ಎಂಬುದನ್ನೂ ಯೋಚಿಸಬೇಕು. ಮುಂದಿನ ಐದಾರು ತಿಂಗಳಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಡಿಸುವುದು ಸಾಧ್ಯವಿಲ್ಲದ ಮಾತು’ ಎಂದು ಅಭಿಪ್ರಾಯಪಟ್ಟರು.

‘ಸದ್ಯ ದೇಶದ ಪರಿಸ್ಥಿತಿಯು ಸುಧಾರಿಸುವಂತೆ ಎಲ್ಲರೂ ಪ್ರಯತ್ನಿಸಬೇಕು. ಒಂದೊಮ್ಮೆ ಎಲ್ಲವೂ ಸುಧಾರಣೆಯಾದರೆ ಕ್ರಿಕೆಟ್‌ ಸೇರಿದಂತೆ ಎಲ್ಲ ಕ್ರೀಡೆಗಳು ಆರಂಭವಾಗುತ್ತವೆ. ಬಡವರು, ಹಸಿದವರಿಗೆ ಸಹಾಯ ಮಾಡಬೇಕು. ಆರೋಗ್ಯ ಸಿಬ್ಬಂದಿ, ಪೊಲೀಸ್ ಮತ್ತಿತರರು ನಮ್ಮೆಲ್ಲರ ಕ್ಷೇಮಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಬೆಂಬಲಿಸಬೇಕು’ ಎಂದು 61 ವರ್ಷದ ಕಪಿಲ್ ಹೇಳಿದರು.

‘ಕಷ್ಟದಲ್ಲಿರುವವರಿಗೆ ನೆರವು ನೀಡುವುದು ನಮ್ಮ ದೇಶದ ಸಂಸ್ಕೃತಿಯ ಬೇರಿನಲ್ಲಿದೆ. ಇವತ್ತಿನ ಕಠಿಣ ಪರಿಸ್ಥಿತಿಯಲ್ಲಿಯೂ ನಾವು ದೊಡ್ಡ ದೊಡ್ಡ ದೇಶಗಳಿಗೆ ನೆರವು ಒದಗಿಸಲು ಶಕ್ತರಾಗಿರುವುದು ಹೆಮ್ಮೆಯ ವಿಷಯ’ ಎಂದು ಭಾರತವು ಅಮೆರಿಕಕ್ಕೆ ಔಷಧಿ ರಫ್ತು ಮಾಡಿರುವ ಕುರಿತ ವಿಷಯವನ್ನು ಪ್ರಸ್ತಾಪಿಸಿದರು.

ಲಾಕ್‌ಡೌನ್‌ ಕುರಿತು ಪ್ರತಿಕ್ರಿಯಿಸಿದ ಅವರು, ‘ದಕ್ಷಿಣ ಆಫ್ರಿಕಾದ ನೆಲ್ಸನ್‌ ಮಂಡೇಲಾ ಅವರು 27 ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಬಂದಿಯಾಗಿದ್ದರು. ಅದಕ್ಕೆ ಹೋಲಿಸಿದರೆ ಇದೇನೂ ಅಲ್ಲ. ನಮ್ಮ ಸ್ವರಕ್ಷಣೆಗಾಗಿ ನಾವು ಗೃಹಬಂಧನದಲ್ಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT