ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟೇರಾದಲ್ಲಿ ನಾಲ್ಕನೇ ಟೆಸ್ಟ್: ಸ್ಪಿನ್‌ ಭಯಕ್ಕೆ ಲಯ ತಪ್ಪಿದ ಇಂಗ್ಲೆಂಡ್

ಅಕ್ಷರ್ ಪಟೇಲ್‌ಗೆ ನಾಲ್ಕು, ಅಶ್ವಿನ್‌ಗೆ ಮೂರು ವಿಕೆಟ್: ಬೆನ್ ಸ್ಟೋಕ್ಸ್ ಅರ್ಧಶತಕ
Last Updated 4 ಮಾರ್ಚ್ 2021, 20:43 IST
ಅಕ್ಷರ ಗಾತ್ರ

ಅಹಮದಾಬಾದ್: ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಗುರುವಾರ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಮಾನಸಿಕ ಮತ್ತು ಕೌಶಲಗಳ ಸತ್ವಪರೀಕ್ಷೆಯಲ್ಲಿ ಅನುತ್ತೀರ್ಣರಾದರು.

ಮತ್ತೊಮ್ಮೆ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಕೈಚಳಕದ ಮುಂದೆ ಶರಣಾದರು. ಮೊದಲ ಇನಿಂಗ್ಸ್‌ನಲ್ಲಿ 75.5 ಓವರ್‌ಗಳಲ್ಲಿ 205 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ಲೆಕ್ಕಾಚಾರಕ್ಕೆ ತಕ್ಕಂತಹ ಮೊತ್ತ ಗಳಿಕೆಯಾಗಲಿಲ್ಲ. ಅದಕ್ಕುತ್ತರವಾಗಿ ಭಾರತ ತಂಡವು ದಿನದಾಟದ ಅಂತ್ಯಕ್ಕೆ 12 ಓವರ್‌ಗಳಲ್ಲಿ 1ವಿಕೆಟ್‌ಗೆ 24 ರನ್ ಗಳಿಸಿದೆ. ರೋಹಿತ್ ಶರ್ಮಾ (ಬ್ಯಾಟಿಂಗ್ 8, 34ಎಸೆತ) ಮತ್ತು ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 15; 36) ಕ್ರೀಸ್‌ನಲ್ಲಿದ್ದಾರೆ.

ಜೇಮ್ಸ್‌ ಆ್ಯಂಡರ್ಸನ್ ಹಾಕಿದ ಇನಿಂಗ್ಸ್‌ನ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಶುಭಮನ್ ಗಿಲ್ ಎಲ್‌ಬಿಡಬ್ಲ್ಯು ಆದರು. ಆಗ ಕ್ರೀಸ್‌ಗೆ ಬಂದ ಪೂಜಾರ ಆತ್ಮವಿಶ್ವಾಸದಿಂದ ಬ್ಯಾಟಿಂಗ್‌ಗೆ ಕುದುರಿಕೊಂಡರು. ರೋಹಿತ್‌ಗಿಂತಲೂ ತುಸು ವೇಗವಾಗಿ ರನ್‌ ಗಳಿಸಿದರು.

ಈ ಪಂದ್ಯಕ್ಕೆ ಸಿದ್ಧಪಡಿಸಲಾಗಿರುವ ಪಿಚ್‌ನಲ್ಲಿ ಚೆಂಡು ಉತ್ತಮವಾಗಿ ತಿರುವು ಪಡೆಯುತ್ತಿತ್ತು. ಬೌನ್ಸ್‌ ಕೂಡ ಆಗುತ್ತಿತ್ತು. ಏಕಾಗ್ರತೆಯಿಂದ ಆಡುವ ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸಲು ಕೂಡ ಸಾಧ್ಯವಾಯಿತು. ಅದಕ್ಕೆ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌ (55; 121ಎಸೆತ, 6ಬೌಂಡರಿ, 2ಸಿಕ್ಸರ್) ಅವರ ಆಟವೇ ಸಾಕ್ಷಿ.

ಆದರೆ, ಪ್ರವಾಸಿ ಆಟಗಾರರ ಮನಸ್ಥಿತಿ ಮತ್ತು ಪಿಚ್‌ನಲ್ಲಿದ್ದ ಸತ್ವವನ್ನು ಸೂಕ್ತವಾಗಿ ಬಳಸಿಕೊಂಡ ಸ್ಥಳೀಯ ಹೀರೊ ಅಕ್ಷರ್ (68ಕ್ಕೆ4), ಅಶ್ವಿನ್ (47ಕ್ಕೆ3) ಮತ್ತು ವಾಷಿಂಗ್ಟನ್ ಸುಂದರ್ (14ಕ್ಕೆ1) ತಮ್ಮ ಸ್ಪಿನ್ ಕೈಚಳಕವನ್ನು ಮೆರೆದರು.

ಇಂಗ್ಲೆಂಡ್ ಆರಂಭಿಕ ಜೋಡಿ ಜ್ಯಾಕ್ ಕ್ರಾಲಿ ಮತ್ತು ಡಾನ್ ಸಿಬ್ಲಿ ಅವರಿಬ್ಬರ ವಿಕೆಟ್‌ಗಳನ್ನೂ ಅಕ್ಷರ್ ಕಬಳಿಸಿದಾಗ ತಂಡದ ಮೊತ್ತವು 15 ರನ್‌ಗಳಾಗಿತ್ತು. ನಂತರ ಮಧ್ಯಮವೇಗಿ ಸಿರಾಜ್ ಕೂಡ ತಮ್ಮ ಸಾಮರ್ಥ್ಯ ಮೆರೆದರು. ತಮ್ಮ ’ಮದುವೆ‘ ಸಿದ್ಧತೆಗೆ ತೆರಳಿರುವ ಜಸ್‌ಪ್ರೀತ್ ಬೂಮ್ರಾ ಬದಲು ಕಣಕ್ಕಿಳಿದ ಸಿರಾಜ್ (45ಕ್ಕೆ2) ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಜಾನಿ ಬೆಸ್ಟೊ ಮತ್ತು ನಾಯಕ ಜೋ ರೂಟ್ ಅವರಿಬ್ಬರನ್ನೂ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ, ಇಂಗ್ಲೆಂಡ್ ಬ್ಯಾಟಿಂಗ್‌ಗೆ ಬಲವಾದ ಹೊಡೆತ ಕೊಟ್ಟರು.

ಬೆಸ್ಟೊ, ಡ್ಯಾನ್ ಲಾರೆನ್ಸ್‌ (46, 74ಎಸೆತ) ಮತ್ತು ಓಲಿ ಪೊಪ್ (29, 87ಎ) ಭರವಸೆ ಮೂಡಿಸಿದರು. ಆದರೆ, ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಎಡವಿದರು. ಇದ್ದುದರಲ್ಲಿ ಸ್ಟೋಕ್ಸ್‌ ಉತ್ತಮವಾಗಿ ಆಡಿದರು. ಆದರೆ, ವಾಷಿಂಗ್ಟನ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರಿಂದಾಗಿ ಚಹಾ ವಿರಾಮದ ನಂತರ ತಂಡವು ಕುಸಿಯಿತು.

ಬಹುತೇಕ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಎಸೆತಗಳ ಎದುರು ಸರಿಯಾದ ಪಾದಚಲನೆ ಮಾಡುವಲ್ಲಿ ಮತ್ತು ಸೂಕ್ತ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾದರು.

***

ಇದು ಬ್ಯಾಟಿಂಗ್‌ ಸ್ನೇಹಿ ವಿಕೆಟ್‌. ತಂಡದಲ್ಲಿ ಇಬ್ಬರೇ ಮಧ್ಯಮವೇಗಿಗಳಿದ್ದ ಕಾರಣ ಸ್ಪಿನ್ನರ್‌ ಜೊತೆ ರೊಟೇಷನ್ ಮಾಡಿ ವಿಶ್ರಾಂತಿ ಸಿಗುವಂತೆ ತಂತ್ರ ಹೆಣೆಯಲಾಗಿತ್ತು.

- ಮೊಹಮ್ಮದ್ ಸಿರಾಜ್,ಭಾರತದ ಬೌಲರ್

ಬೌನ್ಸರ್‌ಗೆ ಕುಪಿತಗೊಂಡ ಸ್ಟೋಕ್ಸ್‌

ಅಹಮದಾಬಾದ್: ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಬೆನ್‌ ಸ್ಟೋಕ್ಸ್‌ ತಮ್ಮನ್ನು ನಿಂದಿ ಸುತ್ತಿದ್ದರು. ಆಗ ಧಾವಿಸಿದ ನಾಯಕ ವಿರಾಟ್ ಕೊಹ್ಲಿ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದರು ಎಂದು ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಹೇಳಿದರು.

ಇಂಗ್ಲೆಂಡ್ 30 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದಾಗ ಬೆನ್ ಸ್ಟೋಕ್ಸ್ ಅವರಿಗೆ ಸಿರಾಜ್ ಬೌನ್ಸರ್ ಹಾಕಿದರು. ಆಗ ಕುಪಿತಗೊಂಡ ಸ್ಟೋಕ್ಸ್‌ ಅವರು ಸಿರಾಜ್‌ ಅವರನ್ನು ದುರುಗುಟ್ಟಿ ನೋಡಿದರು. ತಕ್ಷಣ ಸಿರಾಜ್ ಬೆಂಬಲಕ್ಕೆ ಧಾವಿಸಿದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ವಿರುದ್ಧ ವಾಗ್ವಾದಕ್ಕಿಳಿದರು. ಪರಿಣಾಮ ಕೊಹ್ಲಿ-ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅಂಪೈರ್ ಮಧ್ಯೆ ಪ್ರವೇಶಿಸಿ ವಾತಾವರಣ ವನ್ನು ಶಾಂತಗೊಳಿಸಿದರು.

ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿರಾಜ್ ’ಇವೆಲ್ಲವೂ ಆಟದಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ವಿರಾಟ್ ಈ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಿದರು‘ ಎಂದು ಹೇಳಿದರು.

ವಿರಾಟ್ ಕೊಹ್ಲಿ ಹಾವಭಾವಗಳನ್ನು ಗಮನಿಸಿರುವ ಅಭಿಮಾನಿಗಳು, 'ವಿಂಟೇಜ್' ಶೈಲಿಗೆ ಮರಳಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಆಸ್ಟ್ರೇಲಿಯಾ ಸರಣಿಯಲ್ಲಿ ಸಿರಾಜ್ ಜನಾಂಗೀಯ ನಿಂದನೆ ಎದುರಿಸಿದ್ದಾಗ ವಿರಾಟ್ ಕೊಹ್ಲಿ ಅಲ್ಲಿರಬೇಕಿತ್ತು ಎಂದು ಹೇಳಿದ್ದಾರೆ.

ಜೋಫ್ರಾಗೆ ಗಾಯ: ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಮೊಣಕೈ ನೋವಿನಿಂದಾಗಿ ನಾಲ್ಕನೇ ಟೆಸ್ಟ್ ನಲ್ಲಿ ಕಣಕ್ಕಿಳಿಯಲಿಲ್ಲ. ಇಂಗ್ಲೆಂಡ್ ತಂಡದಲ್ಲಿ ಬೆನ್ ಸ್ಟೋಕ್ಸ್ ಮತ್ತು ಇನ್ನೂ ಕೆಲವು ಆಟಗಾರರಿಗೆ ಹೊಟ್ಟೆ ನೋವಿತ್ತು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT