ಶುಕ್ರವಾರ, ಏಪ್ರಿಲ್ 16, 2021
31 °C
ಭಾರತ ‘ಎ’: ಶತಕ ವಂಚಿತರಾದ ಋತುರಾಜ್‌

ವೆಸ್ಟ್‌ ಇಂಡೀಸ್‌ ‘ಎ’ ಎದುರಿನ ಐದನೇ ಏಕದಿನ ಪಂದ್ಯ: ಮನೀಷ್‌ ಪಡೆಯ ಮುಡಿಗೆ ಮುಕುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಲಿಜ್‌, ವೆಸ್ಟ್‌ ಇಂಡೀಸ್‌: ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳ ಮನಮೋಹಕ ಆಟದ ಬಲದಿಂದ ಭಾರತ ‘ಎ’ ತಂಡ ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ 4–1ಯಿಂದ ಸರಣಿ ಕೈವಶ ಮಾಡಿಕೊಂಡಿದೆ.

ಆ್ಯಂಟಿಗಾದ ಕೂಲಿಜ್‌ ಮೈದಾನದಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರಾಸ್ಟನ್‌ ಚೇಸ್‌ ಸಾರಥ್ಯದ ವಿಂಡೀಸ್‌ ‘ಎ’ 47.4 ಓವರ್‌ಗಳಲ್ಲಿ 236ರನ್‌ ಗಳಿಸಿತು. ಈ ಗುರಿ ಮನೀಷ್‌ ಪಾಂಡೆ ಬಳಗಕ್ಕೆ ಅಷ್ಟೇನು ಸವಾಲೆನಿಸಲೇ ಇಲ್ಲ. ಪ್ರವಾಸಿ ಪಡೆ 33 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಶತಕದ ಜೊತೆಯಾಟ: ಗುರಿ ಬೆನ್ನಟ್ಟಿದ ಭಾರತಕ್ಕೆ ಋತುರಾಜ್‌ ಗಾಯಕವಾಡ್‌ ಮತ್ತು ಶುಭಮನ್‌ ಗಿಲ್‌ (69; 40ಎ, 8ಬೌಂ, 3ಸಿ) ಅಬ್ಬರದ ಆರಂಭ ನೀಡಿದರು.

ಈ ಜೋಡಿ ಕೆರಿಬಿಯನ್‌ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿತು. ಹೀಗಾಗಿ ಪ್ರವಾಸಿ ಪಡೆಯ ಖಾತೆಗೆ ಕೇವಲ 69 ಎಸೆತಗಳಲ್ಲಿ 110ರನ್‌ಗಳು ಜಮೆಯಾದವು. 12ನೇ ಓವರ್‌ನಲ್ಲಿ ಗಿಲ್‌ ಔಟಾದರು. ರಹಕೀಮ್‌ ಕಾರ್ನ್‌ವಾಲ್‌ ಎಸೆತದಲ್ಲಿ ಅವರು ಅಕೀಮ್‌ ಜೋರ್ಡಾನ್‌ಗೆ ಕ್ಯಾಚ್‌ ನೀಡಿದರು.

ನಂತರ ಋತುರಾಜ್‌ ಮತ್ತು ಶ್ರೇಯಸ್‌ ಅಯ್ಯರ್‌ (ಔಟಾಗದೆ 61; 64ಎ, 3ಬೌಂ, 2ಸಿ) ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ಎರಡನೇ ವಿಕೆಟ್‌ಗೆ 112ರನ್‌ ಸೇರಿಸಿ ಗೆಲುವಿನ ಹಾದಿ ಸುಲಭ ಮಾಡಿದರು.

ಋತುರಾಜ್‌, ವಿಂಡೀಸ್‌ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. 109 ನಿಮಿಷ ಕ್ರೀಸ್‌ನಲ್ಲಿದ್ದ ಅವರು 89 ಎಸೆತ ಎದುರಿಸಿದರು. ಕೇವಲ ಒಂದು ರನ್‌ನಿಂದ ಶತಕ ವಂಚಿತರಾದರು. ಬೌಂಡರಿ (11) ಮತ್ತು ಸಿಕ್ಸರ್‌ಗಳ (3) ಮೂಲಕವೇ 62 ರನ್‌ ಗಳಿಸಿ ಅಭಿಮಾನಿಗಳನ್ನು ರಂಜಿಸಿದರು.

ಋತುರಾಜ್‌ ಔಟಾದ ನಂತರ ಶ್ರೇಯಸ್‌ ಮತ್ತು ನಾಯಕ ಮನೀಷ್‌ ಎಚ್ಚರಿಕೆಯಿಂದ ಆಡಿ ‘ಗೆಲುವಿನ ಶಾಸ್ತ್ರ’ ಮುಗಿಸಿದರು.

ಉತ್ತಮ ಆರಂಭ: ಮೊದಲು ಬ್ಯಾಟ್‌ ಮಾಡಿದ್ದ ವಿಂಡೀಸ್‌ ‘ಎ’ ತಂಡಕ್ಕೆ ಸುನೀಲ್‌ ಆ್ಯಂಬ್ರಿಸ್‌ (61; 52ಎ, 7ಬೌಂ, 2ಸಿ) ಮತ್ತು ಜೋರ್ನ್‌ ಒಟ್ಲಿ (21; 36ಎ, 2ಬೌಂ, 1ಸಿ) ಉತ್ತಮ ಆರಂಭ ನೀಡಿದ್ದರು. ಇವರು 13.3 ಓವರ್‌ಗಳಲ್ಲಿ 77ರನ್‌ ಗಳಿಸಿದರು. 14ನೇ ಓವರ್‌ನಲ್ಲಿ ಒಟ್ಲಿ ಔಟಾದ ನಂತರ ಆತಿಥೇಯರು ಕುಸಿತದ ಹಾದಿ ಹಿಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರತದ ಶಿಸ್ತಿನ ದಾಳಿ ಎದುರು ಮಂಕಾದರು.

ಶೆರ್ಫಾನೆ ರುದರ್‌ಫೋರ್ಡ್‌ (65; 70ಎ, 4ಬೌಂ, 4ಸಿ) ಮತ್ತು ಖಾರಿ ಪಿಯೆರೆ (ಔಟಾಗದೆ 35; 34ಎ, 4ಬೌಂ, 1ಸಿ) ತಂಡವನ್ನು ಗೆಲುವಿನ ದಡ ಮುಟ್ಟಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ ‘ಎ’; 47.4 ಓವರ್‌ಗಳಲ್ಲಿ 236 (ಸುನಿಲ್‌ ಆ್ಯಂಬ್ರಿಸ್‌ 61, ಜೋರ್ನ್‌ ಒಟ್ಲಿ 21, ಶೆರ್ಫಾನೆ ರುದರ್‌ಫೋರ್ಡ್‌ 65, ರಹಕೀಮ್‌ ಕಾರ್ನ್‌ವಾಲ್‌ 10, ಕೀಮೊ ಪಾಲ್‌ 13, ಖಾರಿ ಪಿಯೆರೆ ಔಟಾಗದೆ 35; ದೀಪಕ್‌ ಚಾಹರ್‌ 39ಕ್ಕೆ2, ಖಲೀಲ್‌ ಅಹಮದ್‌ 41ಕ್ಕೆ1, ಕೃಣಾಲ್‌ ಪಾಂಡ್ಯ 32ಕ್ಕೆ1, ನವದೀಪ್‌ ಸೈನಿ 31ಕ್ಕೆ2, ರಾಹುಲ್‌ ಚಾಹರ್‌ 53ಕ್ಕೆ2, ಅಕ್ಷರ್‌ ಪಟೇಲ್‌ 39ಕ್ಕೆ1).

ಭಾರತ ‘ಎ’: 33 ಓವರ್‌ಗಳಲ್ಲಿ 2 ವಿಕೆಟ್‌ಗೆ 237 (ಋತುರಾಜ್‌ ಗಾಯಕವಾಡ್ 99, ಶುಭಮನ್‌ ಗಿಲ್‌ 69, ಶ್ರೇಯಸ್‌ ಅಯ್ಯರ್‌ ಔಟಾಗದೆ 61, ಮನೀಷ್‌ ಪಾಂಡೆ ಔಟಾಗದೆ 7; ಕೀಮೊ ಪಾಲ್‌ 37ಕ್ಕೆ1, ರಹಕೀಮ್‌ ಕಾರ್ನ್‌ವಾಲ್‌ 47ಕ್ಕೆ1).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 8 ವಿಕೆಟ್‌ ಗೆಲುವು. 4–1ರಿಂದ ಸರಣಿ ಕೈವಶ.

ಪಂದ್ಯಶ್ರೇಷ್ಠ: ಋತುರಾಜ್‌ ಗಾಯಕವಾಡ್‌.

******

ಸರಣಿಯಲ್ಲಿ ಗರಿಷ್ಠ ರನ್‌ ಗಳಿಸಿದ ಭಾರತದ ಆಟಗಾರರು (ಐದು ಪಂದ್ಯಗಳಿಂದ)

ಶುಭಮನ್‌ ಗಿಲ್‌: 218

ಋತುರಾಜ್ ಗಾಯಕವಾಡ್‌: 207

ಶ್ರೇಯಸ್‌ ಅಯ್ಯರ್‌: 187

ಮನೀಷ್‌ ಪಾಂಡೆ: 162

*********

ಗರಿಷ್ಠ ವಿಕೆಟ್‌ ಗಳಿಸಿದವರು

ಬೌಲರ್‌;ಪಂದ್ಯ;ವಿಕೆಟ್‌

ಖಲೀಲ್‌ ಅಹಮದ್‌;5;9

ನವದೀಪ್‌ ಸೈನಿ;5;8

ಕೃಣಾಲ್‌ ಪಾಂಡ್ಯ;3;7

*******

ಸರಣಿಯ ಫಲಿತಾಂಶ

ಪಂದ್ಯ;ಫಲಿತಾಂಶ

ಮೊದಲನೇ;ಭಾರತಕ್ಕೆ 65ರನ್‌ ಗೆಲುವು

ಎರಡನೇ;ಭಾರತಕ್ಕೆ 65ರನ್‌ ಗೆಲುವು

ಮೂರನೇ;ಭಾರತಕ್ಕೆ 148ರನ್‌ ಗೆಲುವು

ನಾಲ್ಕನೇ;ವೆಸ್ಟ್‌ ಇಂಡೀಸ್‌ಗೆ 5ರನ್‌ ಗೆಲುವು

ಐದನೇ;ಭಾರತಕ್ಕೆ 8 ವಿಕೆಟ್‌ ಗೆಲುವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು