ಶುಕ್ರವಾರ, ಜುಲೈ 1, 2022
26 °C
ಟ್ವೆಂಟಿ–20 ಕ್ರಿಕೆಟ್‌: ಸಂಜು, ಪಂತ್‌ಗೆ ಅವಕಾಶ ಸಾಧ್ಯತೆ

IND vs NZ 4th T20| ಪ್ರಯೋಗದತ್ತ ಭಾರತ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವೆಲಿಂಗ್ಟನ್: ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾಯಿತು. ಸರಣಿ ಜಯದ ಕನಸೂ ನನಸಾಯಿತು. ಆದ್ದರಿಂದ ಐದು ಪಂದ್ಯಗಳ ಟ್ವೆಂಟಿ–20 ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಪ್ರಯೋಗಗಳನ್ನು ಮಾಡಲು ಭಾರತ ತಂಡ ಮುಂದಾಗಲಿದೆ.

ನ್ಯೂಜಿಲೆಂಡ್ ಎದುರಿನ ನಾಲ್ಕನೇ ಟ್ವೆಂಟಿ–20 ಕ್ರಿಕೆಟ್ ಪಂದ್ಯ ಶುಕ್ರವಾರ ಇಲ್ಲಿ ನಡೆಯಲಿದ್ದು ಸರಣಿ ಸೋತಿರುವ ಆತಿಥೇಯರು ಸಮಾಧಾನಕರ ಜಯಕ್ಕಾಗಿ ಪಣತೊಟ್ಟು ಕಣಕ್ಕೆ ಇಳಿಯಲಿ ದ್ದಾರೆ. ಇತ್ತ ಭಾರತ ಪಾಳಯದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಬೆಂಚು ಕಾದಿದ್ದ ಸಂಜು ಸ್ಯಾಮ್ಸನ್‌ ಅವಕಾಶ ಗಿಟ್ಟಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.

ಬುಧವಾರ ನಡೆದಿದ್ದ ನಿರ್ಣಾಯಕ ಮೂರನೇ ಪಂದ್ಯ ರೋಚಕ ಅಂತ್ಯ ಕಂಡಿತ್ತು. ಸೂಪರ್‌ ಓವರ್‌ನಲ್ಲಿ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ‘ಸೂಪರ್ ಶೋ’ದಿಂದಾಗಿ ಭಾರತ ಗೆಲುವು ಸಾಧಿಸಿತ್ತು. ಈ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಬಾರಿ ಟ್ವೆಂಟಿ–20 ಸರಣಿಯನ್ನು ಗೆದ್ದುಕೊಂಡಿತ್ತು.

ನಾಲ್ಕು ಮತ್ತು ಐದನೇ ಪಂದ್ಯಗಳು ಕ್ರಮವಾಗಿ ವೆಲಿಂಗ್ಟನ್ ಮತ್ತು ಮೌಂಟ್ ಮಾಂಗಾನೂಯಿಯಲ್ಲಿ ನಡೆಯಲಿವೆ. ಗುರುವಾರ ಉಭಯ ತಂಡಗಳು ಹ್ಯಾಮಿಲ್ಟನ್‌ನಿಂದ ವೆಲಿಂಗ್ಟನ್‌ಗೆ ಪ್ರಯಾಣ ಬೆಳೆಸಿವೆ. ಆದ್ದರಿಂದ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಎರಡೂ ತಂಡಗಳಿಗೆ ಅವಕಾಶ ಸಿಗಲಿಲ್ಲ.

ಸರಣಿ ಸೋತಿದ್ದರೂ ಟ್ವೆಂಟಿ–20 ವಿಶ್ವಕಪ್ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಮುಂದಿನ ಎರಡು ಪಂದ್ಯಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಸರಣಿಯನ್ನು 5–0ಯಿಂದ ‘ಸ್ವೀಪ್’ ಮಾಡುವ ಉದ್ದೇಶದಿಂದ ಭಾರತ ತಂಡವೂ ಪರಿಣಾಮಕಾರಿ ಆಟಕ್ಕೆ ಒತ್ತು ನೀಡಲಿದೆ. ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಕಟ್ಟುವ ಗುರಿಯೂ ಇರುವುದರಿಂದ ಹೆಚ್ಚು ಪ್ರಯೋಗಗಳನ್ನು ಮಾಡುವ ಸಾಹಸಕ್ಕೆ ತಂಡದ ಆಡಳಿತ ಮುಂದಾಗಲಾರದು. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಕೆಲವು ಸ್ಥಾನಗಳನ್ನು ಭದ್ರಪಡಿಸುವತ್ತ ಚಿತ್ತ ಹರಿಸಲಿದೆ.

ಸಂಜು, ಪಂತ್‌ಗೆ ಅವಕಾಶ: ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಸಂಜು ಅಡುವುದು ಬಹುತೇಕ ಖಚಿತ. ಆದರೆ ಪಂತ್‌ಗಾಗಿ ಯಾರನ್ನು ಹೊರಗಿಡಬೇಕು ಎಂಬ ಗೊಂದಲದಲ್ಲಿದೆ ಆಡಳಿತ. ಕೆ.ಎಲ್‌.ರಾಹುಲ್‌ ಅವರನ್ನೇ ವಿಕೆಟ್ ಕೀಪರ್ ಆಗಿ ಮುಂದುವರಿಸುವುದಾದರೆ ಪಂತ್‌ ನಿರಾಸೆಗೆ ಒಳಗಾಗಬೇಕಾಗುತ್ತದೆ.

ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮನೀಷ್ ಪಾಂಡೆ ಮತ್ತು ಶಿವಂ ದುಬೆ ಅವರ ನೈಜ ಸಾಮರ್ಥ್ಯ ಹೊರಬೀಳಬೇಕಾದರೆ ಇನ್ನಷ್ಟು ಅವಕಾಶಗಳು ಬೇಕು. ಎರಡು ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ನಾಲ್ವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್‌, ಕುಲದೀಪ್ ಯಾದವ್ ಮತ್ತು ನವದೀಪ್ ಸೈನಿ ಇನ್ನಷ್ಟು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡಿ ಈ ಮೂವರ ಪೈಕಿ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ನಿಚ್ಚಳವಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು