ಮಂಗಳವಾರ, ಮಾರ್ಚ್ 31, 2020
19 °C
ಪಿಂಕ್‌ ಬಾಲ್‌ ಟೆಸ್ಟ್‌: ನಾಯಕ ವಿರಾಟ್ ಕೊಹ್ಲಿ ಶತಕ; ವೇಗಿ ಇಶಾಂತ್ ಶರ್ಮಾ ಮತ್ತೆ ಆರ್ಭಟ

ಜಯದ ಹಾದಿಯಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಹೊನಲು ಬೆಳಕು ಕಾಣುವ ಮೊದಲೇ ನಾಯಕ ವಿರಾಟ್‌ ಕೊಹ್ಲಿ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ಅವರ ಶತಕದ (136) ನೆರವಿನಿಂದ ಆತಿಥೇಯ ತಂಡ ಶನಿವಾರ ಬಾಂಗ್ಲಾದೇಶ ವಿರುದ್ಧ 241 ರನ್‌ಗಳ ಭಾರಿ ಮುನ್ನಡೆ ಸಾಧಿಸಿತು. ನಂತರ ಇಶಾಂತ್‌ ಶರ್ಮಾ ಉರಿ ವೇಗದ ದಾಳಿಗೆ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲೂ ತತ್ತರಿಸಿತು.

ಒಂದು ಹಂತದಲ್ಲಿ ಎರಡೇ ದಿನಗಳಲ್ಲಿ ಭಾರತ ಈ ಐತಿಹಾಸಿಕ ಟೆಸ್ಟ್‌ ಗೆಲ್ಲುವಂತೆ ಕಂಡಿತ್ತು. ಆದರೆ ಎದುರಾಳಿ ತಂಡದ ಕೆಳಮಧ್ಯಮ ಕ್ರಮಾಂಕದ ಆಟಗಾರರ ಪ್ರತಿರೋಧದಿಂದ ಅದು ಈಡೇರಲಿಲ್ಲ. ಎರಡನೇ ದಿನದಾಟ ಮುಗಿದಾಗ ಬಾಂಗ್ಲಾದೇಶ 6 ವಿಕೆಟ್‌ಗೆ 152 ರನ್‌ ಗಳಿಸಿದ್ದು, ಇನಿಂಗ್ಸ್‌ ಸೋಲು ತಪ್ಪಿಸಲು ಇನ್ನೂ 89 ರನ್‌ ಗಳಿಸಬೇಕಾಗಿದೆ. 

 

ಇದಕ್ಕೆ ಮೊದಲು ವಿರಾಟ್‌ ಕೊಹ್ಲಿ ಆಕರ್ಷಕ ಬ್ಯಾಟಿಂಗ್‌ ಮುಂದುವರಿಸಿ 27ನೇ ಟೆಸ್ಟ್‌ ಶತಕ ದಾಖಲಿಸಿದರು. ನಾಯಕನಾಗಿ ಒಟ್ಟಾರೆ 41ನೇ ಅಂತರರಾಷ್ಟ್ರೀಯ ಶತಕ ದಾಖಲಿಸಿದ ಅವರು ಆಸ್ಟ್ರೇಲಿಯಾ ನಾಯಕನಾಗಿದ್ದ ರಿಕಿ ಪಾಂಟಿಂಗ್‌ ಅವರ ಸಾಧನೆ ಸರಿಗಟ್ಟಿದರು.

ಬಾಂಗ್ಲಾದೇಶದ 106 ರನ್‌ಗಳಿಗೆ ಉತ್ತರವಾಗಿ ಭಾರತ 9 ವಿಕೆಟ್‌ಗೆ 347 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. 59 ರನ್‌ಗಳೊಡನೆ ಎರಡನೇ ದಿನದಾಟ ಮುಂದುವರಿಸಿದ ಕೊಹ್ಲಿ ಒಟ್ಟು 194 ಎಸೆತಗಳ ಇನಿಂಗ್ಸ್‌ನಲ್ಲಿ 18 ಬೌಂಡರಿಗಳನ್ನು ಬಾರಿಸಿದರು.

ಉಪ ನಾಯಕ ಅಜಿಂಕ್ಯ ರಹಾನೆ (51) ಜೊತೆ ನಾಲ್ಕನೇ ವಿಕೆಟ್‌ಗೆ 99 ರನ್‌ ಸೇರಿಸಿದ್ದ ಅವರು ರವೀಂದ್ರ ಜಡೇಜ ಜೊತೆ 53 ರನ್‌ ಜೊತೆಯಾಟವಾಡಿ ತಂಡದ ಇನಿಂಗ್ಸ್‌ ಆಧರಿಸಿದರು.

ಇಶಾಂತ್ ಶರ್ಮಾ ಮತ್ತೊಮ್ಮೆ ಬಾಂಗ್ಲಾದೇಶಕ್ಕೆ ಆರಂಭದ ಆಘಾತ ನೀಡಿದರು. ಶಾದಮನ್‌ ಇಸ್ಲಾಂ, ಇಮ್ರುಲ್‌ ಕಯೆಸ್‌ ಮತ್ತು ನಾಯಕ ಮೊಮಿನುಲ್‌ ಹಕ್‌ ಅವರ ವಿಕೆಟ್‌ಗಳನ್ನು ಪಡೆದರು. ಇನ್ನೊಂದೆಡೆ ಉಮೇಶ್‌ ಯಾದವ್‌, ಮೊಹಮ್ಮದ್ ಮಿಥುನ್‌ ವಿಕೆಟ್ ಪಡೆದರು. 13 ರನ್‌ಗಳಾಗುವಷ್ಟರಲ್ಲಿ ಬಾಂಗ್ಲಾದೇಶ ನಾಲ್ಕು ವಿಕೆಟ್‌ಗಳು ಉರುಳಿದ್ದವು. 

ಆದರೆ ಅನುಭವಿ ಆಟಗಾರ– ವಿಕೆಟ್‌ ಕೀಪರ್‌ ಮುಷ್ಫಿಕುರ್‌ ರಹೀಂ (70 ಎಸೆತ, ಬ್ಯಾಟಿಂಗ್‌ 59, 10 ಬೌಂಡರಿ) ಕುಸಿತ ತಡೆಯುವಲ್ಲಿ ಯಶಸ್ವಿಯಾದರು. ಆಕ್ರಮಣಕಾರಿ ಆಟವಾಡಿದ ಅವರು ಮೊದಲು ಮಹಮುದುಲ್ಲಾ (39, ಗಾಯಾಳಾಗಿ ನಿವೃತ್ತ) ಜೊತೆ 69 ರನ್‌ ಸೇರಿಸಿದರು.

ಮೊಣಕಾಲಿನ ಸ್ನಾಯುನೋವಿನಿಂದ ಮಹಮುದುಲ್ಲಾ ವಾಪಸಾದರು. ಮುಷ್ಫಿಕುರ್‌ ನಂತರ ಮೆಹದಿ ಹಸನ್‌ ಜೊತೆ 51 ರನ್‌ ಜೊತೆಯಾಟವಾಡಿದರು. ದಿನದ ಕೊನೆಯ ಓವರ್‌ನಲ್ಲಿ ಉಮೇಶ್‌ ಯಾದವ್, ತೈಜುಲ್‌ ಇಸ್ಲಾಂ (11) ಅವರ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು