ಶುಕ್ರವಾರ, ಮೇ 27, 2022
22 °C

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಭಾರತಕ್ಕೆ ದಾಖಲೆ ಚಾಂಪಿಯನ್ ಪಟ್ಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಶ್ರೀಲಂಕಾ ಬ್ಯಾಟಿಂಗ್ ಬಳಗವನ್ನು ದೂಳೀಪಟ ಮಾಡಿದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ಈ ಮೂಲಕ ಎಂಟನೇ ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು.

ಎದುರಾಳಿಗಳನ್ನು 106 ರನ್‌ಗಳಿಗೆ ನಿಯಂತ್ರಿಸಿದ ಭಾರತದ ಬೌಲರ್‌ಗಳು ಜಯದ ರೂವಾರಿಗಳಾದರು. 32 ಓವರ್‌ಗಳಲ್ಲಿ 102 ರನ್‌ಗಳ ಪರಿಷ್ಕೃತ ಗುರಿಯನ್ನು ಭಾರತ 21.3 ಓವರ್‌ಗಳಲ್ಲಿ ಯಶಸ್ವಿಯಾಗಿ ದಾಟಿತು.

ತಂಡದ ಮೊತ್ತ ಎಂಟು ರನ್ ಆಗಿದ್ದಾಗ ಹರ್ನೂರ್ ಸಿಂಗ್ ವಿಕೆಟ್ ಕಳೆದುಕೊಂಡರು. ಅವರು ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯ ಮೊದಲ ಸ್ಥಾನದಲ್ಲಿದ್ದಾರೆ. ಅವರು ಔಟಾದ ನಂತರ ಅಂಕೃಷ್ ರಘುವಂಶಿ ಮತ್ತು ಶೇಕ್ ರಶೀದ್ ಅವರ ಜೊತೆಯಾಟ ರಂಗೇರಿತು. 96 ರನ್‌ಗಳ ಜೊತೆಯಾಟವಾಡಿದ ಇವರಿಬ್ಬರು ಎದುರಾಳಿ ತಂಡದ ಬೌಲರ್‌ಗಳನ್ನು ಕಾಡಿದರು.

ಅಂಕೃಷ್‌ ತಾಳ್ಮೆಯ ಬ್ಯಾಟಿಂಗ್ ಮೂಲಕ 67 ಎಸೆತಗಳಲ್ಲಿ 56 ರನ್ ಗಳಿಸಿದರೆ ಶೇಕ್ 49 ಎಸೆತಗಳಲ್ಲಿ 31 ರನ್‌ ಗಳಿಸಿ ಸುಲಭ ಜಯಕ್ಕೆ ಕಾಣಿಕೆ ನೀಡಿದರು.

ಹಿಂದಿನ ಪ‍ಂದ್ಯಗಳಲ್ಲಿ ಮಿಂಚಲು ವಿಫಲರಾಗಿದ್ದ ಅಂಕೃಷ್‌ ಈ ಪಂದ್ಯದಲ್ಲಿ ಆತ್ಮವಿಶ್ವಾಸದಲ್ಲಿ ಆಡಿದರು. ಬ್ಯಾಕ್‌ಫುಟ್‌ ಪಂಚ್‌ಗಳ ಮೂಲಕ ಆರಂಭದಲ್ಲೇ ಸುಲಭವಾಗಿ ರನ್ ಕಲೆ ಹಾಕಿದ ಅವರು ವೇಗದ ಬೌಲರ್‌ಗಳನ್ನೂ ಸ್ಪಿನ್ನರ್‌ಗಳನ್ನೂ ದಿಟ್ಟವಾಗಿ ಎದುರಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 19 ವರ್ಷದೊಳಗಿನ ತಂಡ 33 ಓವರ್‌ಗಳಲ್ಲಿ 74 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಿತು. ಎರಡು ತಾಸುಗಳಿಗೂ ಹೆಚ್ಚು ಸಮಯ ಪಂದ್ಯ ಸ್ಥಗಿತಗೊಳಿಸಲಾಯಿತು. ನಂತರ ಪಂದ್ಯವನ್ನು 38 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ರಾಜ್ಯವರ್ಧನ್ ಹಂಗರೇಕರ್‌ ಮತ್ತು ರವಿ ಕುಮಾರ್ ಭಾರತದ ಬೌಲಿಂಗ್‌ ವಿಭಾಗದಲ್ಲಿ ಮಿಂಚಿದರು. ಓಸ್ತವಾಲ್‌ ಕೂಡ ಅತ್ಯುತ್ತಮ ಕಾಣಿಕೆ ನೀಡಿದರು.

ಟೂರ್ನಿಯುದ್ದಕ್ಕೂ ಭಾರತ ಪಾರಮ್ಯ ಮೆರೆದಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಮಾತ್ರ ತಂಡ ಸೋತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಶ್ರೀಲಂಕಾ ಮಣಿಸಿತ್ತು. ಯಶ್‌ ಧೂಲ್ ನಾಯಕತ್ವದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್‌ಗೆ ಭರವಸೆಯಿಂದ ಸಾಗಲಿದೆ. ಟೂರ್ನಿ ಜನವರಿ 14ರಿಂದ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ.

ಸ್ಕೋರ್ ಕಾರ್ಡ್‌

ಶ್ರೀಲಂಕಾ 9ಕ್ಕೆ 106 (38 ಓವರ್‌)

ಚಾಮಿಂದು ಸಿ ಬಾವಾ ಬಿ ರವಿ 2 (12 ಎ), ಶೆವಾನ್ ಸಿ ಆರಾಧ್ಯ ಬಿ ಬಾವಾ 6 (28 ಎ), ಅಂಜಲ ಎಲ್‌ಬಿಡಬ್ಲ್ಯು ಬಿ ತಾಂಬೆ 9 (33 ಎ, 4x1), ಸದೀಶ ಸಿ ರಶೀದ್ ಬಿ ಓಸ್ತವಾಲ್‌ 14 (36 ಎ, 4x1), ಪವನ್‌ ಬಿ ತಾಂಬೆ 4 (17 ಎ), ರಾಣುಡು ಎಲ್‌ಬಿಡಬ್ಲ್ಯು ಬಿ ಓಸ್ತವಾಲ್‌ 7 (18 ಎ, 4x1), ದುನಿತ್‌ ಸಿ ಬಾವಾ ಬಿ ಓಸ್ತವಾಲ್ 9 (15 ಎ, 4x1), ರವೀನ್ ರನೌಟ್‌ (ರಶೀದ್‌) 15 (29 ಎ, 4x1), ಯಾಸಿರು ಔಟಾಗದೆ 19 (26 ಎ, 4x2), ಮತೀಶ ಸಿ ರಘುವಂಶಿ ಬಿ ಹಂಗರೇಕರ್ 14 (14 ಎ, 4x1) 

ಇತರೆ (ಲೆಗ್‌ಬೈ 1, ವೈಡ್ 6) 7

ವಿಕೆಟ್ ಪತನ

1-4 (ಚಮಿಂದು ವಿಕ್ರಮಸಿಂಘೆ, 3.4), 2-15 (ಶೆವಾನ್ ಡ್ಯಾನಿಯಲ್, 10.3), 3-31 (ಅಂಜಲ ಭಂಡಾರ, 15.3), 4-37 (ಪವನ್ ಪಥಿರಾಜ, 19.4), 5-47 (ಸದೀಶ ರಾಜಪಕ್ಸೆ, 22.3), 6-57 (ದುನಿತ್ ವೆಳ್ಳಲಗೆ, 26.1), 7-57 (ರಾಣುಡ ಸೋಮರತ್ನೆ, 26.3), 8-82 (ರವೀನ್ ಡಿ ಸಿಲ್ವಾ, 34.4), 9-106 (ಮತೀಶ ಪತಿರನ, 37.6)

ಬೌಲಿಂಗ್

ರಾಜವರ್ಧನ್ ಹಂಗರೇಕರ್ 8–1–26–1, ರವಿ ಕುಮಾರ್ 8–1–17–1, ರಾಜ್ ಬಾವಾ 7–0–23–1, ಕುಶಾಲ್ ತಾಂಬೆ 6–0–23–2, ವಿಕ್ಕಿ ಓಸ್ತವಾಲ್ 8–3–11–3, ನಿಶಾಂತ್ ಸಿಂಧು 1–0–5–0

ಭಾರತ 1 ವಿಕೆಟ್‌ಗೆ 104 (21.3 ಓವರ್‌)

ಅಂಕೃಷ್‌ ಔಟಾಗದೆ 56 (67 ಎ, 4x7), ಹರ್ನೂರ್ ಎಲ್‌ಬಿಡಬ್ಲ್ಯು ಬಿ ರಾಡ್ರಿಗೊ 5 (13 ಎ), ರಶೀದ್ ಔಟಾಗದೆ 31 (49 ಎ, 4x2)

ಇತರೆ (ಲೆಗ್‌ಬೈ 1, ವೈಡ್ 11) 12

ವಿಕೆಟ್ ಪತನ

1-8 (ಹರ್ನೂರ್ ಸಿಂಗ್, 4.1)

ಬೌಲಿಂಗ್

ಯಾಸಿರು ರಾಡ್ರಿಗೊ 3–1–12–1, ಟ್ರೆವೀನ್ ಮ್ಯಾಥ್ಯೂ 2–1–2–0, ದುನಿತ್ ವೆಳ್ಳಲಗೆ 6–0–30–0, ಚಮಿಂದು ವಿಕ್ರಮಸಿಂಘೆ 2–0–11–0, ಮತೀಶ್ ಪತಿರನ 3.3–0–20–0, ರವೀನ್ ಡಿ ಸಿಲ್ವ 2–0–14–0, ಸದೀಶ್ ರಾಜಪಕ್ಸ 3–0–14–0

ಫಲಿತಾಂಶ: ಭಾರತ ತಂಡಕ್ಕೆ 9 ವಿಕೆಟ್‌ಗಳ ಜಯ; ಪ್ರಶಸ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು