ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಪಡೆಗೆ ಸರಣಿ ಕಿರೀಟ; ಮೋದಿ ಅಂಗಳದಲ್ಲಿ ಅಕ್ಷರ್–ಅಶ್ವಿನ್ ಸ್ಪಿನ್ ಮೋಡಿ

ವಾಷಿಂಗ್ಟನ್ ಸುಂದರ್‌ಗೆ ಕೈಗೂಡದ ಶತಕದ ಆಸೆ;
Last Updated 6 ಮಾರ್ಚ್ 2021, 19:49 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತಿ ಪ್ರತಿಭೆ ಅಕ್ಷರ್ ಪಟೇಲ್ ಶನಿವಾರ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣಗದಲ್ಲಿ ಎರಡು ಜೊತೆಯಾಟಗಳಲ್ಲಿ ಮಿಂಚಿದರು. ಬೆಳಿಗ್ಗೆ ಬ್ಯಾಟಿಂಗ್‌ನಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೂಡಿ ಭಾರತ ತಂಡಕ್ಕೆ ಉತ್ತಮ ಮುನ್ನಡೆಯ ಬಲ ತುಂಬಿದರು ಮಧ್ಯಾಹ್ನ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಜೊತೆಗೂಡಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಪಡೆಯನ್ನು ದೂಳೀಪಟ ಮಾಡಿದರು.

ಆತಿಥೇಯರು ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿದ್ದ 160 ರನ್‌ಗಳ ಮುನ್ನಡೆ ಮೊತ್ತವನ್ನು ಚುಕ್ತಾ ಮಾಡುವ ಜೋ ರೂಟ್ ಬಳಗವು 54.5 ಓವರ್‌ಗಳಲ್ಲಿ 135 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಇದರಿಂದಾಗಿ ಇನಿಂಗ್ಸ್ ಮತ್ತು 25 ರನ್‌ಗಳ ಅಂತರದಿಂದ ಪರಾಭವಗೊಂಡಿತು. ಮೂರೇ ದಿನಗಳಲ್ಲಿ ಟೆಸ್ಟ್ ಪಂದ್ಯ ಮುಗಿಯಿತು. ಹೋದ ಪಂದ್ಯವು ಎರಡು ದಿನಗಳಲ್ಲಿ ಮುಕ್ತಾಯವಾಗಿತ್ತು. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 205 ರನ್‌ಗಳಿಗೆ ಉತ್ತರವಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 114.4 ಓವರ್‌ಗಳಲ್ಲಿ 365 ರನ್ ಗಳಿಸಿತು.

ವಿರಾಟ್ ಕೊಹ್ಲಿ ಪಡೆಯು 3–1ರಿಂದ ಸರಣಿ ಜಯಿಸಿತು. ಇದರೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ (ಡಬ್ಲುಟಿಸಿ) ಪಾಯಿಂಟ್ ಪಟ್ಟಿಯಲ್ಲಿಯೂ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸಿತು. ಅದರಿಂದಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಡಬ್ಲುಟಿಸಿ ಫೈನಲ್ ಕನಸು ಕಮರಿತು.

ನಾಲ್ಕನೇ ಪಂದ್ಯದ ಮುನ್ನ ಭಾರತ ತಂಡವು ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತ್ತು. ಆದರೆ, ನಾಲ್ಕನೇ ಪಂದ್ಯದಲ್ಲಿ ಒಂದೊಮ್ಮೆ ಸೋತಿದ್ದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಸಾಗಲು ಮತ್ತೊಂದು ಸಣ್ಣ ಅವಕಾಶ ಇರುತ್ತಿತ್ತು. ಆದರೆ ಈಗ ಗೆಲುವು ಮತ್ತು ಪಾಯಿಂಟ್ಸ್‌ ಸರಾಸರಿಯಲ್ಲಿ ಭಾರತವು ಅಗ್ರಸ್ಥಾನ ಗಳಿಸಿದೆ. ಈ ಮೊದಲೇ ಫೈನಲ್ ಅರ್ಹತೆ ಗಿಟ್ಟಿಸಿದ್ದ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕಿಳಿದಿದೆ. ಕಿವೀಸ್ ಮತ್ತು ಭಾರತ ಲಾರ್ಡ್ಸ್‌ನಲ್ಲಿ ಜೂನ್‌ನಲ್ಲಿ ಮುಖಾಮುಖಿಯಾಗಲಿವೆ.

ಸುಂದರ್‌ಗೆ ಒಲಿಯದ ಶತಕ

ರವೀಂದ್ರ ಜಡೇಜ ಅವರ ಗೈರುಹಾಜರಿಯನ್ನು ಸಮರ್ಥವಾಗಿ ತುಂಬಿದ ವಾಷಿಂಗ್ಟನ್ ಸುಂದರ್‌ (ಔಟಾಗದೆ 96; 174ಎಸೆತ, 10ಬೌಂಡರಿ, 1 ಸಿಕ್ಸರ್) ಕೇವಲ ನಾಲ್ಕು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಆದರೆ, ಇನಿಂಗ್ಸ್‌ನಲ್ಲಿ ಎರಡನೇ ಶತಕದ ಜೊತೆಯಾಟ ಆಡುವಲ್ಲಿ ಯಶಸ್ವಿಯಾದರು.

ಶುಕ್ರವಾರ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರ 113 ರನ್‌ಗಳ ಜೊತೆಯಾಟವು ಮರುಹೋರಾಟದ ಬಲ ತುಂಬಿತ್ತು. ರಿಷಭ್ ಅಮೋಘ ಶತಕ ದಾಖಲಿಸಿದ್ದರು. ದಿನದಾಟದ ಮುಕ್ತಾಯಕ್ಕೆ ಕ್ರೀಸ್‌ನಲ್ಲಿದ್ದ ಸುಂದರ್ ಮತ್ತು ಅಕ್ಷರ್ ಮೂರನೇ ದಿನ ಬೆಳಿಗ್ಗೆಯೂ ಚೆಂದದ ಬ್ಯಾಟಿಂಗ್ ಮಾಡಿದರು. ಇವರಿಬ್ಬರೂ ಎಂಟನೇ ವಿಕೆಟ್ ಜೊತೆಯಟದಲ್ಲಿ 106 ರನ್ ಗಳಿಸಿದರು.

ಆದರೆ, ಜೋ ರೂಟ್ ಮತ್ತು ಜಾನಿ ಬೆಸ್ಟೊ ಅವರ ಚುರುಕಾದ ಫೀಲ್ಡಿಂಗ್ ಮತ್ತು ಥ್ರೋ ದಿಂದಾಗಿ ಅಕ್ಷರ್ (43; 97ಎಸೆತ, 5ಬೌಂಡರಿ, 1ಸಿಕ್ಸರ್) ರನ್‌ಔಟ್ ಆದರು. ಇದರಿಂದಾಗಿ ಜೊತೆಯಾಟವೂ ಮುರಿಯಿತು. ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳಾದ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಹೆಚ್ಚು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ವಾಷಿಂಗ್ಟನ್ ಶತಕದ ಅಸೆ ಕೈಗೂಡಲಿಲ್ಲ.

ಅಶ್ವಿನ್ –ಅಕ್ಷರ್ ಜೊತೆಯಾಟ

ತಮ್ಮ ತವರಿನಂಗಳದಲ್ಲಿ ’ಪಂಚಗುಚ್ಛಗಳ ಹ್ಯಾಟ್ರಿಕ್‘ ಸಾಧಿಸುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು. ಹೋದ ವಾರ ಇಲ್ಲಿಯೇ ನಡೆದಿದ್ದ ಹಗಲು–ರಾತ್ರಿ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿಯೂ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದರು.

ಇಲ್ಲಿ ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್ ಜೊತೆಗೆ ದಾಳಿ ನಡೆಸಿದ ಅಕ್ಷರ್ ಮತ್ತೆ ಐದು ವಿಕೆಟ್ ಗಳಿಸಿದರು. ಅಶ್ವಿನ್ ಖಾತೆಗೆ ಮತ್ತೊಂದು ಪಂಚಗುಚ್ಛದ ಸಾಧನೆ ಸೇರಿತು.

ಅಕ್ಷರ್‌ಗೆ ಇದು ಪದಾರ್ಪಣೆಯ ಸರಣಿಯೂ ಹೌದು. ಕಳೆದ ಮೂರು ಪಂದ್ಯಗಳಲ್ಲಿ ಅವರು ನಾಲ್ಲು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಒಟ್ಟು 27 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅಶ್ವಿನ್ 28 ವಿಕೆಟ್‌ ಗಳಿಸಿದ್ದಾರೆ. ಚೆನ್ನೈನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಅವರು ಶತಕವನ್ನೂ ಬಾರಿಸಿದ್ದರು. ಅವರಿಗೆ ಸರಣಿಶ್ರೇಷ್ಠ ಗೌರವ ನೀಡಲಾಯಿತು. ರಿಷಭ್ ಪಂತ್ ಪಂದ್ಯ ಶ್ರೇಷ್ಠರಾದರು.

ಸ್ಪಿನ್ನರ್‌ಗಳಿಗೆ 20 ವಿಕೆಟ್!

ನಾಲ್ಕನೇ ಟೆಸ್ಟ್‌ನಲ್ಲಿಯೂ ಪಿಚ್‌ ಸ್ಪಿನ್ನರ್‌ಗಳಿಗೇ ಹೆಚ್ಚು ನೆರವು ನೀಡಿತು. ಮೂರು ದಿನಗಳಲ್ಲಿ ಪತನವಾದ ಒಟ್ಟು 30 ವಿಕೆಟ್‌ಗಳಲ್ಲಿ 20 ಸ್ಪಿನ್‌ಬೌಲರ್‌ಗಳ ಪಾಲಾದವು. ಅದರಲ್ಲೂ ಇಂಗ್ಲೆಂಡ್‌ನ ಎರಡನೇ ಇನಿಂಗ್ಸ್‌ನಲ್ಲಿ ಎಲ್ಲ ಹತ್ತು ಬ್ಯಾಟ್ಸ್‌ಮನ್‌ಗಳೂ ಭಾರತದ ಸ್ಪಿನ್ ಜೋಡಿ–ಮೋಡಿಗೆ ತಲೆಬಾಗಿದರು.

ಪಿಚ್ ಕ್ಯುರೇಟರ್‌ಗೆ ರವಿಶಾಸ್ತ್ರಿ ಅಭಿನಂದನೆ

ಮೊಟೇರಾ ಪಿಚ್‌ ಅದ್ಭುತವಾದ ಮನರಂಜನೆ ನೀಡುವಂತಹ ಕ್ರಿಕೆಟ್ ತಾಣವಾಗಿದೆ. ಇಂತಹ ಪಿಚ್‌ ಬಗ್ಗೆ ಯಾರೂ ದೂರಲು ಸಾಧ್ಯವಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಭಾರತದ ಈ ಯಶಸ್ಸು ಇಲ್ಲಿಯ ಪಿಚ್‌ ಕ್ಯುರೇಟರ್ ಮತ್ತು ಅವರ ಸಿಬ್ಬಂದಿಗೆ ಸಲ್ಲಬೇಕು. ಈ ಮಾತು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ ಎಂದು ಪಂದ್ಯದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ರವಿ ಹೇಳಿದರು.
‘ನನ್ನ ದೃಷ್ಟಿಯಲ್ಲಿ ಕ್ಯುರೇಟರ್ ಆಶಿಶ್ ಭೌಮಿಕ್ ಕುಶಲ ಕರ್ಮಿಯಾಗಿದ್ದಾರೆ. ಅನುಭವಿ ದಲ್ಜೀತ್ ಸಿಂಗ್ ಅವರೊಂದಿಗೆ ಕಾರ್ಯನಿರ್ವಹಿಸುತ್ತ ಪರಿಶ್ರಮದಿಂದ ಪಿಚ್ ಸಿದ್ಧಪಡಿಸುವ ಕಲೆಯನ್ನು ಕಲಿತಿದ್ದಾರೆ. ಅವರಿಗೆ ಎಲ್ಲ ಶ್ರೇಯವೂ ಸಲ್ಲಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT