ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲದೀಪ್ ಮೂರನೇ ಸ್ಪಿನ್ನರ್ ಆಗಲಿ; ರವಿಶಾಸ್ತ್ರಿ ಸಲಹೆ

ಬಾರ್ಡರ್‌–ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿ: ಸ್ಪಿನ್ ಬೌಲಿಂಗ್ ಸುತ್ತ ಎಲ್ಲರ ಚಿತ್ತ
Last Updated 7 ಫೆಬ್ರುವರಿ 2023, 1:56 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಬಾರ್ಡರ್‌ –ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿ ಇದೇ ವಾರ ಆರಂಭವಾಗಲಿದೆ. ಸ್ಪಿನ್ನರ್‌ಗಳ ಮೇಲೆ ಎಲ್ಲರ ಗಮನ ಕೇಂದ್ರಿತವಾಗುತ್ತಿದೆ.

ಆಸ್ಟ್ರೇಲಿಯಾ ತಂಡವು ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರನ್ನು ಎದುರಿಸಲು ಸಿದ್ಧತೆ ಆರಂಭಿಸಿದೆ. ಅದಕ್ಕಾಗಿ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಒಂದು ಸಲಹೆ ನೀಡಿದ್ದಾರೆ.

‘ಭಾರತ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು. ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ತೃತೀಯ ಸ್ಪಿನ್ನರ್ ಆಗಬೇಕು. ಜಡೇಜ ಮತ್ತು ಅಕ್ಷರ್ ಪಟೇಲ್ ಅವರ ಬೌಲಿಂಗ್ ಬಹುತೇಕ ಒಂದೇ ತೆರನಾಗಿದೆ. ಆದರೆ ಕುಲದೀಪ್ ವಿಭಿನ್ನ ಶೈಲಿ ಮತ್ತು ಸ್ಪಿನ್ ಪ್ರಯೋಗ ಮಾಡುತ್ತಾರೆ. ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡಬಲ್ಲರು’ ಎಂದು ಶಾಸ್ತ್ರಿ ಹೇಳಿದರು.

ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಸೋಮವಾರ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ (ವರ್ಚುವಲ್) ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮತ್ತೊಬ್ಬ ವೀಕ್ಷಕ ವಿವರಣೆಗಾರ, ಆಸ್ಟ್ರೇಲಿಯಾದ ದಿಗ್ಗಜ ಇಯಾನ್ ಚಾಪೆಲ್ ಕೂಡ ಇದ್ದರು.

‘ಅಶ್ವಿನ್ ಕೇಂದ್ರಿತವಾದ ಅತಿಯಾದ ಯೋಜನೆ ರೂಪಿಸಬಾರದು. ಅವರಿಗೆ ತಮ್ಮದೇ ಯೋಜನೆಗಳಿರುತ್ತವೆ. ಆಪ್ರಕಾರವೇ ಅವರಿಗೆ ಆಡುವ ಅವಕಾಶ ಕೊಡಬೇಕು. ಅದರಿಂದಾಗಿ ಅವರು ಇಡೀ ಸರಣಿಯ ಫಲಿತಾಂಶವನ್ನೇ ಬದಲಿಸಬಲ್ಲರು. ಅಶ್ವಿನ್ ಒಬ್ಬ ಪರಿಪೂರ್ಣ ಪ್ಯಾಕೇಜ್. ಅವರು ಪ್ರಮುಖ ಹಂತದಲ್ಲಿ ವಿಕೆಟ್ ಉರುಳಿಸಬಲ್ಲರು ಮತ್ತು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ರನ್‌ಗಳನ್ನೂ ಗಳಿಸಬಲ್ಲರು. ಅವರು ವಿಶ್ವದರ್ಜೆಯ ಆಲ್‌ರೌಂಡರ್’ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.

‘ಪಂದ್ಯದಲ್ಲಿ ಟಾಸ್ ಸೋತು ಮೊದಲು ಬೌಲಿಂಗ್ ಮಾಡಬೇಕಾದರೆ ಕುಲದೀಪ್ ಯಾದವ್ ಉಪಯುಕ್ತವಾಗುತ್ತಾರೆ. ಎರಡನೇ ಇನಿಂಗ್ಸ್ ಹೊತ್ತಿಗೆ ಆಸ್ಟ್ರೇಲಿಯಾ ವೇಗಿಗಳು ಹಾಕಿದ ಎಸೆತಗಳ ಪ್ಯಾಚ್‌ ಪಿಚ್‌ ಮೇಲೆ ಕುಲದೀಪ್ ಮತ್ತಷ್ಟು ಮಿಂಚಬಹುದು. ಭಾರತ ತಂಡವು ತವರಿನಲ್ಲಿ ಆಡುವ ಅವಕಾಶವನ್ನು ಬಳಸಿಕೊಳ್ಳಬೇಕು. ಮೊದಲ ದಿನದಿಂದಲೇ ಚೆಂಡು ಸ್ಪಿನ್ ಆಗುವಂತಹ ಪಿಚ್ ಸಿದ್ಧಗೊಳಿಸಬೇಕು’ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದರು.

ಬ್ಯಾಟಿಂಗ್ ಸಂಯೋಜನೆಯ ಕುರಿತು ಮಾತನಾಡಿದ ಅವರು, ‘12 ಜನರ ಬಳಗದಲ್ಲಿ ಶುಭಮನ್ ಗಿಲ್ ಇರಬೇಕು. ಆದರೆ ಸೂರ್ಯಕುಮಾರ್ ಯಾದವ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸುವ ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳಬೇಕು. ಭಾರತದಲ್ಲಿ ಬ್ಯಾಟಿಂಗ್ ಮಾಡುವಾಗ ಬ್ಯಾಟರ್‌ಗಳು ಒಂಟಿ ಮತ್ತು ಎರಡು ರನ್‌ಗಳನ್ನು ಪಡೆಯುತ್ತ ರೊಟೇಟ್ ಮಾಡ್ತಿರಬೇಕು. ಮೇಡನ್ ಓವರ್ ಆಗಲು ಬಿಡಬಾರದು. ಚುರುಕಾಗಿ 30–40 ರನ್‌ ಗಳಿಸಿಕೊಂಡರೆ ಮುಂದಿನ ಹಾದಿ ಸುಲಭ’ ಎಂದರು.

ಭಾರತಕ್ಕೆ ರಿಷಭ್ ಪಂತ್ ಕೊರಗು: ಚಾಪೆಲ್

ಹೋದ ತಿಂಗಳು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಕೆಟ್‌ಕೀಪರ್ ರಿಷಭ್ ಪಂತ್ ಈ ಸರಣಿಯಲ್ಲಿ ಆಡುವುದಿಲ್ಲ. ಇದರಿಂದಾಗಿ ಭಾರತ ತಂಡಕ್ಕೆ ಅವರ ಕೊರಗು ಕಾಡಲಿದೆ ಎಂದು ಇಯಾನ್ ಚಾಪೆಲ್ ಅಭಿಪ್ರಾಯಪಟ್ಟರು.

‘ಈ ಹಿಂದೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ಗಳಲ್ಲ ಅವರ ಆಟ ಅಮೋಘವಾಗಿತ್ತು. ಬಹುಶಃ ಅವರು ಈ ಸರಣಿಯಲ್ಲಿ ಇದ್ದಿದ್ದರೆ ಆಸ್ಟ್ರೇಲಿಯಾ ಆಟಗಾರರಿಗೆ ನಿದ್ದೆಯೇ ಬರುತ್ತಿರಲಿಲ್ಲ. ಏಕೆಂದರೆ, ರಿಷಭ್ ಒಮ್ಮೆ ಕ್ರೀಸ್‌ನಲ್ಲಿ ಹೊಂದಿಕೊಂಡರೆ ನಿಯಂತ್ರಿಸುವುದು ಕಷ್ಟ. ಪಂದ್ಯದ ದಿಕ್ಕನ್ನೇ ಬದಲಿಸಿಬಿಡುತ್ತಾರೆ. ಬಹಳ ದಿಟ್ಟ ಹೋರಾಟಗಾರ ಅವರು. ಅವರಿಲ್ಲದಿದ್ದರೂ ಭಾರತ ತಂಡವೇ ಫೆವರಿಟ್ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT