ಸೋಮವಾರ, ಆಗಸ್ಟ್ 15, 2022
20 °C
ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಕೊನೆಯ ಪಂದ್ಯ: ಆತಿಥೇಯರಿಗೆ ಗಾಯದ ಸಮಸ್ಯೆ

IND vs AUS T20: ಭಾರತಕ್ಕೆ ಕ್ಲೀನ್‌ಸ್ವೀಪ್ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಎರಡು ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿ ಭರವಸೆ ಹೆಚ್ಚಿಸಿಕೊಂಡಿರುವ ಮತ್ತು ಸರಣಿಯನ್ನು ತನ್ನದಾಗಿಸಿಕೊಂಡಿರುವ ಭಾರತ ತಂಡ ಆಸ್ಟ್ರೇಲಿಯಾ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲೂ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಮಾಡುವ ಕನಸು ಹೊತ್ತು ಮಂಗಳವಾರ ಕಣಕ್ಕೆ ಇಳಿಯಲಿದೆ. 

ಏಕದಿನ ಸರಣಿಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಆಸ್ಟ್ರೇಲಿಯಾಗೆ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಬಳಗ ಪೆಟ್ಟು ನೀಡಿದೆ. ಆ ತಂಡ ಈಗ ಗಾಯದ ಸಮಸ್ಯೆಯಿಂದಲೂ ಬಳಲುತ್ತಿದೆ. 2016ರ ಪ್ರವಾಸದಲ್ಲೂ ಏಕದಿನ ಸರಣಿಯಲ್ಲಿ ಸೋಲುಂಡ ಭಾರತ ಟಿ20 ಸರಣಿಯಲ್ಲಿ ಸಿಡಿದೆದ್ದು ಮೂರೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ತಂಡ ಅದೇ ರೀತಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಭರವಸೆಯನ್ನು ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: 

ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸೋತು ನಿರಾಸೆಗೊಂಡಿದ್ದ ಭಾರತ ತಂಡ ಕೊನೆಯ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು. ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ರವೀಂದ್ರ ಜಡೇಜ ಅನುಪಸ್ಥಿತಿಯಲ್ಲೂ ತಂಡ ಆರು ವಿಕೆಟ್‌ಗಳ ಜಯ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ವೇಗದ ಬೌಲಿಂಗ್ ಜೋಡಿಯಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಿದರೂ ಪಂದ್ಯ ಗೆಲ್ಲಬಹುದು ಎಂಬುದನ್ನು ತಂಡ ಸಾಬೀತು ಮಾಡಿದೆ. ಹೊಸ ಪ್ರತಿಭೆ ತಂಗರಸು ನಟರಾಜನ್ ಅವರು ತಂಡದ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡಿ ಎದುರಾಳಿಗಳನ್ನು ಕಾಡಲು ಸಮರ್ಥರಾಗಿದ್ದಾರೆ.

ಆಸ್ಟ್ರೇಲಿಯಾದ ಹಂಗಾಮಿ ನಾಯಕ ಮ್ಯಾಥ್ಯೂ ವೇಡ್ ಕಳೆದ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಆದರೆ ಭಾರತದ ನಾಯಕ ವಿರಾಟ್ ಕೊಹ್ಲಿ ಉಪಯುಕ್ತ ಬ್ಯಾಟಿಂಗ್ ಮಾಡಿದ್ದರು. ಗಾಯಾಳು ಮನೀಷ್ ಪಾಂಡೆ ಬದಲಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಕೂಡ ಭರವಸೆಯಿಂದ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ: 

ನಾಯಕ ಆ್ಯರನ್ ಫಿಂಚ್‌, ಡೇವಿಡ್ ವಾರ್ನರ್, ಮಿಷೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್ ಮುಂತಾದವರ ಅನುಪಸ್ಥಿತಿ ಆತಿಥೇಯರನ್ನು ಕಾಡುತ್ತಿದೆ. ಆರಂಭಿಕ ಆಟಗಾರ ಡಿ ಆರ್ಸಿ ಶಾರ್ಟ್ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಜವಾಬ್ದಾರಿ ಹೆಚ್ಚಾಗಿದೆ. ತಂಡದ ಬೌಲರ್‌ಗಳ ಮೇಲೆಯೂ ಒತ್ತಡ ಹೆಚ್ಚಿದೆ.

ತಂಡಗಳು:

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಂಕ್ ಅಗರವಾಲ್‌, ಕೆ.ಎಲ್‌.ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್‌), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಾಹರ್‌, ಟಿ.ನಟರಾಜನ್‌, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ (ನಾಯಕ), ಸೀನ್ ಅಬೋಟ್‌, ಮಿಷೆಲ್ ಸ್ವೆಪ್ಸನ್‌, ಅಲೆಕ್ಸ್ ಕ್ಯಾರಿ, ನೇಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್‌, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲಾಬೂಶೇನ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಡ್ಯಾನಿಯಲ್ ಸ್ಯಾಮ್ಸ್‌, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್‌, ಡಿ ಆರ್ಸಿ ಶಾರ್ಟ್‌, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ.

ಪಂದ್ಯ ಆರಂಭ: ಮಧ್ಯಾಹ್ನ 1.40 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಇದನ್ನೂ ಓದಿ: 

ಮೊದಲ ಟೆಸ್ಟ್‌ಗೂ ಜಡೇಜ ಅಲಭ್ಯ?
ತಲೆಗೆ ಪೆಟ್ಟು ಬಿದ್ದಿರುವ ಮತ್ತು ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಆವರು ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ. ಕ್ಯಾನ್‌ಬೆರಾದಲ್ಲಿ ನಡೆದ ಮೊದಲ ಟಿ20 ಪಂದ್ಯದ ಭಾರತ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜಡೇಜ ತಲೆಗೆ ಚೆಂಡು ಬಡಿದಿತ್ತು. ಅವರ ಬದಲಿಗೆ ಯುಜವೇಂದ್ರ ಚಾಹಲ್ ಕಣಕ್ಕೆ ಇಳಿದಿದ್ದರು. ಚಿಕಿತ್ಸೆ ಪಡೆಯುವ ಕಾರಣ ಟಿ20 ಸರಣಿಯಿಂದ ಜಡೇಜ ಅವರನ್ನು ಕೈಬಿಡಲಾಗಿತ್ತು. ಈಗ, ಮೂರು ವಾರಗಳ ವಿಶ್ರಾಂತಿ ಅಗತ್ಯ ಎಂದು ಹೇಳಲಾಗಿದೆ. ಡಿಸೆಂಬರ್‌ 17ರಂದು ಮೊದಲ ಟೆಸ್ಟ್‌ ಆರಂಭವಾಗಲಿದೆ. 50ನೇ ಟೆಸ್ಟ್ ಪಂದ್ಯ ಆಡುವ ಕಾತರದಲ್ಲಿರುವ ಜಡೇಜ ಡಿಸೆಂಬರ್ 26ರಂದು ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ವಿದೇಶಿ ನೆಲದಲ್ಲಿ ಏಕೈಕ ಸ್ಪಿನ್ನರ್‌ನನ್ನು ಆಡಿಸಿದಾಗಲೆಲ್ಲ ರವೀಂದ್ರ ಜಡೇಜ ಭಾರತ ತಂಡದ ಮೊದಲ ಆಯ್ಕೆ. 49 ಪಂದ್ಯಗಳಲ್ಲಿ ಅವರು 213 ವಿಕೆಟ್ ಉರುಳಿಸಿದ್ದು 1869 ರನ್ ಕೂಡ ಕಲೆ ಹಾಕಿದ್ದಾರೆ. ಒಂದು ಶತಕ ಹಾಗೂ 14 ಅರ್ಧಶತಕ ಸಿಡಿಸಿರುವ ಅವರು 35.26ರ ಸರಾಸರಿ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು